ಮುಂಬೈನ ಮುಲುಂಡ್ ಪ್ರದೇಶದಲ್ಲಿ ನಡೆದ ಈ ದುರಂತವು ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ಸಾರ್ವಜನಿಕರು ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಹೃತಿಕ್ ರೋಷನ್ ಅವರಂತಹ ದೊಡ್ಡ ನಟ ಧ್ವನಿ ಎತ್ತಿರುವುದು ಸಂತ್ರಸ್ತರಿಗೆ ಮತ್ತು ಸಾಮಾನ್ಯ ಜನರಿಗೆ ಆನೆ ಬಲ ಬಂದಂತಾಗಿದೆ. ಏನಾಯ್ತು ನೋಡಿ..!
ನಟ ಹೃತಿಕ್ ರೋಶನ್ ಹೇಳಿದ್ದೇನು?
ಮುಂಬೈ: ಬಾಲಿವುಡ್‌ನ ಖ್ಯಾತ ನಟ, 'ಗ್ರೀಕ್ ಗಾಡ್' ಎಂದೇ ಕರೆಯಲ್ಪಡುವ ಹೃತಿಕ್ ರೋಷನ್ (Hrithik Roshan) ಅವರು ಮುಂಬೈನಲ್ಲಿ ಸಂಭವಿಸಿದ ಮೆಟ್ರೋ ಸ್ಲ್ಯಾಬ್ ಕುಸಿತದ ಘಟನೆಗೆ ತೀವ್ರ ಆಘಾತ ಮತ್ತು ವಿಷಾದ ವ್ಯಕ್ತಪಡಿಸಿದ್ದಾರೆ. ಶನಿವಾರ ಮುಂಬೈನ ಮುಲುಂಡ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ರೈಲು ಲೈನ್ 4 ರ ಬೃಹತ್ ಕಾಂಕ್ರೀಟ್ ಸ್ಲ್ಯಾಬ್ ಒಂದು ಚಲಿಸುತ್ತಿದ್ದ ವಾಹನಗಳ ಮೇಲೆ ಕುಸಿದುಬಿದ್ದಿತ್ತು. ಈ ಭೀಕರ ಅವಘಡದಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದು, ಮೂವರು ಗಾಯಗೊಂಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ನಟ ಹೃತಿಕ್ ರೋಷನ್ ಸಾಮಾಜಿಕ ಜಾಲತಾಣದಲ್ಲಿ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಘಟನೆಯ ವಿಡಿಯೋವನ್ನು ಹಂಚಿಕೊಂಡಿರುವ ಹೃತಿಕ್ ರೋಷನ್, ಒಂದು ಸುದೀರ್ಘವಾದ ಟಿಪ್ಪಣಿಯನ್ನು ಬರೆದಿದ್ದಾರೆ. "ಇದು ನಿಜಕ್ಕೂ ಹೃದಯ ವಿದ್ರಾವಕ ಮತ್ತು ಆಘಾತಕಾರಿ ಘಟನೆ. ಮೃತರ ಕುಟುಂಬಕ್ಕೆ ನನ್ನ ಆಳವಾದ ಸಂತಾಪಗಳು ಮತ್ತು ಈ ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಬರೆಯುವ ಮೂಲಕ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.
ಸುರಕ್ಷತಾ ತಪಾಸಣೆಗಳನ್ನು ಮಾಡುವುದು ಈಗಿನ ಆದ್ಯತೆಯಾಗಬೇಕು
ಕೇವಲ ಸಂತಾಪ ಸೂಚಿಸುವುದಷ್ಟೇ ಅಲ್ಲದೆ, ಹೃತಿಕ್ ರೋಷನ್ ಅವರು ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಕೆಲವು ಕಟು ಪ್ರಶ್ನೆಗಳನ್ನು ಹಾಗೂ ಮನವಿಗಳನ್ನು ಮುಂದಿಟ್ಟಿದ್ದಾರೆ. "ಅಧಿಕಾರಿಗಳು ಈ ಘಟನೆಗೆ ಸಂಬಂಧಿಸಿದಂತೆ ಜವಾಬ್ದಾರಿಯುತ ಕ್ರಮ ಕೈಗೊಳ್ಳುತ್ತಿರುವುದು ಸ್ವಾಗತಾರ್ಹ. ಆದರೆ, ಇಂತಹ ಅಪಘಾತಗಳನ್ನು ತಡೆಗಟ್ಟಲು ಸುರಕ್ಷತಾ ತಪಾಸಣೆಗಳನ್ನು ಮಾಡುವುದು ಈಗಿನ ಆದ್ಯತೆಯಾಗಬೇಕು. ಮುಂಬೈನಾದ್ಯಂತ, ಅದರಲ್ಲೂ ವಿಶೇಷವಾಗಿ ಜನನಿಬಿಡ ರಸ್ತೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಸುರಕ್ಷತೆ ಅತ್ಯಂತ ಮುಖ್ಯ" ಎಂದು ಅವರು ಒತ್ತಿ ಹೇಳಿದ್ದಾರೆ.
ನಿರ್ಮಾಣ ಹಂತದ ಕೆಲಸಗಾರರು ಮತ್ತು ಸಾಮಾನ್ಯ ಜನರ ಪ್ರಾಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಅವರು, "ಕೆಲಸಗಾರರ ಮತ್ತು ಸಾಮಾನ್ಯ ಜನರ ಸುರಕ್ಷತೆಯು ಅತ್ಯಂತ ಮಹತ್ವದ್ದಾಗಿದೆ. ಭವಿಷ್ಯದಲ್ಲಿ ಇಂತಹ ಅನಾಹುತಗಳು ಮರುಕಳಿಸದಂತೆ ನೋಡಿಕೊಳ್ಳಲು ಕಟ್ಟುನಿಟ್ಟಾದ ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್‌ಗಳನ್ನು ಜಾರಿಗೆ ತರಬೇಕು ಎಂದು ನಾನು ಆಶಿಸುತ್ತೇನೆ" ಎಂದು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಈ ದುರಂತವು ಇಡೀ ನಗರವನ್ನು ಬೆಚ್ಚಿಬೀಳಿಸಿದೆ
ಮುಂಬೈನ ಮುಲುಂಡ್ ಪ್ರದೇಶದಲ್ಲಿ ನಡೆದ ಈ ದುರಂತವು ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ಸಾರ್ವಜನಿಕರು ಮೆಟ್ರೋ ಕಾಮಗಾರಿಯ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಹೃತಿಕ್ ರೋಷನ್ ಅವರಂತಹ ದೊಡ್ಡ ನಟ ಧ್ವನಿ ಎತ್ತಿರುವುದು ಸಂತ್ರಸ್ತರಿಗೆ ಮತ್ತು ಸಾಮಾನ್ಯ ಜನರಿಗೆ ಆನೆ ಬಲ ಬಂದಂತಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂಬುದು ಈಗ ಎಲ್ಲರ ಒಕ್ಕೊರಲ ದನಿಯಾಗಿದೆ. ಹೃತಿಕ್ ರೋಷನ್ ಅವರ ಈ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕೂಡ ಅವರ ಕಾಳಜಿಯನ್ನು ಮೆಚ್ಚಿಕೊಂಡಿದ್ದಾರೆ.


