2025ರ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಚಾಂಪಿಯನ್ ಆಗಿದೆ. ಆದರೆ, ಪಾಕ್ ಮೂಲದ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತೀಯ ತಂಡ ನಿರಾಕರಿಸಿದ್ದರಿಂದ ವಿವಾದ ಸೃಷ್ಟಿಯಾಗಿದೆ. ಇದರಿಂದ ಕೋಪಗೊಂಡ ನಖ್ವಿ ಟ್ರೋಫಿಯೊಂದಿಗೆ ಹೋಟೆಲ್‌ಗೆ ತೆರಳಿದರು.

ದುಬೈ: 2025ರ ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಬದ್ದ ಎದುರಾಳಿ ಪಾಕಿಸ್ತಾನವನ್ನು 5 ವಿಕೆಟ್ ಅಂತರದಲ್ಲಿ ಬಗ್ಗುಬಡಿಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ ಪಂದ್ಯ ಮುಕ್ತಾಯದ ಬಳಿಕ ಹಲವು ನಾಟಕೀಯ ಸನ್ನಿವೇಷಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಸಾಕ್ಷಿಯಾಯಿತು.

ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ಎದುರು ಗೆದ್ದು ಬೀಗಿದ ಭಾರತಕ್ಕೆ ಇನ್ನೂ ಟ್ರೋಫಿ ಸಿಕ್ಕಿಲ್ಲ. ಇದಕ್ಕೆ ಕಾರಣವಾಗಿದ್ದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಮೊಹ್ಸಿನ್ ನಖ್ವಿ. ಯಾಕೆಂದರೆ ಭಾರತೀಯ ತಂಡವು ಪಾಕ್ ಮೂಲದ ನಖ್ವಿ ಅವರಿಂದ ಏಷ್ಯಾಕಪ್ ಟ್ರೋಫಿ ಸ್ವೀಕರಿಸುವುದಿಲ್ಲ ಎಂದು ಪಟ್ಟು ಹಿಡಿದರು. ಇದಾದ ಬಳಿಕ ಸಿಟ್ಟಿಗೆದ್ದ ನಖ್ವಿ ಏಷ್ಯಾಕಪ್ ಟ್ರೋಫಿ ಹಾಗೂ ಮೆಡಲ್ ಸಹಿತ ತಾವಿದ್ದ ಹೋಟೆಲ್‌ಗೆ ಓಡಿ ಹೋದರು. ಅದರ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೊಹ್ಸಿನ್ ನಖ್ವಿ ಅವರ ವಿಡಿಯೋ ವೈರಲ್:

ಭಾರತ ತಂಡವು ಏಷ್ಯಾಕಪ್‌ ಫೈನಲ್‌ಗೂ ಮೊದಲೇ ಒಂದು ವೇಳೆ ಗೆದ್ದರೇ ನಾವು ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಒಂದು ವೇಳೆ ಮೊಹ್ಸಿನ್ ನಖ್ವಿ ಪಾಕಿಸ್ತಾನ ಸರ್ಕಾರದ ಮಂತ್ರಿಯಾಗಿರದೇ ಇದ್ದಿದ್ದರೇ, ಅವರ ಕೈಯಿಂದ ಭಾರತ ಏಷ್ಯಾಕಪ್ ಟ್ರೋಫಿ ಸ್ವೀಕರಿಸುವ ಸಾಧ್ಯತೆಯಿತ್ತು. ಇನ್ನು ಏಷ್ಯಾಕಪ್ ಫೈನಲ್ ಮುಕ್ತಾಯದ ಬಳಿಕ ಮೊಹ್ಸಿನ್ ನಖ್ವಿ ಟ್ರೋಫಿ ಇಟ್ಟುಕೊಂಡು ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ಸಾಕಷ್ಟು ಹೊತ್ತು ಭಾರತೀಯ ಆಟಗಾರರು ಬರಬಹುದು ಎಂದು ಕಾಯುತ್ತಾ ನಿಂತಿದ್ದರು. ಆದರೆ ಭಾರತದ ಆಟಗಾರರು ತಮ್ಮ ಪಾಡಿಗೆ ತಾವು ಮೈದಾನದಲ್ಲಿ ಗೆಲುವಿನ ಸಂಭ್ರಮಾಚರಣೆ ಮಾಡುತ್ತಿದ್ದರು. ಇದಾದ ಬಳಿಕ ರೊಚ್ಚಿಗೆದ್ದ ನಖ್ವಿ ಟ್ರೋಫಿ ಹಿಡಿದುಕೊಂಡು ತಾವಿದ್ದ ಹೋಟೆಲ್‌ ಕಡೆ ಕಾಲ್ಕಿತ್ತಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Scroll to load tweet…

ಏಷ್ಯಾಕಪ್‌ನಲ್ಲಿ ಭಾರತದ ಎದುರು ಪಾಕಿಸ್ತಾನ ಹ್ಯಾಟ್ರಿಕ್ ಸೋಲಿನ ಮುಖಭಂಗ

ಪಹಲ್ಗಾಂ ಉಗ್ರದಾಳಿ ಹಾಗೂ ಆಪರೇಷನ್ ಸಿಂದೂರ್ ಬಳಿಕ ಮೊದಲ ಸಲ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದವು. ಗ್ರೂಪ್‌ ಹಂತದಲ್ಲಿ ಪಾಕಿಸ್ತಾನ ತಂಡದ ಎದುರು ಟೀಂ ಇಂಡಿಯಾ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಇದಾದ ಬಳಿಕ ಸೂಪರ್-4 ಹಂತದಲ್ಲಿ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಣಸಾಡಿದ್ದವು. ಆಗ ಭಾರತ ತಂಡವು 6 ವಿಕೆಟ್ ಗಳ ಜಯ ಸಾಧಿಸಿತ್ತು. ಇದೀಗ ಫೈನಲ್‌ನಲ್ಲಿ ಪಾಕಿಸ್ತಾನ ಎದುರು ಟೀಂ ಇಂಡಿಯಾ 5 ವಿಕೆಟ್ ಜಯ ಸಾಧಿಸುವುದರೊಂದಿಗೆ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದೆ.ಇದರ ಜತೆಗೆ 9ನೇ ಬಾರಿಗೆ ಏಷ್ಯಾಕಪ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ.