ಅಮಿತಾಭ್ ಬಚ್ಚನ್ 40 ದಿನಗಳ ವ್ರತ ಮಾಡಿ ಶಬರಿಮಲೆಗೆ ಪಾದಯಾತ್ರೆ ಕೈಗೊಂಡಿದ್ದರು ಎಂಬುದು ನಿಮಗೆ ಗೊತ್ತೇ? ಈ ಯಾತ್ರೆಯ ಹಿಂದೆ ಕೂಲಿ ಫಿಲಂ ಚಿತ್ರೀಕರಣದ ವೇಳೆ ನಡೆದ ಅಪಘಾತ, ಅಮಿತಾಭ್‌ ಅನಾರೋಗ್ಯ, ಡಾ. ರಾಜ್‌ ಅವರ ಸಲಹೆ ಇತ್ಯಾದಿ ಕತೆಗಳೆಲ್ಲ ಇವೆ. ಇಲ್ಲಿದೆ ಅದರ ವಿವರ. 

ಡಾ. ರಾಜ್‌ಕುಮಾರ್‌ ಅವರು ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದರು ಎಂಬುದು ನಿಮಗೆಲ್ಲ ಗೊತ್ತಿದೆ. ಅವರು ಮಾಲೆ ಧರಿಸಿ 40 ದಿನಗಳ ವ್ರತ ಮಾಡಿ ಶಬರಿಮಲೆಗೆ ಹೋಗುತ್ತಿದ್ದರು. ಅಣ್ಣಾವ್ರ ಪರಂಪರೆ ಮುಂದುವರಿಸಿ ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಅವರೂ ಶಬರಿಮಲೆಗೆ ಹೋಗಿದ್ದಾರೆ. ಅಂದ ಹಾಗೆ, ಹಿಂದಿ ಚಿತ್ರರಂಗದ ಶೆಹನ್‌ಶಾ ಅಮಿತಾಭ್‌ ಬಚ್ಚನ್‌ ಕೂಡ 40 ದಿನಗಳ ವ್ರತ ಮಾಡಿ ಶಬರಿಮಲೆಗೆ ಪಾದಯಾತ್ರೆ ಮಾಡಿದ್ದರು ಎಂಬುದು ನಿಮಗೆ ಗೊತ್ತಿದೆಯಾ?

ಹೌದು, ಈ ಅಪರೂಪದ ನೆನಪನ್ನು ಅಮಿತಾಭ್‌ ಹಿಂದೊಮ್ಮೆ ಪಾಡ್‌ಕ್ಯಾಸ್ಟ್‌ನಲ್ಲಿ ಹಂಚಿಕೊಂಡಿದ್ದರು. ಅದು ನಡೆದದ್ದು ಹೀಗೆ. ಮನಮೋಹನ್ ದೇಸಾಯಿ ಅವರ ಕೂಲಿ (1983) ಫಿಲಂ ಅನ್ನು ಬೆಂಗಳೂರು ರೈಲ್ವೆ ನಿಲ್ದಾಣ, ಕಬ್ಬನ್ ಪಾರ್ಕ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಚಿತ್ರೀಕರಿಸಲಾಯಿತು. ಚಿತ್ರದಲ್ಲಿ ಪುನೀತ್ ಇಸ್ಸಾರ್ ಅವರೊಂದಿಗಿನ ಹೋರಾಟದ ಸನ್ನಿವೇಶದಲ್ಲಿ ಅಮಿತಾಭ್‌ ತೀವ್ರವಾಗಿ ಗಾಯಗೊಂಡರು. ಜುಲೈ 21, 1982ರಂದು ಅವರು ಗಾಯಗೊಂಡರು. ಆರಂಭದಲ್ಲಿ ಬೆಂಗಳೂರಿನ ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ನಂತರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಯಿತು. 

ಈ ನಡುವೆ, ಅಮಿತಾಭ್‌ರ ಲಕ್ಷಾಂತರ ಅಭಿಮಾನಿಗಳು ಇದರಿಂದ ಆಘಾತಕ್ಕೀಡಾದರು. ಅಮಿತಾಭ್‌ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ಅವರಲ್ಲಿ. ಅವರ ಹಿಂದಿನ ಚಿತ್ರಗಳಲ್ಲಿ ಒಂದಾದ ಬಾಂಬೆ ಟು ಗೋವಾ (1972) ಅನ್ನು ನಿರ್ಮಿಸಿದ್ದ ಕನ್ನಡಿಗ ನಿರ್ಮಾಪಕ ಎಸ್. ರಾಮನಾಥನ್ ಅವರೂ ಒಬ್ಬರಾಗಿದ್ದರು. ಇದೇ ಸಂದರ್ಭದಲ್ಲಿ ರಾಮನಾಥನ್‌ ಹಾಗೂ ಡಾ. ರಾಜ್‌ಕುಮಾರ್‌ ಭೇಟಿಯಾಗಿದ್ದರು. ಅಮಿತಾಭ್‌ಗೆ ಆದ ಅಪಘಾತದ ಸುದ್ದಿ ತಿಳಿದ ರಾಜ್‌ಕುಮಾರ್‌, ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ತಾವು ಉಪವಾಸ ಮಾಡುವುದಾಗಿ ತಿಳಿಸಿದರು. ಜೊತೆಗೆ, ತಾವು ನಂಬುವು ಶಬರಿಮಲೆ ಅಯ್ಯಪ್ಪ ಸ್ವಾಮಿಯ ಬಳಿಗೆ ಒಮ್ಮೆ ಬರುವುದಾಗಿ ಅಮಿತಾಭ್‌ ಹರಕೆ ಹೊತ್ತರೆ ಅವರ ಕಷ್ಟಗಳೆಲ್ಲ ದೂರವಾಗುವುದು ಎಂದು ತಿಳಿಸಿದರು.

ಈ ಮಾಹಿತಿಯನ್ನು ರಾಮನಾಥನ್‌ ಅವರು ಅಮಿತಾಭ್‌ ಅವರಿಗೆ ತಿಳಿಸಿದರು. ಹಾಗೆಯೇ ಆಗಲಿ ಎಂದು ಅಮಿತಾಭ್‌ ತಾವು ಶಬರಿಮಲೆಗೆ ಬರುವುದಾಗಿ ಹರಕೆ ಹೊತ್ತರು. ಅಯ್ಯಪ್ಪ ಸ್ವಾಮಿಯ ಆಶೀರ್ವಾದದಿಂದ ನಂತರದ ಕಾರ್ಯಗಳೆಲ್ಲ ಸಾಂಗವಾಗಿ ಸಾಗಿದವು. ಅವರು ಚೇತರಿಸಿಕೊಂಡ ನಂತರ, ಜನವರಿ 1983ರಲ್ಲಿ ಚಿತ್ರೀಕರಣ ಪುನರಾರಂಭಿಸಿ ಕೂಲಿ ಫಿಲಂ ರಿಲೀಸ್‌ ಆಯಿತು. ಅದು ಹಿಟ್‌ ಆಯಿತು. ಇದರಿಂದ ಸಂತೋಷಗೊಂಡ ಅಮಿತಾಭ್‌, ಮಾತು ಕೊಟ್ಟಂತೆ ನಲುವತ್ತು ದಿನಗಳ ಕಾಲ ಮಾಲೆ ಹಾಕಿ, ವ್ರತ ಮಾಡಿ ಕನ್ನಿಸ್ವಾಮಿಯಾದರು. ಈ ಅವಧಿಯಲ್ಲಿ ಅಮಿತಾಭ್‌ ಕಪ್ಪು ಬಟ್ಟೆ ಧರಿಸಿ, ಮುಂಜಾನೆ ತಣ್ಣೀರಿನಲ್ಲಿ ಸ್ನಾನ ಮಾಡಿ, ತಾವೇ ಮಾಡಿದ ಅಡುಗೆ ಉಂಡು, ಬ್ರಹ್ಮಚಾರಿಯಾಗಿದ್ದು, ಮಾಂಸ- ಮದ್ಯ ಸೇವಿಸದೆ ವ್ರತ ಮಾಡಿದರು.

ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಾಲಯಕ್ಕೆ ಅಮಿತಾಭ್‌ ಬರಿಗಾಲಿನಲ್ಲಿ ಇರುಮುಡಿ ಹೊತ್ತು ಕಠಿಣ ಪ್ರಯಾಣ ಬೆಳೆಸಿದರು. ಹಿರಿಯ ತಮಿಳು ನಟ ಮತ್ತು ಮಹಾ ಗುರುಸ್ವಾಮಿ ಎಂ.ಎನ್. ನಂಬಿಯಾರ್ ಅವರ ಮಾರ್ಗದರ್ಶನದಲ್ಲಿ 7 ಕಿ.ಮೀ ಬೆಟ್ಟವನ್ನು ಹತ್ತಿದರು. ಟಿ.ನಗರದ ಗಿರಿ ರಸ್ತೆಯಲ್ಲಿರುವ ಎಸ್. ರಾಮನಾಥನ್ ಅವರ ಮನೆಯಲ್ಲಿ ನಡೆದ ಅಯ್ಯಪ್ಪ ಪೂಜೆಗಳಲ್ಲಿ ಭಾಗವಹಿಸಿದರು. ಅವರ ಸರಳತೆ ಮತ್ತು ಭಕ್ತಿ ಅನೇಕ ಅಯ್ಯಪ್ಪ ಭಕ್ತರನ್ನು ಬೆರಗುಗೊಳಿಸಿತಂತೆ.

ಅಮಿತಾಭ್‌ ಬಚ್ಚನ್ ಕರ್ನಾಟಕ ಮತ್ತು ಕನ್ನಡ ಚಿತ್ರರಂಗದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರು. ರಮೇಶ್ ಸಿಪ್ಪಿ ಅವರ ಕಲ್ಟ್ ಕ್ಲಾಸಿಕ್ ಶೋಲೆ (1975) ಅನ್ನು ಬೆಂಗಳೂರಿನ ಬಳಿಯ ಸಣ್ಣ ಪಟ್ಟಣವಾದ ರಾಮನಗರದ ಬಂಡೆಗಳ ಪ್ರದೇಶದಲ್ಲಿ ಚಿತ್ರೀಕರಿಸಲಾಗಿತ್ತು. ಎರಡು ವರ್ಷಗಳ ಕಾಲ ನಡೆದ ಚಿತ್ರೀಕರಣಕ್ಕೆ ಅನುಕೂಲವಾಗುವಂತೆ ನಿರ್ಮಾಪಕ ಜಿಪಿ ಸಿಪ್ಪಿ ಬೆಂಗಳೂರಿನಿಂದ ರಾಮನಗರಕ್ಕೆ ರಸ್ತೆ ನಿರ್ಮಿಸಿದರು. ಕಲಾ ನಿರ್ದೇಶಕರು ಚಿತ್ರಕ್ಕಾಗಿ ಸ್ಥಳದಲ್ಲಿ ಸಂಪೂರ್ಣ ಪಟ್ಟಣವನ್ನು ನಿರ್ಮಿಸಿದರು. ಆಗ ಅಮಿತಾಭ್‌ ಬೆಂಗಳೂರಿನಲ್ಲೇ ಇದ್ದರು. 

ಅಜಯ್ ದೇವಗನ್ ನಿಜವಾದ ಹೆಸರಿನ ರಹಸ್ಯ, ನಟಿಸಿದ ಹಲವು ಚಿತ್ರಗಳಿಗೆ ತನ್ನದೇ ಹೆಸರಿಟ್ಟಿದ್ದೇಕೆ?

ಡಾ. ರಾಜ್‌ಕುಮಾರ್ ಬಗ್ಗೆ ಅಮಿತಾಭ್ ಅವರಿಗೆ ಅಪಾರ ಗೌರವವಿತ್ತು ಮತ್ತು ಇಬ್ಬರೂ ಚೆನ್ನಾಗಿ ಬಾಂಧವ್ಯ ಹೊಂದಿದ್ದರು. ಇನ್ನು ರಾಜ್‌ಕುಮಾರ್‌ ಅವರನ್ನೂ ಅಮಿತಾಭ್‌ ಭೇಟಿಯಾಗಿದ್ದರು. ಕೂಲಿ ಫಿಲಂನಲ್ಲಿ ಒಂದು ಕ್ಯಾಮಿಯೋ ರೋಲ್‌ನಲ್ಲಿ ಭಾಗವಹಿಸುವಂತೆ ಅಣ್ಣಾವ್ರರನ್ನುಅಮಿತಾಭ್‌ ವಿನಂತಿಸಿಕೊಂಡಿದ್ದರು. ಆದರೆ ಕನ್ನಡ ಹೊರತು ಅನ್ಯಭಾಷೆಯಲ್ಲಿ ನಟಿಸುವುದಿಲ್ಲ ಎಂಬ ತಮ್ಮ ವ್ರತವನ್ನು ಡಾ. ರಾಜ್‌ ಮುರಿಯಲಿಲ್ಲ. ಆಗ ಐದು ವರ್ಷ ವಯಸ್ಸಿನ ಪುನೀತ್ ಅವರನ್ನು ಅಮಿತಾಭ್ ಹೊತ್ತುಕೊಂಡು ಹೋಗಿ ಛಾಯಾಚಿತ್ರಗಳಿಗೆ ಪೋಸ್ ನೀಡಿದರು. ಅವರ ಕೊನೆಯ ವರ್ಷಗಳಲ್ಲಿಯೂ ಸಹ, ಪುನೀತ್ ಈ ಭೇಟಿಯನ್ನು ಪ್ರೀತಿಯ ನೆನಪುಗಳೊಂದಿಗೆ ನೆನಪಿಸಿಕೊಳ್ಳುತ್ತಿದ್ದರು.

ಕನ್ನಡ ಸೇರಿ ದಕ್ಷಿಣದ ಭಾಷೆಗಳಲ್ಲಿ ಮರುಜನ್ಮ ಪಡೆದ ಅಮೀರ್‌ ಖಾನ್‌ನ 5 ಸೂಪರ್‌ಹಿಟ್‌ ಸಿನಿಮಾಗಳು!