ರೇಣುಕಾಸ್ವಾಮಿ ಕೊಲೆಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪವಿತ್ರ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಆ.14): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪವಿತ್ರ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ ರಾಜೇಶ್ವರಿ ನಗರದಲ್ಲಿರುವ ಅವರ ಮನೆಯಿಂದ ಪೊಲೀಸರು ನಟಿ ಪವಿತ್ರ ಗೌಡ ಅವರನ್ನು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಏಳು ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಈಘ ಪೊಲೀಸರು ಪವಿತ್ರ ಗೌಡ ಅವರನ್ನು ಬಂಧಿಸಿದ್ದಾರೆ.
ಪವಿತ್ರಾ ಗೌಡ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ ಅವರ ನಿವಾಸದ ಸುತ್ತ ಬೆಳಗ್ಗಿನಿಂದಲೇ ಬಿಗುವಿನ ಮಾತಾವರಣ ನಿರ್ಮಾಣವಾಗಿತ್ತು. ಜಾಮೀನು ರದ್ದತಿಯ ಬೆನ್ನಲ್ಲೇ ಪವಿತ್ರಾ ಗೌಡರ ಮುಖದಲ್ಲಿ ಆತಂಕ ಸ್ಪಷ್ಟವಾಗಿ ಕಾಣಿಸಿದ್ದು, ಮನೆಯಿಂದ ಹೊರಗೆ ಹೋಗದಂತೆ ರಾಜರಾಜೇಶ್ವರಿ ನಗರ ಪೊಲೀಸರು ಅವರಿಗೆ ಸೂಚಿಸಿದ್ದರು.
ಇಂದು ಬೆಳಗ್ಗೆ ತೀರ್ಪು ಪ್ರಕಟವಾಗುವ ಮೊದಲು ಪವಿತ್ರಾ ಗೌಡ ಅವರು ತಮ್ಮ ಆರ್.ಆರ್. ನಗರದ ನಿವಾಸದಲ್ಲಿ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿ, ಬಳಿಕ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಬಂದಿದ್ದರು. ಈ ವೇಳೆ ಮಾಧ್ಯಮದ ಕ್ಯಾಮೆರಾಗಳನ್ನು ನೋಡಿ ಕೈಸನ್ನೆ ಮಾಡಿದ ಅವರು, 'ದಯವಿಟ್ಟು ಮನೆಯ ಬಳಿಯಿಂದ ಹೋಗಿ' ಎಂದು ಮನವಿ ಮಾಡಿದ್ದರು. ದೇವಸ್ಥಾನದ ಆವರಣದಲ್ಲಿ ಯಾರೊಂದಿಗೋ ಫೋನ್ನಲ್ಲಿ ತೀವ್ರ ತಳಮಳದಿಂದ ಮಾತನಾಡುತ್ತಿರುವುದು ಕಂಡುಬಂದಿತ್ತು.
ಸುಪ್ರೀಂ ಕೋರ್ಟ್ ಆದೇಶದ ನಂತರ ಮನೆಗೆ ಹಿಂದಿರುಗಿದರೂ, ಅವರ ಆತಂಕಕಾರಿ ಚಟುವಟಿಕೆಗಳು ಮುಂದುವರಿದಿದ್ದವು. ಇದನ್ನರಿತ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಅವರ ಮನೆ ಬಳಿ ಬಂದಿದ್ದಾರೆ. ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಯಾವುದೇ ಗಲಾಟೆ ಅಥವಾ ಜನ ಸೇರುವುದನ್ನು ತಪ್ಪಿಸಲು ಮಫ್ತಿಯಲ್ಲಿಯೇ ಪೊಲೀಸರು ಕಾವಲು ಕಾದಿದ್ದಾರೆ.
ಈ ಸಂದರ್ಭದಲ್ಲಿ ಮನೆಯಿಂದ ಹೊರಗೆ ಹೋಗಲು ಯತ್ನಿಸಿದ ಪವಿತ್ರಾ ಗೌಡ ಅವರನ್ನು ಪೊಲೀಸರು ತಡೆದಿದ್ದಾರೆ. 'ರೆಡ್ ಕಾರ್ಪೆಟ್ ಶಾಪ್ಗೆ ಹೋಗುತ್ತೇನೆ' ಎಂದು ಅವರು ಹೇಳಿದರೂ, ಸದ್ಯದ ಪರಿಸ್ಥಿತಿಯಲ್ಲಿ ಮನೆಯಿಂದ ಹೊರಗೆ ಹೋಗುವುದು ಸೂಕ್ತವಲ್ಲ ಎಂದು ಎಚ್ಚರಿಕೆ ನೀಡಿದ ಪೊಲೀಸರು, ಅವರನ್ನು ಮತ್ತೆ ಮನೆಯೊಳಗೆ ಕಳುಹಿಸಿದ್ದರು.
ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ:
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರೇಣುಕಾಸ್ವಾಮಿ ತಂದೆ, ಹೈಕೋರ್ಟ್ ಅಲ್ಲಿ ಜಾಮೀನು ಸಿಕ್ಕಾಗ ಆತಂಕ ಆಗಿತ್ತು. ಈಗ ಜಾಮೀನು ಅರ್ಜಿ ವಜಾ ಆಗಿರೋದು ಖುಷಿ ಆಗಿದೆ. ನ್ಯಾಯಾಲಯದ ಮೇಲೆ ನಂಬಿಕೆ ಬಂತು. ನನ್ನ ಸೊಸೆ, ಮೊಮ್ಮಗನಿಗೆ ಜೀವನಾಂಶ ಕೊಡಿ. ಆದಷ್ಟು ಬೇಗ ಈ ಕೇಸ್ ಕೊನೆ ಹಂತಕ್ಕೆ ಬರಲಿ ಎಂದು ಹೇಳಿದ್ದಾರೆ.

