ಖಾಸಗಿ ಷೇರು ಹೂಡಿಕೆದಾರರು ವಿಐಪಿ ಇಂಡಸ್ಟ್ರೀಸ್‌ನಲ್ಲಿ ದಿಲೀಪ್ ಪಿರಾಮಲ್ ಅವರ ಪಾಲನ್ನು ಸ್ವಾಧೀನಪಡಿಸಿಕೊಳ್ಳಲಿದ್ದಾರೆ. ಮುಖೇಶ್ ಅಂಬಾನಿ ಬೀಗರಾದ ಅಜಯ್ ಪಿರಾಮಲ್ ಅವರ ಸಹೋದರ ದಿಲೀಪ್ ಪಿರಾಮಲ್ ಅವರಿಂದ ಈ ಪಾಲನ್ನು ಖರೀದಿಸಲಾಗುತ್ತಿದೆ.
ಮುಂಬೈ (ಜು.15): ಖಾಸಗಿ ಷೇರುಗಳ ಪ್ರಮುಖ ಹೂಡಿಕೆದಾರ ಮಲ್ಟಿಪಲ್ಸ್‌ನ ಸ್ಟಾಕ್ ಮಾರುಕಟ್ಟೆ ಹೂಡಿಕೆದಾರ ಆಕಾಶ್ ಬನ್ಸಾಲಿ ಮತ್ತು ಕಾರಟ್‌ಲೇನ್ ಸಂಸ್ಥಾಪಕ ಮಿಥುನ್ ಸಚೆಟಿ, ಲಗೇಜ್ ತಯಾರಕ ವಿಐಪಿ ಇಂಡಸ್ಟ್ರೀಸ್‌ನ ನಿರ್ವಹಣಾ ನಿಯಂತ್ರಣವನ್ನು ಪ್ರವರ್ತಕ ದಿಲೀಪ್ ಪಿರಾಮಲ್ ಅವರಿಂದ ಸ್ವಾಧೀನಪಡಿಸಿಕೊಳ್ಳಲಿದ್ದಾರೆ. ಅವರು ಒಟ್ಟಾಗಿ ದಿಲೀಪ್ ಪಿರಾಮಲ್ ಅವರಿಂದ ವಿಐಪಿ ಇಂಡಸ್ಟ್ರೀಸ್‌ನಲ್ಲಿರುವ ಶೇ. 32ರಷ್ಟು ಪಾಲನ್ನು 1763 ಕೋಟಿ ರೂಪಾಯಿಗೆ ಖರೀದಿ ಮಾಡಲಿದ್ದಾರೆ. ಅದರೊಂದಿಗೆ ಕಂಪನಿಯ ಪಬ್ಲಿಕ್ ಶೇರ್‌ಹೋಲ್ಡರ್‌ಗಳಿಗೆ ಮುಕ್ತ ಆಫರ್ ನೀಡಲಿದ್ದು, 1438 ಕೋಟಿ ರೂಪಾಯಿಗೆ ಶೇ. 26ರಷ್ಟು ಪಾಲನ್ನು ಖರೀದಿ ಮಾಡುವ ಗುರಿ ಹೊಂದಿದದೆ.
ಮುಖೇಶ್ ಅಂಬಾನಿಗೆ ಹೇಗೆ ಸಂಬಂಧ: ಪಿರಾಮಲ್ ಎಂಟರ್‌ಪ್ರೈಸಸ್ ಅಧ್ಯಕ್ಷ ಅಜಯ್ ಪಿರಾಮಲ್ ಅವರ ಹಿರಿಯ ಸಹೋದರ ದಿಲೀಪ್. ಇನ್ನು ಅಜಯ್ ಪಿರಾಮಲ್ ಅವರು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿಯ ಬೀಗರು. ಮುಖೇಶ್ ಅಂಬಾನಿಯ ಪುತ್ರಿ ಇಶಾ ಅಂಬಾನಿ, ಅಜಯ್ ಪಿರಾಮಲ್ ಅವರ ಪುತ್ರ ಆನಂದ್ ಪಿರಾಮಲ್ ಅವರನ್ನು ವಿವಾಹವಾಗಿದ್ದಾರೆ.
ಅಜಯ್ ಪಿರಾಮಲ್ ಅವರ ಅಣ್ಣ ದೀಲೀಪ್ ಮಾರ್ಚ್ 31 ರ ಹೊತ್ತಿಗೆ ವಿಐಪಿಯಲ್ಲಿ 52% ಪಾಲನ್ನು ಹೊಂದಿದ್ದರು. 1980 ರಲ್ಲಿ, ಅವರು (ಈಗ 75 ವರ್ಷ ವಯಸ್ಸಿನವರು) ಕುಟುಂಬ ವ್ಯವಹಾರದಿಂದ ಬೇರ್ಪಟ್ಟ ನಂತರ ವಿಐಪಿಯ ನಿಯಂತ್ರಣವನ್ನು ಪಡೆದುಕೊಂಡಿದ್ದರು. ಒಪ್ಪಂದದ ನಂತರ, ಅವರು 17% ಪಾಲನ್ನು ಅವರು ಉಳಿಸಿಕೊಳ್ಳಲಿದ್ದಾರೆ. ಕಳೆದ ಐದು ವರ್ಷಗಳಿಂದ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುತ್ತಿರುವ ಕಂಪನಿಯನ್ನು ನಿರ್ವಹಿಸುವಲ್ಲಿ ತಮ್ಮ ಕುಟುಂಬದ ಯುವ ಪೀಳಿಗೆ ಆಸಕ್ತಿ ಹೊಂದಿಲ್ಲ ಎಂದು ದಿಲೀಪ್ ಹೇಳಿದ್ದರು.
ಇದರೊಂದಿಗೆ ಭಾರತದ ಲಗೇಜ್ ಮತ್ತು ಪ್ರಯಾಣ ಪರಿಕರಗಳ ಮಾರುಕಟ್ಟೆಯಲ್ಲಿ ಪ್ರಸಿದ್ಧ ಹೆಸರಾಗಿರುವ ವಿಐಪಿ ಇಂಡಸ್ಟ್ರೀಸ್, ಮಾಲೀಕತ್ವದಲ್ಲಿ ಪ್ರಮುಖ ಬದಲಾವಣೆಗೆ ಒಳಗಾಗಲಿದೆ. ಮಲ್ಟಿಪಲ್ಸ್ ಆಲ್ಟರ್ನೇಟ್ ಅಸೆಟ್ ಮ್ಯಾನೇಜ್‌ಮೆಂಟ್‌ಗೆ ಕಂಪನಿಯ ಶೇ 32 ರಷ್ಟು ಪಾಲನ್ನು ಪ್ರತಿ ಷೇರಿಗೆ 388 ರೂಪಾಯಿಯಂತೆ ಖರೀದಿ ಮಾಡಲಿದೆ.
ಇದು ಖಾಸಗಿ ಷೇರು ಹೂಡಿಕೆದಾರರ ಕೈಗೆ ಕುಟುಂಬದ ಉದ್ಯಮವಾದ ಭಾರತೀಯ ಗ್ರಾಹಕ ಬ್ರ್ಯಾಂಡ್‌ನ ಮತ್ತೊಂದು ಮಹತ್ವದ ಪರಿವರ್ತನೆಯನ್ನು ಸೂಚಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹಲ್ದಿರಾಮ್‌ನ ಷೇರು ಮಾರಾಟ ಮಾತುಕತೆ ಸೇರಿದಂತೆ ಇದೇ ರೀತಿಯ ವಹಿವಾಟುಗಳ ಸರಣಿಯನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಒಂದು ಕಾಲದಲ್ಲಿ ಷೇರು ಮಾರುಕಟ್ಟೆ ಮತ್ತು ಗ್ರಾಹಕ ಪ್ರಯಾಣ ವಿಭಾಗ ಎರಡರಲ್ಲೂ ಪ್ರಬಲ ಪ್ರದರ್ಶನ ನೀಡುತ್ತಿದ್ದ ವಿಐಪಿ ಇಂಡಸ್ಟ್ರೀಸ್ ಇತ್ತೀಚಿನ ವರ್ಷಗಳಲ್ಲಿ ನಾಯಕತ್ವದ ನಿರ್ಗಮನ ಮತ್ತು ಉತ್ತರಾಧಿಕಾರದ ಸವಾಲುಗಳಿಂದ ಹಿಡಿದು ಸಫಾರಿ ಇಂಡಸ್ಟ್ರೀಸ್ ಮತ್ತು ಮೊಕೊಬರಾ, ಅಪ್ಪರ್‌ಕೇಸ್ ಮತ್ತು ನಾಷರ್ ಮೈಲ್ಸ್‌ನಂತಹ ಹೊಸ ರೀತಿಯ ಡಿ2ಸಿ ಬ್ರ್ಯಾಂಡ್‌ಗಳ ತೀವ್ರ ಸ್ಪರ್ಧೆಯವರೆಗೆ ಹಲವಾರು ಸವಾಲುಗಳನ್ನು ಎದುರಿಸಿದೆ. ಸಫಾರಿಯ ಸುಧೀರ್ ಜಟಿಯಾ ಮತ್ತು ಅಪ್ಪರ್‌ಕೇಸ್‌ನ ಸುದೀಪ್ ಘೋಸ್ ಇಬ್ಬರೂ ಮಾಜಿ ವಿಐಪಿ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.
ಹೊಸ ಮಾಲೀಕತ್ವವು ವಿಐಪಿಅನ್ನು ವೃತ್ತಿಪರ ನಿರ್ವಹಣಾ ನಿಯಂತ್ರಣಕ್ಕೆ ತರುತ್ತದೆ, ಮಲ್ಟಿಪಲ್ಸ್ ಕಂಪನಿಯ ಪ್ರಯಾಣದ ಮುಂದಿನ ಹಂತವನ್ನು ಮುನ್ನಡೆಸುವ ನಿರೀಕ್ಷೆಯಿದೆ. ಕಾರ್ಯಾಚರಣೆ ಮತ್ತು ಸ್ಪರ್ಧಾತ್ಮಕ ಸವಾಲುಗಳನ್ನು ಪರಿಹರಿಸುವಾಗ ಈ ನಿಧಿಯು ಬ್ರ್ಯಾಂಡ್‌ನ ದೀರ್ಘಕಾಲದ ಮನ್ನಣೆಯನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ಮಾರುಕಟ್ಟೆ ವೀಕ್ಷಕರು ಸೂಕ್ಷ್ಮವಾಗಿ ಗಮನಿಸುತ್ತಾರೆ.


