Asia Cup Final ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದ ಭಾರತಕ್ಕೆ ಶಾಕ್, ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ, ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ತಂಡದಲ್ಲಿನ ಮಹತ್ವದ ಬದಲಾವಣೆ ಅಭಿಮಾನಿಗಳಿಗೆ ಆಘಾತ ನೀಡಿದೆ.
ದುಬೈ (ಸೆ.28) ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಫೈನಲ್ ಪಂದ್ಯ ಆರಂಭಗೊಂಡಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಮಹತ್ವದ ಪಂದ್ಯದಲ್ಲೇ ಹಾರ್ದಿಕ್ ಪಾಂಡ್ಯ ಪಂದ್ಯದಿಂದ ಹೊರಗುಳಿದಿದ್ದಾರೆ. ಗಾಯಗೊಂಡಿರುವ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದೆ. ಪಾಕಿಸ್ತಾನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಟೀಂ ಇಂಡಿಯಾ ಪ್ಲೇಯಿಂಗ್ 11
ಅಭಿಶೇಕ್ ಶರ್ಮಾ, ಶುಬಮ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ರಿಂಕು ಸಿಂಗ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ
ಪಾಕಿಸ್ತಾನ ಪ್ಲೇಯಿಂಗ್ 11
ಶಾಹಿಬ್‌ಜಾದ ಫರ್ಹಾನ್, ಫಕರ್ ಜಮಾನ್, ಸೈಮ್ ಆಯೂಬ್, ಸಲ್ಮಾನ್ ಆಘಾ (ನಾಯಕ), ಹುಸೈನ್ ತಲಾಟ್, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ನವಾಜ್, ಫಾಹೀಮ್ ಅಶ್ರಫ್, ಶಾಹೀನ್ ಆಫ್ರಿದಿ, ಹ್ಯಾರಿಸ್ ರೌಫ್, ಅಬ್ರಾರ್ ಅಹಮ್ಮದ್
ನೋ ಹ್ಯಾಂಡ್ ಶೇಕ್
ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ಟೂರ್ನಿ ಆರಂಭಕ್ಕೂ ಮೊದಲೇ ಭಾರಿ ವಿವಾದಕ್ಕೆ ಕಾರಣಾಗಿತ್ತು. ಪೆಹಲ್ಗಾಂ ಉಗ್ರ ದಾಳಿ ಬಳಿಕ ಪಾಕಿಸ್ತಾನ ಜೊತೆಗಿನ ಎಲ್ಲಾ ವ್ಯವಹಾರ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಇಂಡೋ-ಪಾಕ್ ಪಂದ್ಯಕ್ಕೂ ಅವಕಾಶ ಬೇಡ ಎಂದು ಒತ್ತಡ ಕೇಳಿಬಂದಿತ್ತು. ಆದರೆ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕ್ರೀಡೆಗೆ ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ಟೀಂ ಇಂಡಿಯಾ, ಪಾಕಿಸ್ತಾನ ಜೊತೆಗೆ ಹ್ಯಾಂಡ್‌ಶೇಕ್, ಮಾತುಕತೆ ಸೇರಿದಂತೆ ಎಲ್ಲವನ್ನೂ ನಿರಾಕರಿಸಿದೆ. ಕಳೆದ ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನ ತಂಡದ ಜೊತೆ ಶೇಕ್ ಹ್ಯಾಂಡ್ ಮಾಡಿಲ್ಲ. ಯಾವುದೇ ಮಾತುಕತೆಯೂ ನಡೆಸಿಲ್ಲ. ಫೈನಲ್ ಪಂದ್ಯದಲ್ಲೂ ಸೂರ್ಯಕುಮಾರ್ ಯಾದವ್ ಸೈನ್ಯ ನೋ ಹ್ಯಾಂಡ್ ಶೇಕ್, ನೋ ಟಾಕ್ ಪಾಲಿಸಿ ಮುಂದುವರಿಸಿದೆ.
ಏಷ್ಯಾಕಪ್ ಫೈನಲ್ ಕುತೂಹಲ
ಭಾರತ ಹಾಗೂ ಪಾಕಿಸ್ತಾನ ಏಷ್ಯಾಕಪ್ ಫೈನಲ್ ಕುತೂಹಲ ತೀವ್ರಗೊಳ್ಳುತ್ತಿದೆ. ಬರೋಬ್ಬರಿ 41 ವರ್ಷಗಳ ಬಳಿಕ ಭಾರತ ಹಾಗೂ ಪಾಕಿಸ್ತಾನ ಏಷ್ಯಾಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗುತ್ತಿದೆ. ಹೀಗಾಗಿ ಕುತೂಹಲ ತೀವ್ರಗೊಂಡಿದೆ. ಫೈನಲ್ ಮುಖಾಮುಖಿಗಳಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಉತ್ತಮ ಪ್ರದರ್ಶನ ನೀಡಿದೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೇರಿದಂತೆ ಕೆಲ ಫೈನಲ್ ಪಂದ್ಯಗಳಲ್ಲಿ ಪಾಕಿಸ್ತಾನ ದಿಟ್ಟ ಹೋರಾಟ ನೀಡಿದೆ. ಈ ಬಾರಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ಮೂಲಕ ಫೈನಲ್ ಪ್ರವೇಶಿಸಿದೆ. ಇಷ್ಟೇ ಅಲ್ಲ ಟಿ20 ಮಾದರಿಯಲ್ಲಿ ಟೀಂ ಇಂಡಿಯಾ 2024ರಿಂದ 37 ಪಂದ್ಯ ಆಡಿದೆ. ಇದರಲ್ಲಿ 34 ಪಂದ್ಯ ಗೆದ್ದುಕೊಂಡಿದೆ.


