ತೆಂಗಿನಕಾಯಿ ಬಹುಪಯೋಗಿ. ಅದ್ರಿಂದ ಸಾಕಷ್ಟು ಪ್ರಯೋಜನವಿದೆ. ತೆಂಗಿನಕಾಯಿ ಚಿಪ್ಪು ಕೂಡ ನಿಮ್ಮ ಜೇಬು ತುಂಬಿಸುತ್ತೆ.
ಪ್ರತಿ ದಿನ ಒಂದಲ್ಲ ಒಂದು ಅಡುಗೆಗೆ ನಾವು ತೆಂಗಿನಕಾಯಿ (Coconut) ಬಳಸ್ತೇವೆ. ಹೆಚ್ಚು ಅಡುಗೆ ಮಾಡೋರ ಮನೆಯಲ್ಲಿ ತೆಂಗಿನ ಕಾಯಿ ಹೆಚ್ಚು ಬಳಕೆ ಆಗೋದಲ್ದೆ ಚಿಪ್ಪು ರಾಶಿ ಬಿದ್ದಿರುತ್ತೆ. ಅದನ್ನು ಏನು ಮಾಡ್ಬೇಕು ಗೊತ್ತಾಗೋದಿಲ್ಲ. ಕೆಲವರು ಅದನ್ನು ಕಸಕ್ಕೆ ಹಾಕಿದ್ರೆ ಹಳ್ಳಿಗಳಲ್ಲಿ ಜನರು ಅದನ್ನು ಒಲೆಗೆ ಬಳಸ್ತಾರೆ. ಮತ್ತೆ ಕೆಲವರ ಮನೆಯಲ್ಲಿ ತೆಂಗಿನ ಚಿಪ್ಪು (coconut shell) ರಾಶಿ ರಾಶಿ ಬಿದ್ದಿರುತ್ತೆ. ನಿಮ್ಮ ಮನೆಯಲ್ಲೂ ಈ ತೆಂಗಿನ ಚಿಪ್ಪು ಹೆಚ್ಚಿದೆ ಅಂದ್ರೆ ಟೆನ್ಷನ್ ಬೇಡ. ಅದ್ರಿಂದಲೂ ನೀವು ಹಣ ಮಾಡ್ಬಹುದು. ಈಗಿರೋ ಎಲ್ಲ ಚಿಪ್ಪನ್ನು ಕಸಕ್ಕೆ ಹಾಕಿದ್ವಿ ಅನ್ನೋರು, ಇಂದಿನಿಂದ ತೆಂಗಿನ ಚಿಪ್ಪು ಒಟ್ಟಾಕೋಕೆ ಶುರು ಮಾಡಿ. ಒಂದಿಷ್ಟು ಚಿಪ್ಪು ಒಟ್ಟಾದ್ಮೇಲೆ ಅದನ್ನು ಮಾರಾಟ ಮಾಡಿ ಹಣ ಮಾಡಿ. ನೀವೇನು ಚಿಪ್ಪನ್ನು ಕ್ಲೀನ್ ಮಾಡ್ಬೇಕಾಗಿಲ್ಲ. ಚಿಪ್ಪನ್ನು ಒಣಗಿಸಬೇಕಾಗಿಲ್ಲ. ಹೇಗಿದೆಯೋ ಹಾಗೆ ಚಿಪ್ಪನ್ನು ಮಾರಾಟ ಮಾಡಿ ಸಣ್ಣ ಪ್ರಮಾಣದಲ್ಲಿ ಹಣ ಸಂಗ್ರಹಿಸಬಹುದು.
ಎಲ್ಲಿ ಮಾರಾಟ ಮಾಡ್ಬೇಕು? : ನಮ್ಮಲ್ಲಿ ಚಿಪ್ಪಿದೆ, ಎಲ್ಲಿ ಮಾರಾಟ ಮಾಡ್ಬೇಕು ಎನ್ನುವವರ ಪ್ರಶ್ನೆಗೆ ಉತ್ತರ ಇಲ್ಲಿದೆ. ನೀವು ತೆಂಗಿನ ಚಿಪ್ಪನ್ನು ಆನ್ಲೈನ್ ಮತ್ತು ಆಫ್ ಲೈನ್ ಎರಡರಲ್ಲೂ ಮಾರಾಟ ಮಾಡ್ಬಹುದು. ಆನ್ಲೈನ್ ನಲ್ಲಿ ಅನೇಕ ಕಂಪನಿಗಳು ನಿಮ್ಮ ಮನೆಯಲ್ಲಿರುವ ತೆಂಗಿನ ಚಿಪ್ಪನ್ನು ಖರೀದಿ ಮಾಡುತ್ತವೆ. ಕೆಲ ಸ್ಥಳೀಯ ಕಂಪನಿಗಳು ಕೂಡ ತೆಂಗಿನ ಚಿಪ್ಪನ್ನು ಖರೀದಿ ಮಾಡುತ್ತವೆ. ನೀವು ನಿಮ್ಮ ಊರಿನ ಹತ್ತಿರವಿರುವ ಕಂಪನಿಗಳನ್ನು ಸಂಪರ್ಕಿಸಿ ಚಿಪ್ಪನ್ನು ಮಾರಾಟ ಮಾಡಬಹುದು. ಕಂಪನಿಗಳು ಅಂದಿನ ಬೆಲೆಗೆ ಕೆ.ಜಿ ಲೆಕ್ಕದಲ್ಲಿ ತೆಂಗಿನ ಚಿಪ್ಪುಗಳನ್ನು ಖರೀದಿ ಮಾಡುತ್ತವೆ. ಆನ್ಲೈನ್ ವೆಬ್ ಸೈಟ್ ಪ್ರಕಾರ, ತೆಂಗಿನ ಚಿಪ್ಪುಗಳನ್ನು ಕೆ.ಜಿಗೆ 14 ರಿಂದ 20 ರೂಪಾಯಿಯಂತೆ ಖರೀದಿ ಮಾಡಲಾಗುತ್ತದೆ.
ತೆಂಗಿನ ಚಿಪ್ಪಿನ ಪ್ರಯೋಜನ : ಇತ್ತೀಚಿನ ದಿನಗಳಲ್ಲಿ ತೆಂಗಿನ ಚಿಪ್ಪಿನ ಬಳಕೆ ಹೆಚ್ಚಾಗಿದೆ. ತೆಂಗಿನ ಚಿಪ್ಪನ್ನು ಸುಂದರಗೊಳಿಸಿ ಅದರಲ್ಲಿ ಆಹಾರವನ್ನು ಸರ್ವ್ ಮಾಡಲಾಗ್ತಿದೆ. ಹೊಟೇಲ್ ಗಳು ಚಿಪ್ಪುಗಳನ್ನು ಇದೇ ಕಾರಣಕ್ಕೆ ಖರೀದಿ ಮಾಡ್ತಿವೆ. ತೆಂಗಿನ ಚಿಪ್ಪಿನಿಂದ ಜ್ಯುವೆಲರಿ ಕೂಡ ಮಾಡಲಾಗ್ತಿದೆ. ಅದು ಕ್ಲಾಸಿಕ್ ಲುಕ್ ನೀಡುತ್ತದೆ. ತೆಂಗಿನ ಚಿಪ್ಪಿನ್ನು ಇಂಗಾಲ-ಸಮೃದ್ಧ ಇಂಧನದ ಉತ್ತಮ ಮೂಲ ಎನ್ನಲಾಗುತ್ತದೆ. ತೆಂಗಿನ ಚಿಪ್ಪಿನ ಇದ್ದಿಲು ಇತರ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ತೆಂಗಿನ ಚಿಪ್ಪಿನ ಇದ್ದಿಲು ಪರಿಣಾಮಕಾರಿ ನೀರಿನ ಫಿಲ್ಟರ್ ಆಗಿದ್ದು, ಕೆಸರು ಮತ್ತು ಇತರ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಆದ್ರಿಂದ ಇದನ್ನು ಕೊಳ, ಈಜುಕೊಳ ಮತ್ತು ಮೀನು ಟ್ಯಾಂಕ್ಗಳಲ್ಲಿ ಬಳಸಲಾಗುತ್ತದೆ. ತೆಂಗಿನ ಚಿಪ್ಪಿನಿಂದ ಕರಕುಶಲ ವಸ್ತುಗಳನ್ನು ತಯಾರಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಅದಕ್ಕೆ ಬೇಡಿಕೆ ಹೆಚ್ಚಿದೆ. ತೆಂಗಿನ ಚಿಪ್ಪುಗಳು ನೈಸರ್ಗಿಕ ವಸ್ತುವಾಗಿದ್ದು, ಪ್ಲಾಸ್ಟಿಕ್ ಮತ್ತು ಇತರ ವಸ್ತುಗಳಲ್ಲಿ ಕಂಡುಬರುವ ಕಠಿಣ ರಾಸಾಯನಿಕಗಳು ಮತ್ತು ಬ್ಲೀಚ್ಗಳಿಂದ ಇದು ಮುಕ್ತವಾಗಿವೆ.
ತೆಂಗಿನಕಾಯಿ ಚಿಪ್ಪಿನ ಬ್ಯುಸಿನೆಸ್ : ತೆಂಗಿನಕಾಯಿ ಚಿಪ್ಪಿನ ಬ್ಯುಸಿನೆಸ್ ಉತ್ತಮ ಆದಾಯ ತಂದುಕೊಡುವ ಬ್ಯುಸಿನೆಸ್ ಗಳಲ್ಲಿ ಒಂದಾಗಿದೆ. ಈಗಾಗಲೇ ಈ ಬ್ಯುಸಿನೆಸ್ ಶುರು ಮಾಡಿ ಯಶಸ್ವಿಯಾದವರು ಕೆಲವರಿದ್ದಾರೆ. ನಿಮ್ಮ ಮನೆ ಸುತ್ತಮುತ್ತಲ ಪ್ರದೇಶದಿಂದ ನೀವು ಚಿಪ್ಪನ್ನು ಖರೀದಿ ಮಾಡಿ, ಅದನ್ನು ದೊಡ್ಡ ಕಂಪನಿಗೆ ಮಾರಾಟ ಮಾಡ್ಬಹುದು. ಇಲ್ಲವೇ ಚಿಪ್ಪಿಗೊಂದು ರೂಪ ನೀಡಿ ನೀವೇ ಮಾರಾಟ ಮಾಡಬಹುದು. ವಿದೇಶದಲ್ಲಿ ಈ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಿದೆ. ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಮತ್ತು ಮಧ್ಯಪ್ರಾಚ್ಯದಂತಹ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ.
