ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ, ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮತ್ತು ಇಬ್ಬರು ಸಹಚರರು 57 ಉದ್ಯೋಗಾಕಾಂಕ್ಷಿಗಳಿಂದ 1.83 ಕೋಟಿ ರೂ. ಪಡೆದು ವಂಚಿಸಿದ್ದಾರೆ. ಸಂತ್ರಸ್ತರ ದೂರಿನ ಮೇರೆಗೆ ನ್ಯಾಯಾಲಯದ ಆದೇಶದಂತೆ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು: ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ನೂರಾರು ಉದ್ಯೋಗಾಕಾಂಕ್ಷಿಗಳಿಂದ 1.83 ಕೋಟಿ ರು. ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿ ಸೇರಿ ಮೂವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿ ಎನ್ನಲಾದ ಡಾ.ವೈ. ರಮೇಶ್‌, ರಾಘವೇಂದ್ರ ಹಾಗೂ ಬಿ.ಎಸ್‌. ಧ್ರುವಕುಮಾರ್‌ ಮೇಲೆ ಮೋಸದ ಆರೋಪ ಬಂದಿದ್ದು, ಈ ಸಂಬಂಧ ಎನ್‌. ಸುರೇಂದ್ರನಾಥ್‌ ರಾವ್‌ ಮಿರ್ಜಾಕರ್‌ ಎಂಬುವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳಿಗೆ ವಿಚಾರಣೆಗೆ ಬರುವಂತೆ ಸಿಸಿಬಿ ನೋಟಿಸ್ ಜಾರಿಗೊಳಿಸಿದೆ.

ಗ್ರೂಪ್ ಬಿ,ಡಿ ಸೇರಿದಂತೆ ಇತರೆ ಉದ್ಯೋಗ

ಆರು ವರ್ಷಗಳ ಹಿಂದೆ ಸ್ನೇಹಿತರ ಮೂಲಕ ಆರ್‌ಎಂವಿ ಬಡಾವಣೆಯ ಸುರೇಂದ್ರನಾಥ್‌ ಅವರಿಗೆ ರಮೇಶ್‌ ಪರಿಚಯವಾಗಿದೆ. ಆಗ ತಾನು ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿ ಹಾಗೂ ಸರಕಾರಿ ಕಾಲೇಜು ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂದು ರಮೇಶ್ ಹೇಳಿಕೊಂಡಿದ್ದರು. ನಂತರ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಗ್ರೂಪ್‌ ಬಿ,ಡಿ ಸೇರಿದಂತೆ ಇತರೆ ಉದ್ಯೋಗಳನ್ನು ಕೊಡಿಸುವುದಾಗಿ ಸುರೇಂದ್ರ ಅವರಿಗೆ ರಮೇಶ್ ಆಶ್ವಾಸನೆ ಕೊಟ್ಟಿದ್ದ ಎನ್ನಲಾಗಿದೆ.

ಈ ಮಾತು ನಂಬಿದ ಸುರೇಂದ್ರ ಅವರು, ತಮ್ಮ ಸಂಬಂಧಿಕರ ಮಕ್ಕಳಿಗೆ ವಿಚಾರ ತಿಳಿಸಿದ್ದರು. ಮೊದಲ ಹಂತದಲ್ಲಿ 21 ಮಂದಿ 51 ಲಕ್ಷ ರು. ಅನ್ನು ಸಂಗ್ರಹಿಸಿ ರಮೇಶ್‌ಗೆ ಅವರು ಕೊಟ್ಟಿದ್ದರು. ಇದಾದ ಬಳಿಕ ಮತ್ತಷ್ಟು 36 ಮಂದಿ ಹಣ ಕೊಟ್ಟಿದ್ದರು. ಹೀಗೆ 2019-23 ಅವಧಿಯಲ್ಲಿ ಒಟ್ಟು 57 ಮಂದಿಯಿಂದ ರಮೇಶ್‌ ಹಾಗೂ ಅವರ ಸ್ನೇಹಿತರಾದ ರಾಘವೇಂದ್ರ ಅವರಿಗೆ 1.83 ಕೋಟಿ ರು. ಪಾವತಿಯಾಗಿದೆ ಎಂದು ದೂರಿನಲ್ಲಿ ಸಂತ್ರಸ್ತರು ಉಲ್ಲೇಖಿಸಿದ್ದಾರೆ.

ಹಣ ಕೇಳಿದ್ದಕ್ಕೆ ಬೆದರಿಕೆ

ಆದರೆ ಈ ಹಣ ಸಂದಾಯದ ಬಳಿಕ ರಮೇಶ್ ಗ್ಯಾಂಗ್ ವರಸೆ ಬದಲಾಯಿಸಿದೆ. ಏನಾದರೂ ಸಬೂಬು ಹೇಳಿ ಸುರೇಂದ್ರ ಅವರಿಂದ ಜಾರಿಕೊಳ್ಳಲು ಯತ್ನಿಸಿದ್ದಾರೆ. ಹಣ ಕೇಳಿದರೆ ಬೆದರಿಕೆ ಹಾಕಿದ್ದಾರೆ. ಕೊನೆಗೆ ಸಂತ್ರಸ್ತರು ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದ ಆದೇಶದ ಮೇರೆಗೆ ಸಿಸಿಬಿ ತನಿಖೆ ಕೈಗೆತ್ತಿಕೊಂಡಿದೆ.