ಲಕ್ಷ್ಮಿ ದೇವಿಯು ಸಂಪತ್ತು, ಚಿನ್ನ ಮತ್ತು ಅದೃಷ್ಟವನ್ನು ಸುರಿಸುವುದಕ್ಕಿಂತ ಹೆಚ್ಚಾಗಿ, ರಾತ್ರಿಯಲ್ಲಿ ಮೌನವಾಗಿ ಓಡಾಡುತ್ತಾ, ಅರ್ಹ ಸ್ಥಳಗಳನ್ನು ಹುಡುಕುತ್ತಾಳೆ. ಆಕೆ ಎಲ್ಲೆಲ್ಲಿ ಓಡಾಡ್ತಾಳೆ ಗೊತ್ತೆ?
ನಮ್ಮಲ್ಲಿ ಹೆಚ್ಚಿನವರು ಲಕ್ಷ್ಮಿ ದೇವಿಯ ಬಗ್ಗೆ ಯೋಚಿಸುವಾಗ, ದೀಪಾವಳಿ ರಾತ್ರಿಗಳಲ್ಲಿ ಸಂಪತ್ತು, ಚಿನ್ನ ಮತ್ತು ಅದೃಷ್ಟ ಸುರಿಯುವುದನ್ನು ಕಲ್ಪಿಸುತ್ತೇವೆ. ಆದರೂ ಅವಳು ಚಂಚಲೆ. ಸದಾ ಚಲಿಸುವವಳು. ಅವ್ಯವಸ್ಥೆ, ಅಶುದ್ಧತೆ ಅಥವಾ ದುರಾಸೆ ಇರುವಲ್ಲಿ ಅವಳು ಉಳಿಯುವುದಿಲ್ಲ. ಬದಲಾಗಿ ಅವಳು ರಾತ್ರಿಯಲ್ಲಿ ಮೌನವಾಗಿ ಓಡಾಡುತ್ತಾಳೆ. ಅವಳ ಕೃಪೆಗೆ ಅರ್ಹವಾದ ಸ್ಥಳಗಳನ್ನು ಹುಡುಕುತ್ತಾಳೆ. ಪದ್ಮ ಪುರಾಣ, ವಿಷ್ಣು ಪುರಾಣ ಮತ್ತು ಸ್ಕಂದ ಪುರಾಣದಂತಹ ಪುರಾಣಗಳು, ಮುಸ್ಸಂಜೆಯ ನಂತರ ಲಕ್ಷ್ಮಿದೇವಿಯು ಎಲ್ಲಿಗೆ ಪ್ರಯಾಣಿಸುತ್ತಾಳೆಂದು ತಿಳಿಸುತ್ತವೆ. ಇವು ಭೌತಿಕ ಸ್ಥಳಗಳು ಮಾತ್ರವಲ್ಲದೆ ಸಾಮರಸ್ಯ, ಶಿಸ್ತು ಮತ್ತು ಧರ್ಮ ಇರುವಲ್ಲಿ ಸಮೃದ್ಧಿ ಹೇಗೆ ಇರುತ್ತದೆ ಎಂಬುದನ್ನು ಸೂಚಿಸುತ್ತವೆ.
1) ಮನೆ ಶುದ್ಧವಾಗಿದ್ದಾಗ, ಬೆಳಕಿದ್ದಾಗ
ಪದ್ಮ ಪುರಾಣದ ಪ್ರಕಾರ, ಲಕ್ಷ್ಮಿದೇವಿ ರಾತ್ರಿಯಲ್ಲಿ ಸ್ವಚ್ಛವಾಗಿ, ಕ್ರಮಬದ್ಧವಾಗಿ ಮತ್ತು ದೀಪಗಳಿಂದ ಬೆಳಗಿದ ಮನೆಗಳಿಗೆ ಕಾಲಿಡುತ್ತಾಳೆ. ಕತ್ತಲೆ, ನಿರ್ಲಕ್ಷ್ಯ ಮತ್ತು ಅವ್ಯವಸ್ಥೆಗಳು ದರಿದ್ರಲಕ್ಷ್ಮಿಯನ್ನು ಆಹ್ವಾನಿಸುತ್ತವೆ. ಸೂರ್ಯಾಸ್ತದ ನಂತರ, ವಿಶೇಷವಾಗಿ ಕಾರ್ತಿಕ ಸಮಯದಲ್ಲಿ ಸಂಜೆ ಪ್ರಾರ್ಥನೆ ಮಾಡಬೇಕು ಮತ್ತು ದೀಪಗಳನ್ನು ಬೆಳಗಿಸಬೇಕು ಎನ್ನುವುದು ಇದಕ್ಕೇ. ಅಂದರೆ, ಶುದ್ಧತೆ ಮತ್ತು ಅರಿವು ಇರುವಲ್ಲಿ ಸಮೃದ್ಧಿ ಇರುತ್ತದೆ.
2) ಹೊಸ್ತಿಲು ದೈವಿಕತೆಗೆ ದ್ವಾರ
ಸ್ಕಂದ ಪುರಾಣವು ಮನೆಯ ಪ್ರವೇಶದ್ವಾರದ ಪಾವಿತ್ರ್ಯವನ್ನು ಒತ್ತಿಹೇಳುತ್ತದೆ. ಅದು ಬಾಹ್ಯ ಪ್ರಪಂಚ ಮತ್ತು ಒಳಗಿನ ಗರ್ಭಗುಡಿಯ ಭೇಟಿಯ ಸ್ಥಳ. ರಾತ್ರಿಯಲ್ಲಿ, ಲಕ್ಷ್ಮಿದೇವಿ ಹೊಸ್ತಿಲಲ್ಲಿ ನಿಂತು ಪ್ರವೇಶಿಸಬೇಕೆ ಇಲ್ಲವೆ ಎಂದು ನಿರ್ಧರಿಸುತ್ತಾಳೆ. ಕುಟುಂಬಗಳು ದ್ವಾರವನ್ನು ರಂಗೋಲಿಯಿಂದ ಅಲಂಕರಿಸುವುದು ಮತ್ತು ಮುಸ್ಸಂಜೆಯ ನಂತರ ದೀಪಗಳನ್ನು ಬೆಳಗುವುದು ಇದಕ್ಕೇ. ಹೊಸ್ತಿಲು ಕೇವಲ ವಾಸ್ತುಶಿಲ್ಪವಲ್ಲ. ಇದು ಸಂಪತ್ತು ಮತ್ತು ಸಾಮರಸ್ಯವನ್ನು ಹೆಚ್ಚಿಸಲು ಸಾಂಕೇತಿಕ ಆಹ್ವಾನ.
3) ಮಧ್ಯರಾತ್ರಿಯಲ್ಲಿ ನದಿ ದಂಡೆಯಲ್ಲಿ
ನದಿ ದಂಡೆಗಳು, ವಿಶೇಷವಾಗಿ ಗಂಗಾ, ಯಮುನಾ, ಗೋದಾವರಿ ಮತ್ತು ಕಾವೇರಿ, ಮುಸ್ಸಂಜೆಯ ನಂತರ ಲಕ್ಷ್ಮಿದೇವಿಯ ಉಪಸ್ಥಿತಿ ಹೊಂದಿರುತ್ತವೆ. ಜಾನಪದ ಕಥೆಯ ಪ್ರಕಾರ ಅವಳು ಮಧ್ಯರಾತ್ರಿಯಲ್ಲಿ ಕಮಲದ ಮೇಲೆ ಇಳಿದು ತಂಗುತ್ತಾಳೆ. ನದಿಗಳ ಶುದ್ಧತೆ ಮುಖ್ಯ ಎಂಬುದು ನಮಗೆ ಇಲ್ಲಿ ತಿಳಿಯುತ್ತದೆ. ವಾರಣಾಸಿಯಲ್ಲಿ ಇರುವ ದಂತಕಥೆಗಳ ಪ್ರಕಾರ ಹುಣ್ಣಿಮೆಯ ರಾತ್ರಿಗಳಲ್ಲಿ ಘಾಟ್‌ಗಳಲ್ಲಿ ಅವಳ ಉಪಸ್ಥಿತಿ ಇರುತ್ತೆ. ನದಿಗಳಿಲ್ಲದೆ, ಯಾವುದೇ ನಾಗರಿಕತೆ ಅಥವಾ ಸಂಪತ್ತು ಉಳಿಯಲು ಸಾಧ್ಯವಿಲ್ಲ.
4) ಆಹಾರಧಾನ್ಯದ ಸಂಗ್ರಹ
ಕೃಷಿ ಸಂಪ್ರದಾಯಗಳಲ್ಲಿ ಲಕ್ಷ್ಮಿಯನ್ನು ಧನಲಕ್ಷ್ಮಿ ಎಂದು ಪೂಜಿಸಲಾಗುತ್ತದೆ ಹಾಗೇ ಧಾನ್ಯಲಕ್ಷ್ಮಿ ಎಂದೂ ಸಮಾನವಾಗಿ ಪೂಜಿಸಲಾಗುತ್ತದೆ. ವಿಷ್ಣು ಪುರಾಣವು ಕೃಷಿ ಸಮೃದ್ಧಿಯೊಂದಿಗಿನ ಅವಳ ಸಂಪರ್ಕವನ್ನು ಸೂಚಿಸುತ್ತದೆ. ರಾತ್ರಿಯಲ್ಲಿ ಅವಳು ಧಾನ್ಯ ಸಂಗ್ರಹಣಾ ಕೊಠಡಿಗಳು ಮತ್ತು ಗೋದಾಮುಗಳನ್ನು ಪ್ರವೇಶಿಸುತ್ತಾಳೆ. ಅವುಗಳನ್ನು ಕಾಳಜಿ ಮತ್ತು ಭಕ್ತಿಯಿಂದ ನಿರ್ವಹಿಸುವವರನ್ನು ಆಶೀರ್ವದಿಸುತ್ತಾಳೆ. ನಿರ್ಲಕ್ಷಿಸಲ್ಪಟ್ಟ ಅಥವಾ ವ್ಯರ್ಥವಾದ ಆಹಾರ ಕಂಡರೆ ಆಕೆಗೆ ಜಿಗುಪ್ಸೆ. ಸಮೃದ್ಧಿಯ ನಿಜವಾದ ಅಡಿಪಾಯ ಆಹಾರ ಭದ್ರತೆ ಮತ್ತು ಸಂಪನ್ಮೂಲಗಳ ಜವಾಬ್ದಾರಿಯುತ ಉಸ್ತುವಾರಿ.
5) ದೇವಾಲಯಗಳ ಅಖಂಡ ನಂದಾದೀಪಗಳು
ಭಾರತದಾದ್ಯಂತ ವಿಷ್ಣು ಮತ್ತು ಲಕ್ಷ್ಮಿ ದೇವಾಲಯಗಳಲ್ಲಿ ಪುರೋಹಿತರು ಅಖಂಡ ಜ್ಯೋತಿಯನ್ನು ನಿರ್ವಹಿಸುತ್ತಾರೆ. ಇವು ರಾತ್ರಿಯಿಡೀ ಉರಿಯುತ್ತಿರುವ ದೀಪಗಳು. ಕೊಟ್ಟಕೊನೆಯ ಭಕ್ತನೂ ಹೊರಟುಹೋದ ಮೇಲೆ ಲಕ್ಷ್ಮಿ ಸ್ವತಃ ಈ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತಾಳೆ, ನಂದಾದೀಪದಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ತಿರುಪತಿ ಮತ್ತು ತಿರುಚನೂರಿನಲ್ಲಿ, ಅವಳ ರಾತ್ರಿಯ ಉಪಸ್ಥಿತಿಯನ್ನು ನಿರಂತರ ದೀಪಗಳ ಮೂಲಕ ಆಹ್ವಾನಿಸಲಾಗುತ್ತದೆ.
6) ಸಾಮರಸ್ಯದ, ವಂಚನೆಯಿಲ್ಲದ ವ್ಯವಹಾರ
ವಿಷ್ಣು ಪುರಾಣವು ಲಕ್ಷ್ಮಿಯು ಧರ್ಮವನ್ನು ಎತ್ತಿಹಿಡಿಯುವ, ಸತ್ಯವನ್ನು ಮಾತನಾಡುವ ಮತ್ತು ಸಾಮರಸ್ಯವು ಮೇಲುಗೈ ಸಾಧಿಸುವ ಸಮುದಾಯಗಳನ್ನು ಬಯಸುತ್ತದೆ ಎಂದು ಹೇಳುತ್ತದೆ. ರಾತ್ರಿಯಲ್ಲಿ ಅವಳು ಅಂತಹ ಹಳ್ಳಿಗಳು ಮತ್ತು ಪಟ್ಟಣಗಳ ಮೂಲಕ ಸಾಗಿ ಸಾಮೂಹಿಕ ಯೋಗಕ್ಷೇಮವನ್ನು ಆಶೀರ್ವದಿಸುತ್ತಾಳೆ. ನಿರಂತರ ಜಗಳ, ಅಪ್ರಾಮಾಣಿಕತೆ ಅಥವಾ ಅನ್ಯಾಯ ಇರುವಲ್ಲಿ ಅವಳು ನಿರ್ಗಮಿಸುತ್ತಾಳೆ.
7) ಕಾಡುಗಳಲ್ಲಿನ ಸಣ್ಣ ದೇವಾಲಯಗಳು
ಒಡಿಶಾ, ಬಂಗಾಳ ಮತ್ತು ಮಧ್ಯ ಭಾರತದ ಸ್ಥಳೀಯ ಸಂಪ್ರದಾಯಗಳ ಪ್ರಕಾರ, ಪೌಷ ಪೂರ್ಣಿಮೆಯಂತಹ ರಾತ್ರಿಗಳಲ್ಲಿ ಕಾಡುಗಳಲ್ಲಿ ಅಡಗಿರುವ ಸಣ್ಣ ದೇವಾಲಯಗಳಲ್ಲಿ ಲಕ್ಷ್ಮಿಗಾಗಿ ದೀಪಗಳನ್ನು ಬೆಳಗಲಾಗುತ್ತದೆ. ಅವಳು ಸದ್ದಿಲ್ಲದೆ ಬಂದು ಮಣ್ಣು, ಬೆಳೆಗಳು ಮತ್ತು ಕಾಡುಗಳನ್ನು ಆಶೀರ್ವದಿಸುತ್ತಾಳೆ ಎಂದು ಜನ ನಂಬುತ್ತಾರೆ. ಲಕ್ಷ್ಮಿದೇವಿ ಅರಮನೆಗಳು ಅಥವಾ ಭವ್ಯ ದೇವಾಲಯಗಳಿಗೆ ಸೀಮಿತವಾಗಿಲ್ಲ ಎಂಬುದು ಇದರ ಅರ್ಥ. ಆಕೆ ನೈಸರ್ಗಿಕ ಸ್ಥಳಗಳ ಪ್ರಿಯೆ. ಸಂಪತ್ತು ಭೂಮಿಯ ಫಲವತ್ತತೆ ಮತ್ತು ಸಮೃದ್ಧಿ ಬೇರ್ಪಡಿಸಲಾಗದು.


