ಯೋಜನೆ ಹಾಗೂ ಸಾಂಖ್ಯಿಕ ಸಚಿವ ಡಿ.ಸುಧಾಕರ್‌ ಅವರು ಮೊಣಕಾಲು ಶಸ್ತ್ರಚಿಕಿತ್ಸೆ ನಂತರ ಶ್ವಾಸಕೋಶದ ಸೋಂಕಿನಿಂದ ಪ್ರಜ್ಞಾಹೀನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಶ್ವಾಸಕೋಶ ಕಸಿಗೆ ಸೂಚಿಸಿದ್ದಾರೆ. 

ಬೆಂಗಳೂರು: ಶ್ವಾಸಕೋಶದ ಸೋಂಕಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಯೋಜನೆ ಹಾಗೂ ಸಾಂಖ್ಯಿಕ ಸಚಿವ ಹಾಗೂ ಹಿರಿಯೂರು ಶಾಸಕ ಡಿ.ಸುಧಾಕರ್‌ ಅವರ ಶ್ವಾಸಕೋಶದ ಕಸಿಗೆ ವೈದ್ಯರು ಸೂಚಿಸಿದ್ದಾರೆ. ಸದ್ಯ ಅವರಿಗೆ ಪ್ರಜ್ಞೆ ಇಲ್ಲ. ಇನ್ನೆರಡು ದಿನಗಳಲ್ಲಿ ಪ್ರಜ್ಞೆ ಬಂದ ಬಳಿಕ ಈ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದ ಸಿಎಂ

ಕಳೆದ ಕೆಲ ದಿನಗಳಿಂದ ಎಲೆಕ್ಟ್ರಾನಿಕ್‌ ಸಿಟಿಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಡಿ.ಸುಧಾಕರ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಸಿದ್ದರಾಮಯ್ಯ ಅವರು ಡಿ.ಸುಧಾಕರ್‌ ಆರೋಗ್ಯದ ಮಾಹಿತಿ ಪಡೆದರು. ಜತೆಗೆ ಡಿ. ಸುಧಾಕರ್‌ ಕುಟುಂಬಸ್ಥರೊಂದಿಗೂ ಮಾತುಕತೆ ನಡೆಸಿ ಧೈರ್ಯ ತುಂಬಿದರು. ಈ ವೇಳೆ ಸಚಿವರಾದ ಜಮೀರ್‌ ಅಹಮದ್ ಖಾನ್‌, ಬಿ.ಎಸ್‌. ಸುರೇಶ್‌, ವಿಧಾನಸಭೆ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕ ಕೆ.ಎಸ್‌. ಬಸವಂತಪ್ಪ ಇತರರಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಚಿವ ಸುಧಾಕರ್‌ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದೆ. ಆದರೆ, ಅವರಿಗೆ ಪ್ರಜ್ಞೆ ಬಂದಿಲ್ಲ. ವೈದ್ಯರು ಶ್ವಾಸಕೋಶದ ಕಸಿ ಮಾಡುವಂತೆ ತಿಳಿಸಿದ್ದು, ಅದಕ್ಕೆ ಪ್ರಜ್ಞೆ ಬರುವುದು ಅಗತ್ಯ. ಇನ್ನೆರಡು ದಿನಗಳಲ್ಲಿ ಪ್ರಜ್ಞೆ ಬಂದು ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎಂದರು.

ಕಳೆದ ಕೆಲ ದಿನಗಳಿಂದ ಸುಧಾಕರ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಶ್ವಾಸಕೋಶದಲ್ಲಿ ಸೋಂಕು ಕೊಂಚ ಉಲ್ಬಣಗೊಂಡ ಕಾರಣ ಎಲೆಕ್ಟ್ರಾನಿಕ್ಸ್‌ ಸಿಟಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆಂದು ಆಸ್ಪತ್ರೆ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿತ್ತು.

Scroll to load tweet…

ಮೊಣಕಾಲು ಆಪರೇಷನ್ ಸಂಬಂಧ ಸಚಿವ ಸುಧಾಕರ್​​ ಅವರು ಬೆಂಗಳೂರಿನ ಯಶವಂತಪುರ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಶಸ್ತ್ರಚಿಕಿತ್ಸೆ ನಂತರ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡು ಆರೋಗ್ಯದ ಸ್ಥಿತಿ ಗಂಭೀರವಾಗಿದೆ.

ರೆಹಮಾನ್‌ ಖಾನ್‌ ಮನೆಗೆ ಸಿಎಂ:

ಇದಕ್ಕೂ ಮುನ್ನ ವಯೋಸಹಜ ಕಾಯಿಲೆಯಿಂದ ತಮ್ಮ ನಿವಾಸದಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ರಾಜ್ಯಸಭಾ ಮಾಜಿ ಸದಸ್ಯ ರೆಹಮಾನ್‌ ಖಾನ್‌ ಅವರ ಆರೋಗ್ಯವನ್ನು ಸಿದ್ದರಾಮಯ್ಯ ವಿಚಾರಿಸಿದರು. ಜಯನಗರದ ರೆಹಮಾನ್‌ ಖಾನ್‌ ಅವರ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ ನೀಡಿ ಆರೋಗ್ಯದ ಮಾಹಿತಿ ಪಡೆದರು.

ಆರೋಗ್ಯ ಸ್ಥಿರ

ಸಚಿವ ಸುಧಾಕರ್‌ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದೆ. ಆದರೆ, ಅವರಿಗೆ ಪ್ರಜ್ಞೆ ಬಂದಿಲ್ಲ. ವೈದ್ಯರು ಶ್ವಾಸಕೋಶದ ಕಸಿ ಮಾಡುವಂತೆ ತಿಳಿಸಿದ್ದು, ಅದಕ್ಕೆ ಪ್ರಜ್ಞೆ ಬರುವುದು ಅಗತ್ಯ. ಇನ್ನೆರಡು ದಿನಗಳಲ್ಲಿ ಪ್ರಜ್ಞೆ ಬಂದು ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Scroll to load tweet…