ಸ್ವಿಗ್ಗಿಯ 2025ರ ವರದಿಯ ಪ್ರಕಾರ, ಬಿರಿಯಾನಿ ಸತತ 10ನೇ ವರ್ಷವೂ ಭಾರತೀಯರ ಅಚ್ಚುಮೆಚ್ಚಿನ ಖಾದ್ಯವಾಗಿ ಅಗ್ರಸ್ಥಾನದಲ್ಲಿದೆ. ಬರೋಬ್ಬರಿ 93 ಮಿಲಿಯನ್ ಆರ್ಡರ್‌ಗಳೊಂದಿಗೆ, ಚಿಕನ್ ಬಿರಿಯಾನಿ ಪ್ರಾಬಲ್ಯ ಮೆರೆದಿದ್ದು, ಬರ್ಗರ್ ಮತ್ತು ಪಿಜ್ಜಾಗಳು ನಂತರದ ಸ್ಥಾನಗಳಿಗೆ ತೀವ್ರ ಪೈಪೋಟಿ ನಡೆಸಿವೆ.

ಭಾರತೀಯರಿಗೆ ಬಿರಿಯಾನಿ ಎಂದರೆ ಕೇವಲ ಆಹಾರವಲ್ಲ, ಅದೊಂದು ಎಮೋಷನ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಜನಪ್ರಿಯ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ ತನ್ನ 10ನೇ ಆವೃತ್ತಿಯ ಹೌ ಇಂಡಿಯಾ ಸ್ವಿಗ್ಗಿಡ್ (How India Swiggy'd) ವರದಿಯನ್ನು ಬಿಡುಗಡೆ ಮಾಡಿದ್ದು, 2025ರಲ್ಲಿ ಭಾರತೀಯರು ಅತಿ ಹೆಚ್ಚು ಏನು ತಿಂದಿದ್ದಾರೆ ಎಂಬ ಅಚ್ಚರಿಯ ಮಾಹಿತಿಯನ್ನು ಹೊರಹಾಕಿದೆ.

ಬಿರಿಯಾನಿ ಮುಂದೆ ಎಲ್ಲವೂ ಶೂನ್ಯ!

ಪಿಜ್ಜಾ, ಬರ್ಗರ್ ಎಷ್ಟೇ ಟ್ರೆಂಡ್‌ನಲ್ಲಿದ್ದರೂ ಬಿರಿಯಾನಿಯ ಅಧಿಪತ್ಯವನ್ನು ಅಲುಗಾಡಿಸಲು ಯಾವುದರಿಂದಲ ಸಾಧ್ಯವಾಗಿಲ್ಲ. 2025ರಲ್ಲಿ ಸ್ವಿಗ್ಗಿ ಮೂಲಕ ಬರೋಬ್ಬರಿ 93 ಮಿಲಿಯನ್ ಬಿರಿಯಾನಿ ಆರ್ಡರ್‌ಗಳು ಬಂದಿವೆ! ಇದರ ಲೆಕ್ಕಾಚಾರ ಕೇಳಿದರೆ ನೀವು ಬೆರಗಾಗುತ್ತೀರಿ: ಭಾರತದಲ್ಲಿ ಪ್ರತಿ ನಿಮಿಷಕ್ಕೆ 194 ಮತ್ತು ಪ್ರತಿ ಸೆಕೆಂಡಿಗೆ 3.25 ಬಿರಿಯಾನಿ ಆರ್ಡರ್ ಆಗುತ್ತಿವೆ. ಸತತ 10ನೇ ವರ್ಷವೂ ಬಿರಿಯಾನಿ ಅಗ್ರಸ್ಥಾನ ಕಾಯ್ದುಕೊಳ್ಳುವ ಮೂಲಕ 'ಫುಡ್ ಕಿಂಗ್' ಎನಿಸಿಕೊಂಡಿದೆ.

ಚಿಕನ್ ಬಿರಿಯಾನಿಯೇ ಫೇವರೆಟ್

ಬಿರಿಯಾನಿ ಪ್ರಿಯರಲ್ಲಿ ಚಿಕನ್ ಬಿರಿಯಾನಿಗೆ ಮೊದಲ ಆದ್ಯತೆ. ಈ ವರ್ಷ ಒಟ್ಟು 57.7 ಮಿಲಿಯನ್ ಬಾರಿ ಚಿಕನ್ ಬಿರಿಯಾನಿ ಆರ್ಡರ್ ಮಾಡಲಾಗಿದೆ. ವಿಶೇಷವೆಂದರೆ, ಒಮ್ಮೆ ಚಿಕನ್ ಬಿರಿಯಾನಿ ರುಚಿ ನೋಡಿದ ಗ್ರಾಹಕರು ಮತ್ತೆ ಮತ್ತೆ ಅದೇ ಖಾದ್ಯವನ್ನು ಆರ್ಡರ್ ಮಾಡುವುದು ಈ ವರದಿಯಲ್ಲಿ ಕಂಡುಬಂದಿದೆ. ಬಿರಿಯಾನಿ ಕೇವಲ ಊಟವಾಗಿ ಉಳಿಯದೆ, ಯಾವುದೇ ಸಮಯದ ನೆಚ್ಚಿನ ಆಹಾರವಾಗಿ ಬದಲಾಗಿದೆ.

ಪಿಜ್ಜಾ-ಬರ್ಗರ್ ನಡುವೆ ಭಾರೀ ಪೈಪೋಟಿ

ಬಿರಿಯಾನಿ ನಂತರದ ಸ್ಥಾನಕ್ಕಾಗಿ ಬರ್ಗರ್ ಮತ್ತು ಪಿಜ್ಜಾ ನಡುವೆ ಯುದ್ಧವೇ ನಡೆದಿದೆ. 44.2 ಮಿಲಿಯನ್ ಆರ್ಡರ್‌ಗಳೊಂದಿಗೆ ಬರ್ಗರ್ ಎರಡನೇ ಸ್ಥಾನ ಪಡೆದರೆ, 40.1 ಮಿಲಿಯನ್ ಆರ್ಡರ್‌ಗಳೊಂದಿಗೆ ಪಿಜ್ಜಾ ಮೂರನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದ ಹೆಮ್ಮೆ 'ದೋಸೆ' 26.2 ಮಿಲಿಯನ್ ಆರ್ಡರ್‌ಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ. ಆಶ್ಚರ್ಯಕರ ಸಂಗತಿಯೆಂದರೆ, ಒಬ್ಬನೇ ಗ್ರಾಹಕ ಒಂದೇ ಬಾರಿ 47,578 ರೂ. ಮೌಲ್ಯದ ಪಿಜ್ಜಾಗಳನ್ನು ಆರ್ಡರ್ ಮಾಡಿ ದಾಖಲೆ ಬರೆದಿದ್ದಾನೆ!

ತಡರಾತ್ರಿಯ ಕ್ರೇವಿಂಗ್ಸ್ ಮತ್ತು ವೆಜ್ ಪಿಜ್ಜಾ

ನಗರವಾಸಿಗಳ ತಡರಾತ್ರಿಯ ಹಸಿವಿಗೆ 'ವೆಜ್ ಪಿಜ್ಜಾ' ಸಂಜೀವಿನಿಯಂತೆ ಕೆಲಸ ಮಾಡಿದೆ. ರಾತ್ರಿಯ ಹೊತ್ತು ಅತಿ ಹೆಚ್ಚು ಆರ್ಡರ್ ಆದ ತಿಂಡಿಗಳಲ್ಲಿ ವೆಜ್ ಪಿಜ್ಜಾ ಮೊದಲ ಸಾಲಿನಲ್ಲಿದೆ. ಇನ್ನು ಮಧ್ಯಾಹ್ನ 3ರಿಂದ 7 ಗಂಟೆಯ ಅವಧಿಯಲ್ಲಿ ಬರ್ಗರ್‌ಗಳ ಹಾವಳಿ ಜೋರಾಗಿರುತ್ತದೆ. ಈ ಅವಧಿಯಲ್ಲಿ ಚಿಕನ್ ಬರ್ಗರ್ (6.3 ಮಿಲಿಯನ್) ಮತ್ತು ವೆಜ್ ಬರ್ಗರ್ (4.2 ಮಿಲಿಯನ್) ಆರ್ಡರ್‌ಗಳು ಸ್ವಿಗ್ಗಿ ಆಪ್‌ನಲ್ಲಿ ಅಬ್ಬರಿಸಿವೆ.

ಚಹಾ-ಸಮೋಸಾ ಜೋಡಿಗೆ ಸೋಲಿಲ್ಲ

ಭಾರತೀಯರ ಸಂಜೆಯ ಸ್ನ್ಯಾಕ್ಸ್ ಎಂದರೆ ಅದು ಚಹಾ ಮತ್ತು ಸಮೋಸಾ. ಈ ವರ್ಷ ಜನರು ಸ್ವಿಗ್ಗಿ ಮೂಲಕ 3.42 ಮಿಲಿಯನ್ ಸಮೋಸಾಗಳು ಮತ್ತು 2.9 ಮಿಲಿಯನ್ ಕಪ್ ಶುಂಠಿ ಚಹಾವನ್ನು ತರಿಸಿಕೊಂಡಿದ್ದಾರೆ. ಸಿಹಿ ತಿಂಡಿಗಳ ಪಟ್ಟಿಯಲ್ಲಿ ಗುಲಾಬ್ ಜಾಮೂನ್, ಕಾಜು ಕಟ್ಲಿ, ಬೇಸನ್ ಲಡ್ಡು ಮತ್ತು ಚಾಕೊಲೇಟ್ ಕೇಕ್ ಅಗ್ರಸ್ಥಾನ ಪಡೆದು ಜನರ ಮನ ಗೆದ್ದಿವೆ.