ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಈ ಬಾರಿ ಬಹುಮಾನದ ಮೊತ್ತವನ್ನು ದುಪ್ಪಟ್ಟುಗೊಳಿಸಲಾಗಿದ್ದು, ಚಾಂಪಿಯನ್‌ ತಂಡಕ್ಕೆ ಸುಮಾರು 2.6 ಕೋಟಿ ರೂಪಾಯಿ ಲಭಿಸಲಿದೆ.

ದುಬೈ: ಏಷ್ಯಾಕಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಇಂದು ದುಬೈನಲ್ಲಿ ಸೆಣಸಾಡಲಿವೆ. ಏಷ್ಯಾಕಪ್‌ನ 41 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ. 2023ರ ಏಷ್ಯಾಕಪ್‌ಗೆ ಹೋಲಿಸಿದರೆ, ಈ ಬಾರಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಬಹುಮಾನದ ಮೊತ್ತವನ್ನು ಶೇ.100ರಷ್ಟು ಹೆಚ್ಚಿಸಿದೆ. ಏಷ್ಯಾಕಪ್ ಗೆದ್ದವರಿಗೆ ಮೂರು ಲಕ್ಷ ಅಮೆರಿಕನ್ ಡಾಲರ್ (ಸುಮಾರು 2.6 ಕೋಟಿ ರೂಪಾಯಿ) ಬಹುಮಾನ ಸಿಗಲಿದೆ.

ನಗದು ಬಹುಮಾನದಲ್ಲಿ ಭಾರೀ ಏರಿಕೆ 

ರನ್ನರ್ ಅಪ್ ತಂಡಕ್ಕೆ ಒಂದೂವರೆ ಲಕ್ಷ ಅಮೆರಿಕನ್ ಡಾಲರ್ (ಸುಮಾರು 1.3 ಕೋಟಿ ರೂಪಾಯಿ) ಬಹುಮಾನ ಸಿಗಲಿದೆ. ಟೂರ್ನಿಯ ಶ್ರೇಷ್ಠ ಆಟಗಾರನಿಗೆ 12.50 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು. 2023ರಲ್ಲಿ ಏಕದಿನ ಮಾದರಿಯಲ್ಲಿ ನಡೆದ ಏಷ್ಯಾಕಪ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಪ್ರಶಸ್ತಿ ಗೆದ್ದಾಗ 1.6 ಕೋಟಿ ರೂಪಾಯಿ ಬಹುಮಾನದ ಹಣವನ್ನು ಪಡೆದಿತ್ತು. ಆದರೆ, 2022ರಲ್ಲಿ ಟಿ20 ಮಾದರಿಯಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಚಾಂಪಿಯನ್ ಆದ ಶ್ರೀಲಂಕಾಕ್ಕೆ 1.6 ಕೋಟಿ ಮತ್ತು ರನ್ನರ್ ಅಪ್ ಆದ ಪಾಕಿಸ್ತಾನಕ್ಕೆ 79.66 ಲಕ್ಷ ರೂಪಾಯಿ ಬಹುಮಾನ ಸಿಕ್ಕಿತ್ತು.

8 ತಂಡಗಳು ಭಾಗಿಯಾಗಿರುವ ಟೂರ್ನಿ

ಈ ಬಾರಿಯ ಟಿ20 ಮಾದರಿಯ ಏಷ್ಯಾಕಪ್‌ನಲ್ಲಿ ಭಾರತ ಸೇರಿದಂತೆ ಎಂಟು ತಂಡಗಳು ಸ್ಪರ್ಧಿಸಿದ್ದವು. ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಹಾಂಗ್ ಕಾಂಗ್, ಯುಎಇ ಮತ್ತು ಓಮನ್ ತಂಡಗಳು ಏಷ್ಯಾಕಪ್‌ನಲ್ಲಿ ಭಾಗವಹಿಸಿದ್ದವು. ಮೊದಲ ಸುತ್ತಿನ ಪಂದ್ಯಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಇದರಲ್ಲಿ 'ಎ' ಗುಂಪಿನಿಂದ ಅಗ್ರಸ್ಥಾನ ಪಡೆದ ಭಾರತ, ಪಾಕಿಸ್ತಾನ ಹಾಗೂ 'ಬಿ' ಗುಂಪಿನಿಂದ ಅಗ್ರಸ್ಥಾನ ಪಡೆದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಸೂಪರ್ ಫೋರ್‌ಗೆ ಅರ್ಹತೆ ಪಡೆದವು. ಸೂಪರ್ ಫೋರ್‌ನಲ್ಲಿ ನಾಲ್ಕು ತಂಡಗಳು ಪರಸ್ಪರ ಸ್ಪರ್ಧಿಸಿ, ಅಗ್ರಸ್ಥಾನ ಪಡೆದ ಭಾರತ ಮತ್ತು ಪಾಕಿಸ್ತಾನ ಫೈನಲ್‌ಗೆ ಪ್ರವೇಶಿಸಿದವು. ಎಂಟು ಬಾರಿ ಪ್ರಶಸ್ತಿ ಗೆದ್ದಿರುವ ಭಾರತ ಏಷ್ಯಾಕಪ್‌ನ ಹಾಲಿ ಚಾಂಪಿಯನ್ ಆಗಿದೆ.

ಇನ್ನು ಸೂಪರ್‌ 4 ಹಂತದಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ ಶ್ರೀಲಂಕಾ ತಂಡವು ಸೂಪರ್-4 ಹಂತದಲ್ಲಿ ನಾಲ್ಕನೇ ಸ್ಥಾನ ಪಡೆದು ಅಭಿಯಾನ ಮುಗಿಸಿದರೆ, ಒಂದು ಗೆಲುವು ಹಾಗೂ ಎರಡು ಸೋಲು ಅನುಭವಿಸಿದ ಬಾಂಗ್ಲಾದೇಶ ತಂಡವು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದೀಗ ಚಾಂಪಿಯನ್ ಪಟ್ಟ ಯಾರು ಅಲಂಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಏಷ್ಯಾಕಪ್ ಇತಿಹಾಸದಲ್ಲಿ ಟೀಂ ಇಂಡಿಯಾ ಎಂಟು ಬಾರಿ ಚಾಂಪಿಯನ್ ಆಗುವ ಮೂಲಕ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ. ಇನ್ನು ಶ್ರೀಲಂಕಾ ಆರು ಬಾರಿ ಏಷ್ಯಾಕಪ್ ಟ್ರೋಫಿ ಗೆದ್ದು ಬೀಗಿದೆ. ಪಾಕಿಸ್ತಾನ ತಂಡವು ಎರಡು ಬಾರಿ ಮಾತ್ರ ಏಷ್ಯಾಕಪ್ ಟ್ರೋಪಿಗೆ ಮುತ್ತಿಕ್ಕಿದೆ. ಈ ಬಾರಿಯ ಏಷ್ಯಾಕಪ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಭಾರತ ಗುರುತಿಸಿಕೊಂಡಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಸತತ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಅಜೇಯವಾಗಿಯೇ ಫೈನಲ್ ಪ್ರವೇಶಿಸಿದೆ. ಇನ್ನೊಂದೆಡೆ ಪಾಕಿಸ್ತಾನ ತಂಡವು ಆಡಿದ ಆರು ಪಂದ್ಯಗಳ ಪೈಕಿ ಎರಡು ಸೋಲು ಹಾಗೂ 4 ಗೆಲುವು ಸಹಿತ ಫೈನಲ್ ಪ್ರವೇಶಿಸಿದೆ. ಪಾಕಿಸ್ತಾನ ತಂಡವನ್ನು ಭಾರತ ಗ್ರೂಪ್‌ ಹಂತದಲ್ಲಿ ಒಮ್ಮೆ ಹಾಗೂ ಸೂಪರ್-4 ಹಂತದಲ್ಲಿ ಒಮ್ಮೆ ಸೋಲಿಸಿದೆ. ಇದೀಗ ಭಾರತ ತಂಡವು ಪಾಕಿಸ್ತಾನವನ್ನು ಮೂರನೇ ಬಾರಿ ಸೋಲಿಸುವ ಮೂಲಕ ಒಂಬತ್ತನೇ ಏಷ್ಯಾಕಪ್ ಜಯಿಸುವ ಕನಸು ಕಾಣುತ್ತಿದೆ.