ರೋಹಿತ್ ಶರ್ಮಾ ನಿವೃತ್ತಿಯಿಂದಾಗಿ ಭಾರತ ಟೆಸ್ಟ್ ತಂಡದ ನಾಯಕತ್ವ ಹುದ್ದೆ ಖಾಲಿಯಾಗಿದ್ದು, ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ನಾಯಕತ್ವದ ಮುಂಚೂಣಿಯಲ್ಲಿದ್ದಾರೆ. ಬುಮ್ರಾ ಮತ್ತು ರಾಹುಲ್ ಕೂಡ ಪರಿಗಣನೆಯಲ್ಲಿದ್ದರೂ, ಗಿಲ್ ನಾಯಕ ಮತ್ತು ಪಂತ್ ಉಪನಾಯಕರಾಗುವ ಸಾಧ್ಯತೆ ಹೆಚ್ಚಿದೆ. ಇಂಗ್ಲೆಂಡ್ ಸರಣಿಗೆ ಮುನ್ನ ಮೇ 23 ರಂದು ತಂಡವನ್ನು ಪ್ರಕಟಿಸುವ ನಿರೀಕ್ಷೆಯಿದೆ.
ನವದೆಹಲಿ: ರೋಹಿತ್ ಶರ್ಮಾ ನಿವೃತ್ತಿಯಿಂದಾಗಿ ಭಾರತ ಟೆಸ್ಟ್ ತಂಡದ ನಾಯಕತ್ವ ಹುದ್ದೆ ಖಾಲಿಯಿದೆ. ಈ ಸ್ಥಾನಕ್ಕೆ ಯುವ ಕ್ರಿಕೆಟಿಗರಾದ ಶುಭಮನ್ ಗಿಲ್ ಹಾಗೂ ರಿಷಭ್ ಪಂತ್‌ರನ್ನು ಬಿಸಿಸಿಐ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ ಎಂದು ಮಾಧ್ಯಮಗಳಲ್ಲಿ
ವರದಿಯಾಗಿದೆ.
ಹಿರಿಯ ಆಟಗಾರರಾದ ಜಸ್‌ಪ್ರೀತ್ ಬುಮ್ರಾ ಹಾಗೂ ಕೆ.ಎಲ್.ರಾಹುಲ್ ನಾಯಕತ್ವ ರೇಸ್‌ನಲ್ಲಿದ್ದಾರೆ. ಆದರೆ ಬುಮ್ರಾ ಪದೇಪದೇಗಾಯಗೊಳ್ಳುತ್ತಿದ್ದಾರೆ.ಮತ್ತೊಂದೆಡೆ ರಾಹುಲ್‌ಗೆ ಈಗ 33 ವರ್ಷ. ಭವಿಷ್ಯದ ದೃಷ್ಟಿಯಿಂದ ಕೆ. ಎಲ್.ರಾಹುಲ್‌ಗೆ ನಾಯಕತ್ವ ನೀಡುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ನಾಯಕನ ಹೊಣೆಗಾರಿಕೆ ಗಿಲ್‌ಗೆ ಸಿಗುವ ಸಾಧ್ಯತೆಯಿದೆ. ಉಪನಾಯಕನಾಗಿ ತಾರಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಆಯ್ಕೆಯಾಗುವ ನಿರೀಕ್ಷೆಯಿದೆ. ಇಂಗ್ಲೆಂಡ್ ಸರಣಿಯ ಭಾಗವಾಗಿ ಇದೇ ತಿಂಗಳ ಕೊನೆಯಲ್ಲಿ ನಾಯಕರ ಹೆಸರು ಘೋಷಣೆಯಾಗಲಿದೆ.
ಭಾರತ ಟೆಸ್ಟ್ ತಂಡದ ನಾಯಕರಾಗಿದ್ದ ರೋಹಿತ್ ಶರ್ಮಾ, ಇದೇ ಮೇ 07ರಂದು ದಿಢೀರ್ ಎನ್ನುವಂತೆ ಟೆಸ್ಟ್ ಮಾದರಿಗೆ ದಿಢೀರ್ ವಿದಾಯ ಘೋಷಿಸಿದ್ದರು. ಇನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡಾ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದ ಸಂಧ್ಯಾಕಾಲದಲ್ಲಿದ್ದಾರೆ. ವಿರಾಟ್ ಕೊಹ್ಲಿಗೆ ಭಾರತ ಟೆಸ್ಟ್ ತಂಡದ ನಾಯಕರಾಗಲು ಬಿಸಿಸಿಐ ಮನವಿ ಮಾಡಿಕೊಂಡಿದೆ ಎಂದು ಮನವಿ ವರದಿಯಾಗಿದೆ. ಆದರೆ ಕೊಹ್ಲಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಇಂಗ್ಲೆಂಡ್ ಟೆಸ್ಟ್ ಸರಣಿಗೆ ಮೇ 23ಕ್ಕೆ ತಂಡ ಪ್ರಕಟ?
ನವದೆಹಲಿ: ಇಂಗ್ಲೆಂಡ್ ವಿರುದ್ಧ ಜೂ.20ರಿಂದ ನಡೆಯಲಿರುವ 5 ಪಂದ್ಯಗಳ ಟೆಸ್ಟ್ ಸರಣಿಗೆ ಮೇ 23ರಂದು ಭಾರತ ತಂಡ ಪ್ರಕಟಗೊಳ್ಳುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ತಂಡ ಘೋಷಣೆಗೆ ಮುನ್ನ ಆಯ್ಕೆ ಸಮಿತಿ ಸಭೆ ನಡೆಯಲಿದೆ. ಬಳಿಕ ಮೇ 23ರಂದು ಸುದ್ದಿಗೋಷ್ಠಿ ನಡೆಸಿ ತಂಡ ಪ್ರಕಟಿಸುವ ಸಾಧ್ಯತೆಯಿದೆ. ಸುದ್ದಿಗೋಷ್ಠಿಯಲ್ಲೇ ಹೊಸ ನಾಯಕನ ಹೆಸರು ಘೋಷಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಇನ್ನು, ಇಂಗ್ಲೆಂಡ್ ಸರಣಿಗೂ ಮುನ್ನ ನಡೆಯಲಿರುವ ಅಭ್ಯಾಸ ಪಂದ್ಯಗಳಿಗೆ ಭಾರತ ‘ಎ’ ತಂಡವನ್ನು ಶೀಘ್ರದಲ್ಲೇ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಮೇ 25ರ ವೇಳೆಗೆ ಭಾರತ ‘ಎ’ ತಂಡ ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದು, ಟೀಂ ಇಂಡಿಯಾ ಮುಖ್ಯ ತಂಡ ಜೂನ್ ಮೊದಲ ವಾರ ಇಂಗ್ಲೆಂಡ್‌ಗೆ ವಿಮಾನವೇರಲಿದೆ ಎಂದು ವರದಿಯಾಗಿದೆ.
ಭಾರತ ಕ್ರಿಕೆಟ್ ತಂಡವು ಈ ಹಿಂದಿನ ಎರಡು ಟೆಸ್ಟ್ ಸರಣಿಯನ್ನು ಸೋತಿದೆ. ತವರಿನಲ್ಲಿ ನಡೆದ ನ್ಯೂಜಿಲೆಂಡ್ ಎದುರಿನ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ವೈಟ್‌ವಾಷ್ ಅನುಭವಿಸಿತ್ತು. ಇದಾದ ಬಳಿಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಭಾರತ ತಂಡ ಅಲ್ಲೂ ಕೂಡಾ ಟೆಸ್ಟ್ ಸರಣಿಯನ್ನು ಸೋಲುವ ಮೂಲಕ ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರುವ ಅವಕಾಶವನ್ನು ಕೈಚೆಲ್ಲಿತ್ತು.
ಇದೀಗ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಯು ನಾಲ್ಕನೇ ಆವೃತ್ತಿಯ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದೃಷ್ಟಿಯಿಂದ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಅವರ ಅನುಪಸ್ಥಿತಿ ಕಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಭಾರತ ತಂಡದ ಮುಂದಿದೆ. ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ನಿತೀಶ್ ಕುಮಾರ್ ರೆಡ್ಡಿ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಪ್ರಸಿದ್ದ್ ಕೃಷ್ಣ ಅವರಂತಹ ಅನುಭವಿ ಹಾಗೂ ಯುವ ಆಟಗಾರರು ಈ ಬಾರಿಯ ಇಂಗ್ಲೆಂಡ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ

