ಭಾರತ-ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡದಲ್ಲಿ ನಾಲ್ಕು ಬದಲಾವಣೆಗಳಿವೆ. ಇಂಗ್ಲೆಂಡ್ ತಂಡದಲ್ಲೂ ನಾಲ್ಕು ಬದಲಾವಣೆಗಳಾಗಿವೆ.
ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಆಂಡರ್‌ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಓಲಿ ಪೋಪ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಶುಭ್‌ಮನ್ ಗಿಲ್ ಈ ಟೆಸ್ಟ್ ಸರಣಿಯಲ್ಲಿ ಸತತ 5ನೇ ಬಾರಿಗೆ ಟಾಸ್ ಸೋತಿದ್ದಾರೆ. ಭಾರತ ತಂಡವು ಸದ್ಯ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-2ರ ಹಿನ್ನಡೆಯಲ್ಲಿದ್ದು, ಕೊನೆಯ ಟೆಸ್ಟ್ ಗೆದ್ದು ಸರಣಿ ಡ್ರಾ ಮಾಡಿಕೊಳ್ಳಲು ಶುಭ್‌ಮನ್ ಗಿಲ್ ಪಡೆ ಎದುರು ನೋಡುತ್ತಿದೆ.
ಈಗಾಗಲೇ ಇಂಗ್ಲೆಂಡ್ ತಂಡವು ನಾಲ್ಕು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವುದು ಒಂದು ದಿನ ಮೊದಲೇ ಖಚಿತವಾಗಿತ್ತು. ಇನ್ನೊಂದೆಡೆ ಭಾರತ ತಂಡದಲ್ಲಿ ನಾಲ್ಕು ಬದಲಾವಣೆ ಮಾಡಲಾಗಿದ್ದು, ಕನ್ನಡಿಗರಾದ ಪ್ರಸಿದ್ದ್ ಕೃಷ್ಣ, ಕರುಣ್ ನಾಯರ್, ಧ್ರುವ್ ಜುರೆಲ್ ಹಾಗೂ ಆಕಾಶ್‌ದೀಪ್ ತಂಡ ಕೂಡಿಕೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ, ಕರುಣ್ ನಾಯರ್, ಅನ್ಶೂಲ್ ಕಂಬೋಜ್ ಹಾಗೂ ಶಾರ್ದೂಲ್ ಠಾಕೂರ್‌ಗೆ ವಿಶ್ರಾಂತಿ ನೀಡಲಾಗಿದೆ.
ಸ್ಟೋಕ್ಸ್ ಸೇರಿ ನಾಲ್ವರು ಔಟ್: ಪೋಪ್ ನಾಯಕ
ಇಂಗ್ಲೆಂಡ್ ತಂಡ ಈ ಪಂದ್ಯದಲ್ಲಿ 4 ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಭುಜದ ಗಾಯಕ್ಕೆ ತುತ್ತಾಗಿರುವ ನಾಯಕ ಬೆನ್ ಸ್ಟೋಕ್ಸ್ ಪಂದ್ಯಕ್ಕೆ ಗೈರಾಗಲಿದ್ದಾರೆ. ವೇಗಿ ಆರ್ಚರ್, ಬ್ರೈಡನ್ ಕಾರ್ಸ್, ಸ್ಪಿನ್ನರ್ ಡಾವ್ಸನ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಓಲಿ ಪೋಪ್ ತಂಡ ಮುನ್ನಡೆಸಲಿದ್ದಾರೆ. ಆಲ್ರೌಂಡರ್ ಜೇಕಬ್ ಬೆಥೆಲ್ ವೇಗಿ ಆಟ್ಕಿನ್ಸನ್, ಜೋಶ್ ಟಂಗ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಮತ್ತೆ ಕನ್ನಡಿಗರಿಗೆ ಮಣೆಹಾಕಿದ ಟೀಂ ಮ್ಯಾನೇಜ್‌ಮೆಂಟ್: ಭಾರತ ತಂಡದಲ್ಲಿ ನಿರ್ಣಾಯಕ ಪಂದ್ಯಕ್ಕೆ ಮಹತ್ವದ ಬದಲಾವಣೆಗಳಾಗಿವೆ. ರಿಷಭ್ ಪಂತ್. ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ ಹಾಗೂ ಅನ್ಶೂಲ್ ಕಂಬೋಜ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಪೈಕಿ ಆರಂಭಿಕ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದ ಕನ್ನಡಿಗರಾದ ಪ್ರಸಿದ್ದ್ ಕೃಷ್ಣ ಹಾಗೂ ಕರುಣ್ ನಾಯರ್‌ಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ಈ ಇಬ್ಬರು ಆಟಗಾರರು ಸದುಪಯೋಗ ಪಡಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಅರ್ಶದೀಪ್ ಸಿಂಗ್ - ಕುಲ್ದೀಪ್ ಯಾದವ್‌ಗೆ ನಿರಾಸೆ: ಇನ್ನು ಇಂಗ್ಲೆಂಡ್ ಸರಣಿಗೆ ಸ್ಥಾನ ಪಡೆದಿದ್ದ ತಂಡದ ಏಕೈಕ ತಜ್ಞ ಸ್ಪಿನ್ನರ್ ಕುಲ್ದೀಪ್ ಯಾದವ್‌ಗೆ ಮತ್ತೊಮ್ಮೆ ನಿರಾಸೆ ಎದುರಾಗಿದೆ. ಐದನೇ ಟೆಸ್ಟ್‌ನಲ್ಲೂ ಲೆಗ್‌ಸ್ಪಿನ್ನರ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿಲ್ಲ. ಇನ್ನೊಂದೆಡೆ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ವಿಶ್ವಾಸದಲ್ಲಿದ ಎಡಗೈ ವೇಗಿ ಅರ್ಶದೀಪ್ ಸಿಂಗ್ ಕೂಡಾ ತಂಡದಲ್ಲಿ ಅವಕಾಶ ಸಿಕ್ಕಿಲ್ಲ.
ಉಭಯ ತಂಡಗಳ ಆಟಗಾರರ ಪಟ್ಟಿ:
ಭಾರತ: ಕೆ ಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭ್‌ಮನ್ ಗಿಲ್(ನಾಯಕ), ಕರುಣ್ ನಾಯರ್ ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್, ಆಕಾಶ್‌ದೀಪ್, ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ.
ಇಂಗ್ಲೆಂಡ್:
ಓಲಿ ಪೋಪ್ (ನಾಯಕ), ಜಾಕ್ ಕ್ರಾಲಿ, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್, ಜೇಕಬ್ ಬೆಥೆಲ್, ಜೇಮಿ ಸ್ಮಿತ್, ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೇಮಿ ಓವರ್ಟನ್, ಜೋಶ್ ಟಂಗ್.
ಪಿಚ್ ರಿಪೋರ್ಟ್: ಈ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿಯಾಗಿದ್ದು, ದೊಡ್ಡ ಮೊತ್ತದ ಪಂದ್ಯಗಳಿಗೆ ಹೆಸರುವಾಸಿ. ಮೊದಲ 3 ದಿನ ವೇಗದ ಬೌಲರ್‌ಗಳು ಮೇಲುಗೈ ಸಾಧಿಸಲಿದ್ದು, ಕೊನೆ ದಿನ ಸ್ಪಿನ್ನರ್‌ಗಳಿಗೆ ನೆರವಾಗಬಹುದು.


