ಬೆಂಗಳೂರು ಯೋಜಿತ ನಗರವಲ್ಲ. ಆದರೂ ನಾವು ಇದನ್ನು ಪ್ರಗತಿಯತ್ತ ಮುನ್ನಡೆಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಬೆಂಗಳೂರು (ಮೇ.31): ಬೆಂಗಳೂರು ಯೋಜಿತ ನಗರವಲ್ಲ. ಆದರೂ ನಾವು ಇದನ್ನು ಪ್ರಗತಿಯತ್ತ ಮುನ್ನಡೆಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು. ಕಾಸಿಯಾ, ಎಫ್‌ಕೆಸಿಸಿಐ ಮತ್ತು ಪೀಣ್ಯ ಕೈಗಾರಿಕೆಗಳ ಒಕ್ಕೂಟ ಸಂಯುಕ್ತವಾಗಿ ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಇಂಡಿಯಾ ಎಂಎಸ್ಎಂಇ ಸಮಾವೇಶ-2025’ದಲ್ಲಿ ಅವರು ಮಾತನಾಡಿದರು. ರಾಜಧಾನಿ ಜನಸಂಖ್ಯೆ 1.50 ಕೋಟಿಗೆ ಏರಿಕೆಯಾಗಿದೆ. ಆದರೆ ರಸ್ತೆಗಳ ಸಾಮರ್ಥ್ಯ ಹಾಗೇ ಇದೆ. ಇದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ.

ಹೀಗಾಗಿ ಬೆಂಗಳೂರಿನಲ್ಲಿ ಬದಲಾವಣೆ ತರಲು ಕಳೆದ ಎರಡು ವರ್ಷಗಳಿಂದ ನಾನು ಯೋಜನೆ ರೂಪಿಸುತ್ತಿದ್ದೇನೆ. ಮೆಟ್ರೋ ಯೋಜನೆಗೆ 44 ಸಾವಿರ ಕೋಟಿ, ಟನಲ್ ರಸ್ತೆಗೆ 37 ಸಾವಿರ ಕೋಟಿ ಅದರಲ್ಲಿ ಮೊದಲನೇ ಹಂತಕ್ಕೆ 17 ಸಾವಿರ ಕೋಟಿ ಹಾಗೂ ಎಲಿವೇಟೆಡ್ ಕಾರಿಡಾರ್‌ಗಳಿಗೆ 14 ಸಾವಿರ ಕೋಟಿ ರು.ಗಳ ಮೊತ್ತದ ಯೋಜನೆಗಳನ್ನು ರೂಪಿಸಲಾಗಿದೆ. ಒಟ್ಟಾರೆಯಾಗಿ ಮುಂದಿನ ನಾಲ್ಕೈದು ವರ್ಷಗಳಲ್ಲಿ ಬೆಂಗಳೂರಿನ ಅಭಿವೃದ್ಧಿಗೆ 1 ಲಕ್ಷ ಕೋಟಿ ರು.ಗಳಿಗೂ ಹೆಚ್ಚು ಹಣ ಹೂಡಿಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಎಂಎಸ್‌ಎಂಇ, ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ಸಣ್ಣ ಕೈಗಾರಿಕೆಗಳ ಸಚಿವ ಶರಣಬಸಪ್ಪ ದರ್ಶನಾಪುರ, ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ, ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್‌, ಪೀಣ್ಯ ಕೈಗಾರಿಕೆ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆರ್‌. ಶಿವಕುಮಾರ್‌, ಎಂಎಸ್‌ಎಂಇ ನಿರ್ದೇಶಕ ನಿತೇಶ್‌ ಪಾಟೀಲ್‌ ಮತ್ತಿತರರು ಉಪಸ್ಥಿತರಿದ್ದರು.

ಎಂಎಸ್‌ಎಂಇ- ಬ್ಯಾಂಕು ಮುಖ್ಯಸ್ಥರದೊಂದಿಗೆ ಶೀಘ್ರ ಸಭೆ: ಕೇಂದ್ರ ಎಂಎಸ್‌ಎಂಇ, ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರ ಅಗತ್ಯ ಪ್ರೋತ್ಸಾಹ ನೀಡುತ್ತಿದೆ. ಈ ಸಂಸ್ಥೆಗಳಿಗೆ ಅಗತ್ಯ ಸಾಲಸೌಲಭ್ಯ ಒದಗಿಸಿಕೊಡಲು ಶೀಘ್ರದಲ್ಲೇ ಎಲ್ಲಾ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ದೇಶದ ಅಭಿವೃದ್ಧಿಗೆ, ಆರ್ಥಿಕತೆ ಬೆಳವಣಿಗೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪಾತ್ರ ಮಹತ್ವದ್ದಾಗಿದೆ. ಹಾಗಾಗಿ ಕೈಗಾರಿಕೆಗಳಿಗೆ ಬ್ಯಾಂಕುಗಳು ಆದ್ಯತೆ ಮೇಲೆ ಸಾಲ ಸೌಲಭ್ಯ ಒದಗಿಸಬೇಕು. ಯಾವುದೇ ಕಾರಣ ಕೊಟ್ಟು ಸಾಲದ ಅರ್ಜಿ ತಿರಸ್ಕರಿಸಬಾರದು. ಈ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಒಟ್ಟುಗೂಡಿಸಿ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲು ಸಿದ್ಧವಾಗಿದ್ದೇನೆ. ವಿಕಸಿತ ಭಾರತಕ್ಕೆ ಎಲ್ಲರೂ ಒಟ್ಟಾಗಿ ಸಹಕಾರ ನೀಡಬೇಕು ಎಂದರು.

2032ರ ವೇಳೆಗೆ 1 ಟ್ರಿಲಿಯನ್‌ ಡಾಲರ್‌ ಮೌಲ್ಯದ ಆರ್ಥಿಕತೆ ಗುರಿ: ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಮಾತನಾಡಿ, ರಾಜ್ಯ ಸರ್ಕಾರವು ಎಂಎಸ್‌ಎಂಇ ಉತ್ತೇಜನಕ್ಕೆ ‘ಎಂಎಸ್‌ಎಂಇ ಕನೆಕ್ಟ್‌’ ಮತ್ತು ‘ವೆಂಚುರೈಸ್‌’ ಎಂಬ ರಚನಾತ್ಮಕ ಉಪಕ್ರಮಗಳನ್ನು ಕೈಗೊಂಡಿದೆ. ಈ ಕಾರ್ಯಕ್ರಮಗಳಡಿ 1800 ಉದ್ದಿಮೆಗಳಿಗೆ ನೆರವು ಒದಗಿಸುತ್ತಿದ್ದು, 60 ಉದ್ದಿಮೆಗಳು ಈಗಾಗಲೇ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿವೆ. ನವೋದ್ಯಮಗಳು ಮತ್ತು ಸಣ್ಣ ಕೈಗಾರಿಕೆಗಳಿಗೆ ಮಾರ್ಗದರ್ಶನ ಮತ್ತು ಆರ್ಥಿಕ ನಿಧಿ ಕೊಡಲಾಗುತ್ತಿದೆ ಎಂದು ಹೇಳಿದರು.

2029ರ ವೇಳೆಗೆ ರಾಜ್ಯವು ತಯಾರಿಕಾ ವಲಯದಲ್ಲಿ ಶೇ.12ರಷ್ಟು ಬೆಳವಣಿಗೆ ಸಾಧಿಸುವ ಮೂಲಕ 20 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು. ಜೊತೆಗೆ 2 ಮತ್ತು 3ನೇ ಹಂತದ ನಗರಗಳಲ್ಲಿ ಉದ್ಯಮಗಳು ನೆಲೆಯೂರುವಂತೆ ಮಾಡಲು ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗುತ್ತಿದೆ. 2032ರ ಹೊತ್ತಿಗೆ ರಾಜ್ಯವು 1 ಟ್ರಿಲಿಯನ್‌ ಡಾಲರ್‌ ಮೌಲ್ಯದ ಆರ್ಥಿಕತೆಯಾಗಿ ಬೆಳೆಸುವ ಗುರಿ ಹೊಂದಲಾಗಿದೆ. ಇದು ಸಾಧ್ಯವಾಗಬೇಕೆಂದರೆ ಎಂಎಸ್‌ಎಂಇ ವಲಯ ಶಕ್ತವಾಗಿರಬೇಕು ಎಂದರು.