ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚೊಚ್ಚಲ ಐಸಿಸಿ ಏಕದಿನ ವಿಶ್ವಕಪ್ ಗೆದ್ದಿದೆ. ಗೆಲುವಿನ ನಂತರ, ಹರ್ಮನ್‌ಪ್ರೀತ್ ಕೋಚ್ ಅಮೂಲ್ ಮಜುಂದಾರ್ ಮತ್ತು ಐಸಿಸಿ ಅಧ್ಯಕ್ಷ ಜಯ್ ಶಾ ಅವರಿಗೆ ಗೌರವ ಸಲ್ಲಿಸುವ ಮೂಲಕ ತಮ್ಮ ಸಂಸ್ಕಾರವನ್ನು ಪ್ರದರ್ಶಿಸಿದ್ದಾರೆ.
ನವಿ ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎದುರು 52 ರನ್ ಅಂತರದ ರೋಚಕ ಜಯ ಸಾಧಿಸಿ ಚೊಚ್ಚಲ ಬಾರಿಗೆ ಐಸಿಸಿ ವಿಶ್ವಕಪ್ ಗೆದ್ದು ಬೀಗಿದೆ. ಇದೀಗ ಐಸಿಸಿ ವಿಶ್ವಕಪ್ ಗೆದ್ದ ಅತಿಹಿರಿಯ ನಾಯಕಿ ಎನ್ನುವ ಹೆಗ್ಗಳಿಕೆಗೆ 36 ವರ್ಷದ ಹರ್ಮನ್‌ಪ್ರೀತ್ ಕೌರ್ ಪಾತ್ರರಾಗಿದ್ದಾರೆ.
ಕಳೆದೊಂದುವರೆ ದಶಕದಿಂದಲೂ ಭಾರತ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಹರ್ಮನ್‌ಪ್ರೀತ್ ಕೌರ್, ಆಟಗಾರ್ತಿಯಾಗಿ ಹಾಗೂ ನಾಯಕಿಯಾಗಿ ಹಲವು ಬಾರಿ ಐಸಿಸಿ ಟ್ರೋಫಿ ಹತ್ತಿರ ಬಂದು ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದ್ದರು. ಇದೀಗ ಕೊನೆಗೂ ಹರ್ಮನ್ ಪಡೆ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುತ್ತಿದ್ದಂತೆಯೇ ಮೈದಾನದಲ್ಲಿಯೇ ಭಾವುಕರಾದರು. ಇನ್ನು ಟ್ರೋಫಿ ಸ್ವೀಕರಿಸುವ ಮುನ್ನ ಹರ್ಮನ್‌ಪ್ರೀತ್ ಕೌರ್, ಕ್ಯಾಮರ ಮುಂದೆ ಭಾರತೀಯ ಸಂಸ್ಕಾರವನ್ನು ಅನಾವರಣ ಮಾಡುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಐಸಿಸಿ ಮುಖ್ಯಸ್ಥ ಜಯ್ ಶಾಗೆ ಗೌರವ ಸಲ್ಲಿಸಿದ ಹರ್ಮನ್‌ಪ್ರೀತ್ ಕೌರ್:
ಭಾರತ ಮಹಿಳಾ ತಂಡವು ಏಕದಿನ ವಿಶ್ವಕಪ್ ಚಾಂಪಿಯನ್ ಅಗುತ್ತಿದ್ದಂತೆಯೇ, 36 ವರ್ಷದ ಹರ್ಮನ್‌ಪ್ರೀತ್ ಕೌರ್ ತುಂಬಾ ಭಾವುಕರಾದರು. ಭಾರತ ಫೈನಲ್ ಗೆದ್ದು ಬೀಗುತ್ತಿದ್ದಂತೆಯೇ ಹರ್ಮನ್‌ಪ್ರೀತ್ ಕೌರ್, ತಂಡದ ಹೆಡ್ ಕೋಚ್ ಅಮೂಲ್ ಮಜುಂದಾರ್ ಅವರನ್ನು ಬಿಗಿದಪ್ಪಿ ಆನಂದ ಭಾಷ್ಪ ಸುರಿಸಿದರು. ಇದಾದ ಬಳಿಕ ಗುರು ಕಾಣಿಕೆ ರೂಪದಲ್ಲಿ ಕೋಚ್ ಮಜುಂದಾರ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು ಇದಾದ ಬಳಿಕ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಸ್ವೀಕರಿಸುವ ಮುನ್ನ ಐಸಿಸಿ ಚೇರ್‌ಮನ್ ಜಯ್ ಶಾ ಅವರ ಕಾಲಿಗೆರಗಲು ಮುಂದಾದರು. ಆದರೆ ಜಯ್ ಶಾ, ಅರ್ಧದಲ್ಲೇ ಹರ್ಮನ್‌ಪ್ರೀತ್ ಕೌರ್ ಅವರನ್ನು ತಡೆದು, ಟ್ರೋಫಿ ಹಸ್ತಾಂತರ ಮಾಡಿದರು. ಇದಾದ ಬಳಿಕ ಹರ್ಮನ್ ಪಡೆ ಚೊಚ್ಚಲ ವಿಶ್ವಕಪ್ ಟ್ರೋಫಿಯೊಂದಿಗೆ ಸಂಭ್ರಮಾಚರಣೆ ಮಾಡಿದರು.
ಕೊನೆಗೂ ಟ್ರೋಫಿ ಬರ ನೀಗಿಸಿಕೊಂಡ ಭಾರತ
ಹರ್ಮನ್‌ಪ್ರೀತ್ ಕೌರ್ 2009ರಲ್ಲಿ ಭಾರತ ಮಹಿಳಾ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಆದರೆ 2017ರ ಏಕದಿನ ವಿಶ್ವಕಪ್ ಫೈನಲ್, 2020ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಮುಗ್ಗರಿಸಿತ್ತು. ಆದರೆ ಕ್ರಿಕೆಟ್ ವೃತ್ತಿಜೀವನದ ಸಂಧ್ಯಾಕಾಲದಲ್ಲಿರುವ ಹರ್ಮನ್‌ಪ್ರೀತ್ ಕೌರ್, ಕೊನೆಗೂ ತಮ್ಮ ನಾಯಕತ್ವದಲ್ಲೇ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಇದಷ್ಟೇ ಅಲ್ಲದೇ ಹರ್ಮನ್‌ಪ್ರೀತ್ ಕೌರ್ ಪಡೆ, ಭಾರತ ಪರ ಎರಡು ದಶಕಗಳ ಕಾಲ ಕ್ರಿಕೆಟ್ ಆಡಿ ಕಪ್ ಗೆಲ್ಲಲು ಪ್ರಯತ್ನಿಸಿದ್ದ ಮಾಜಿ ನಾಯಕ ಮಿಥಾಲಿ ರಾಜ್ ಹಾಗೂ ಜೂಲನ್ ಗೋಸ್ವಾಮಿ ಅವರ ಜತೆಗೂ ಟ್ರೋಫಿಯೊಂದಿಗೆ ಸಂಭ್ರಮಿಸಿದ್ದರು ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ


