ಬೆಂಗಳೂರಿನ ಪ್ರೆಸ್ಟೀಜ್ ಫಾಲ್ಕನ್ ಸಿಟಿಯಲ್ಲಿ ಬಿಗ್‌ಬಾಸ್ಕೆಟ್ ಮತ್ತು ಸ್ಕೈ ಏರ್ ಮೊಬಿಲಿಟಿ ಡ್ರೋನ್‌ಗಳ ಮೂಲಕ ಕಿರಾಣಿ, ಔಷಧಿಗಳನ್ನು 5-10 ನಿಮಿಷಗಳಲ್ಲಿ ವಿತರಿಸುತ್ತಿವೆ. 7 ಕೆಜಿಗಿಂತ ಕಡಿಮೆ ತೂಕದ ವಸ್ತುಗಳನ್ನು ಡ್ರೋನ್ ಮೂಲಕ ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ವಿತರಿಸಲಾಗುತ್ತಿದೆ. ಇದು ಟ್ರಾಫಿಕ್, ಮಾಲಿನ್ಯ ಕಡಿಮೆ ಮಾಡುತ್ತದೆ ಹಾಗೂ ವೇಗದ ವಿತರಣೆಗೆ ಸಹಕಾರಿ. ಈ ಸೇವೆಯನ್ನು ಇತರೆ ವಸತಿ ಪ್ರದೇಶಗಳಿಗೂ ವಿಸ್ತರಿಸಲು ಯೋಜಿಸಲಾಗಿದೆ.

ದಕ್ಷಿಣ ಬೆಂಗಳೂರಿನ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್ ಸಂಕೀರ್ಣವು ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಬಿಗ್‌ಬಾಸ್ಕೆಟ್, ಡ್ರೋನ್ ಲಾಜಿಸ್ಟಿಕ್ಸ್ ಸಂಸ್ಥೆ ಸ್ಕೈ ಏರ್ ಮೊಬಿಲಿಟಿ ಸಹಭಾಗಿತ್ವದಲ್ಲಿ ಡ್ರೋನ್‌ ಬಳಸಿಕೊಂಡು ಕಿರಾಣಿ, ಔಷಧಿಗಳು, ದೈನಂದಿನ ಅಗತ್ಯ ವಸ್ತುಗಳನ್ನು 5 ರಿಂದ 10 ನಿಮಿಷಗಳಲ್ಲಿ ವಿತರಿಸುತ್ತಿದೆ. ಅತಿ ಬೇಗ ಡೆಲಿವರಿ ಮಾಡಲು, ದಕ್ಷತೆಯನ್ನು ಸುಧಾರಿಸಲು, ಅಪಾರ್ಟ್‌ಮೆಂಟ್‌ ಸುತ್ತಮುತ್ತ ಟ್ರಾಫಿಕ್‌ ಕಡಿಮೆ ಮಾಡಲು ಈ ದಾರಿ ಕಂಡುಕೊಳ್ಳಲಾಗಿದೆ. ಈ ಹಿಂದೆ ಡೆಲಿವರಿ ಬಾಯ್‌ಗಳು ಅಪಾರ್ಟ್‌ಮೆಂಟ್‌ ಸುತ್ತಮುತ್ತ ಓಡಾಡಬೇಕಾದಾಗ ಗೇಟ್‌ ಮುಂದೆ, ಜಾಸ್ತಿ ಟ್ರಾಫಿಕ್‌ ಜಾಮ್‌ ಆಗುತ್ತಿತ್ತು. ಇದರಿಂದ ವೆಹಿಕಲ್‌ಗಳಿಂದ ಆಗುವ ವಾಯು ಮಾಲಿನ್ಯ ಕೂಡ ಕಡಿಮೆ ಆಗುತ್ತದೆ.

ಹೇಗೆ ಡೆಲಿವರಿ ಮಾಡಲಾಗುತ್ತದೆ?
ಅಪಾರ್ಟ್‌ಮೆಂಟ್ ಸಂಕೀರ್ಣದ 5 ಕಿ.ಮೀ. ವ್ಯಾಪ್ತಿಯೊಳಗಡೆ ಬಿಗ್‌ಬಾಸ್ಕೆಟ್ ಶೇಖರಣಾ ಸೌಲಭ್ಯ ಇದೆ. ಅಪಾರ್ಟ್‌ಮೆಂಟ್‌ನ ಎಲ್ಲ ಆರ್ಡರ್‌ಗಳು ಈ ಸೌಲಭ್ಯದ ಮೂಲಕ ಡೆಲಿವರಿ ಆಗುತ್ತದೆ. ಆಕಾಶದಲ್ಲಿ ಹಾರಾಡುವ ಡ್ರೋನ್‌ಗಳು ಡಿಜಿಸಿಎ ಅನುಮೋದನೆಯನ್ನು ಪಡೆದಿವೆ. ಡ್ರೋನ್‌ಗಳು ಎಷ್ಟು ಗಂಟೆಗೆ ಹೊರಟಿವೆ, ಯಾವಾಗ ಬರುತ್ತವೆ ಎನ್ನುವ ಟ್ರ್ಯಾಕಿಂಗ್‌ ಕೂಡ ಸಿಗುತ್ತದೆ. ಈ ಬಗ್ಗೆ ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ದಕ್ಷಿಣ ಅಧ್ಯಕ್ಷ,ಫಾಲ್ಕನ್ ಸಿಟಿ RWA ಸದಸ್ಯ ಅವಿನಾಶ್ ಎಚ್‌ವಿ ತಿಳಿಸಿದ್ದಾರೆ.

ಪಾರ್ಸೆಲ್ ಎಷ್ಟು KG ತೂಕ ಇರಬೇಕು?
ಫಾಲ್ಕನ್ ಸಿಟಿಯೊಳಗಡೆ ಇರುವ ಸಿಬ್ಬಂದಿ ಸದಸ್ಯರು ಡ್ರೋನ್ ಪ್ಯಾಕೇಜ್‌ಗಳನ್ನು ಸ್ವೀಕರಿಸಿ, ನಿವಾಸಿಗಳಿಗೆ ಸುಗಮವಾಗಿ ಹಸ್ತಾಂತರಿಸುತ್ತಾರೆ. 7 ಕೆಜಿಗಿಂತ ಕಡಿಮೆ ತೂಕದ ಆರ್ಡರ್‌ಗಳು ಡ್ರೋನ್ ವಿತರಣೆ ಆಗುತ್ತವೆ. ಬೇಡಿಕೆಗೆ ತಕ್ಕಂತೆ ಒಂದಕ್ಕಿಂತ ಜಾಸ್ತಿ ಆರ್ಡರ್‌ಗಳನ್ನು ಒಟ್ಟಿಗೆ ಅಥವಾ ವೈಯಕ್ತಿಕವಾಗಿ ಕಳುಹಿಸಬಹುದು. ಡ್ರೋನ್‌ಗಳಲ್ಲಿ ಕ್ಯಾಮೆರಾ ಇರೋದಿಲ್ಲ, ಸಮುದಾಯ-ಸ್ನೇಹಿಯಾಗಿವೆ, ಸ್ಯಾಟಲೈಟ್ ಸಂಪರ್ಕದೊಂದಿಗೆ ಕಾರ್ಯನಿರ್ವಹಿಸುತ್ತವೆ. “ಪ್ರತಿ ಡೆಲಿವರಿಗೆ 5 ರಿಂದ 10 ನಿಮಿಷಗಳು ಬೇಕಾಗುತ್ತದೆ. ಡೆಲಿವರಿಯು ಪ್ರತಿದಿನ ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಲಭ್ಯವಿದೆ. ಗ್ರಾಹಕರಿಗೆ ಜಾಸ್ತಿ ಖರ್ಚು ತಗುಲುವುದಿಲ್ಲ” ಎಂದು ಅವಿನಾಶ್ ಹೇಳಿದ್ದಾರೆ.

ಸ್ಕೈ ಏರ್ ಮೊಬಿಲಿಟಿಯು ಮುಂದಿನ 3 ತಿಂಗಳುಗಳಲ್ಲಿ ಕನಿಷ್ಠ 20 ಹೆಚ್ಚಿನ ವಸತಿ ಗೃಹಗಳಿಗೆ, ತನ್ನ ಡ್ರೋನ್ ವಿತರಣಾ ಸೇವೆಯನ್ನು ವಿಸ್ತರಿಸಲು ಯೋಜನೆ ಹಾಕಿದೆ. ಇದು ಏರಿಯಲ್ ಲಾಜಿಸ್ಟಿಕ್ಸ್ ಮೂಲಕ ವೇಗ, ದಕ್ಷತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. “ಈಗ ದಿನಕ್ಕೆ 40–50 ಪಾರ್ಸೆಲ್‌ ಕಳಿಸುತ್ತಿದ್ದೇವೆ. ಕ್ವಿಕ್ ಕಾಮರ್ಸ್‌ನಲ್ಲಿ ವೇಗವೇ ಪ್ರಮುಖವಾಗಿದೆ. ಈ ಕಂಪನಿಯು ಜಯನಗರ, ಬನ್ನೇರಘಟ್ಟ ರಸ್ತೆ, ಎಲೆಕ್ಟ್ರಾನಿಕ್ ಸಿಟಿಯಂತಹ ಬೆಂಗಳೂರಿನ ಕೆಲ ನಗರಗಳಿಗೆ ಈ ಸೇವೆ ಕೊಡಬೇಕು ಎಂದು ಗುರಿ ಇಟ್ಟುಕೊಂಡಿದ್ದಾರೆ. ಇದಕ್ಕೆ ಪೂರಕ ಆಗುವಂತೆ, ಸ್ಕೈ ಏರ್ ವಸತಿ ಸೊಸೈಟಿಗಳಿಗೆ ನೇರ ಡ್ರೋನ್ ವಿತರಣೆಗೆ ಅನುಕೂಲವಾಗುವ ಸ್ಕೈ ಪಾಡ್ ನೆಟ್‌ವರ್ಕ್‌ನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಸ್ತುತ ಎರಡು ಡ್ರೋನ್‌ಗಳೊಂದಿಗೆ ಈ ಕೆಲಸ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಕಂಪನಿಯು 25–30 ಡ್ರೋನ್‌ಗಳನ್ನು ರೆಡಿ ಮಾಡಲು ಪ್ಲ್ಯಾನ್‌ ಹಾಕಿಕೊಂಡಿದೆ.

“ವಿತರಣೆ ಮಾಡುವ ರೈಡರ್ ದಿನಕ್ಕೆ 30 ಡೆಲಿವರಿ ಕೊಟ್ಟು, ₹800 ಗಳಿಸುತ್ತಾನೆ, ಆದರೆ ಡ್ರೋನ್ ದಿನಕ್ಕೆ 60 ಆರ್ಡರ್‌ಗಳನ್ನು ವಿತರಿಸಿ ದಕ್ಷತೆಯನ್ನು 2 ಪಟ್ಟು ಹೆಚ್ಚಿಸುತ್ತದೆ. ಡ್ರೋನ್‌ಗಳು ವಾಯು ಮಾರ್ಗದ ಮೂಲಕ ರಸ್ತೆ ದೂರದ ಅರ್ಧದಷ್ಟು ಪ್ರಯಾಣಿಸುವುದರಿಂದ ಕಾರ್ಬನ್ ಹೊರಸೂಸುವಿಕೆ ಕಡಿಮೆ ಮಾಡುತ್ತದೆ. ಕಾರ್ಯಾಚರಣೆಯು 3D-ನಕ್ಷೆಯ ವಿಮಾನ ಕಾರಿಡಾರ್‌ಗಳು, HAL ಹಾಗೂ DGCA ಸಂಸ್ಥೆಗಳೊಂದಿಗಿನ ಸಮನ್ವಯವನ್ನು ಅವಲಂಬಿಸಿದೆ. ಕಂಪನಿಯು ಹಸಿರು, ಹಳದಿ ವಲಯಗಳಲ್ಲಿ ಅಗತ್ಯ ಅನುಮೋದನೆಗಳೊಂದಿಗೆ ಹಾರಾಟ ನಡೆಸುತ್ತದೆ. “ನಾವು ಸಿವಿಲ್ ಏವಿಯೇಷನ್ ಅಧಿಕಾರಿಗಳಿಂದ ವಾಯುಪ್ರದೇಶ ಅನುಮೋದನೆ ಪಡೆಯುತ್ತೇವೆ, ಆದರೆ ಡ್ರೋನ್ ರೂಲ್ಸ್ 2021 ರ ಅಡಿಯಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತಹ ಗ್ರೌಂಡ್-ಲೆವೆಲ್ ಜಾರಿಗೊಳಿಸುವಿಕೆಯ ಸವಾಲು ದೊಡ್ಡದು ಎನ್ನಲಾಗಿದೆ.

ರಿಯಲ್ ಎಸ್ಟೇಟ್ ತಜ್ಞ ಗುಲಾಮ್ ಝಿಯಾ ಹೇಳುವಂತೆ, ಡ್ರೋನ್-ಆಧಾರಿತ ವಿತರಣೆಯ ಕಲ್ಪನೆ ರೋಮಾಂಚಕವಾಗಿದೆ, ನಗರ ವಸತಿ ಅಭಿವೃದ್ಧಿಗಳಲ್ಲಿ ಇದರ ವ್ಯಾಪಕ ಅನ್ವಯವು ಇನ್ನೂ ಆರಂಭಿಕ ಹಂತದಲ್ಲಿದೆ. ಕೆಲವು ಗೇಟೆಡ್ ಕಮ್ಯುನಿಟಿಗಳು ಪೈಲಟ್ ಹಂತದಲ್ಲಿ ಡ್ರೋನ್‌ಗಳನ್ನು ಅಳವಡಿಸಿಕೊಳ್ಳಬಹುದು. ಆದರೆ ಇದು ಇನ್ನೂ ಪ್ರಾಯೋಗಿಕವಾಗಿದೆ.