ಐಪಿಎಲ್ ಮುಗಿದ ಕೆಲವೇ ದಿನಗಳಲ್ಲಿ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಆಡಲಿದೆ. ನಿರಂತರ ಕ್ರಿಕೆಟ್‌ನ ಒತ್ತಡದಿಂದಾಗಿ, ಐಪಿಎಲ್ ಪ್ಲೇ-ಆಫ್ ತಲುಪುವ ತಂಡಗಳ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ದೇಸಿ ಟೂರ್ನಿಗಳಲ್ಲಿ ಮಿಂಚಿದ ಯುವ ಆಟಗಾರರಿಗೆ ಅವಕಾಶ ನೀಡಲು ಬಿಸಿಸಿಐ ಚಿಂತಿಸುತ್ತಿದೆ.
ನವದೆಹಲಿ: 19ನೇ ಆವೃತ್ತಿ ಐಪಿಎಲ್ ಮೇ 31ಕ್ಕೆ ಕೊನೆಗೊಳ್ಳಲಿದ್ದು, ಅದರ ಬಳಿಕ ಕೇವಲ 6 ದಿನಗಳ ಅಂತರದಲ್ಲೇ ಭಾರತ ತಂಡ ತವರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆದರೆ ನಿರಂತರ ಕ್ರಿಕೆಟ್‌ನ ಒತ್ತಡ ತಪ್ಪಿಸಲು ಕೆಲ ಪ್ರಮುಖ ಆಟಗಾರರಿಗೆ ಟೆಸ್ಟ್‌ನಿಂದ ವಿಶ್ರಾಂತಿ ನೀಡಲಾಗುತ್ತದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಭಾರತದ ಪ್ರಮುಖ ಆಟಗಾರರು ಐಪಿಎಲ್‌ನ ಪ್ಲೇ-ಆಫ್, ಫೈನಲ್‌ಗೇರುವ ತಂಡಗಳಲ್ಲಿದ್ದರೆ ಅವರನ್ನು ಟೆಸ್ಟ್‌ನಲ್ಲಿ ಆಡಿಸುವ ಸಾಧ್ಯತೆಯಿಲ್ಲ. ಉದಾಹರಣೆಗೆ, ಮುಂಬೈ, ಗುಜರಾತ್ ತಂಡಗಳು ಈ ಐಪಿಎಲ್‌ನಲ್ಲಿ ಪ್ಲೇ-ಆಫ್‌ಗೇರಿದರೆ ಶುಭ್‌ಮನ್ ಗಿಲ್, ಜಸ್‌ಪ್ರೀತ್ ಬುಮ್ರಾ ಸೇರಿದಂತೆ ಕೆಲ ಆಟಗಾರರನ್ನು ಟೆಸ್ಟ್‌ನಲ್ಲಿ ಆಡಿಸುವುದಿಲ್ಲ. ಈ ತಂಡಗಳು ಪ್ಲೇ-ಆಫ್‌ಗೇರದಿದ್ದರೆ ಮತ್ತು ಆಟಗಾರರಿಗೆ ವಿಶ್ರಾಂತಿ ಅಗತ್ಯವಿಲ್ಲದಿದ್ದರೆ ಮಾತ್ರ ಆಫ್ಘನ್ ಟೆಸ್ಟ್‌ನಲ್ಲಿ ಆಡಿಸಬಹುದು ಎಂದು ಹೇಳಲಾಗುತ್ತಿದೆ.
ಕನ್ನಡಿಗ ದೇವದತ್ ಪಡಿಕ್ಕಲ್‌ಗೆ ಅವಕಾಶ?
ಇನ್ನು, ಭಾರತ ‘ಎ’ ತಂಡ ಹಾಗೂ ದೇಸಿ ಟೂರ್ನಿಗಳಲ್ಲಿ ಮಿಂಚಿರುವ ಆಟಗಾರರಿಗೆ ಟೆಸ್ಟ್‌ನಲ್ಲಿ ಆಡುವ ಅವಕಾಶ ನೀಡಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಈ ಯೋಜನೆ ಪ್ರಕಾರ, ದೇವದತ್ ಪಡಿಕ್ಕಲ್, ವೇಗಿಗಳಾದ ಆಕಿಬ್ ನಬಿ, ಗುರ್ನೂರ್ ಬ್ರಾರ್, ಸ್ಪಿನ್ನರ್ ಮಾನವ್ ಸುತಾರ್, ಹರ್ಷ್ ದುಬೆಯನ್ನು ಆಫ್ಘನ್ ಟೆಸ್ಟ್‌ಗೆ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಆಫ್ಘನ್ ಮಾಜಿ ಕ್ರಿಕೆಟರ್ ಶಪೂರ್‌ಗೆ ಅಪಾಯಕಾರಿ ರೋಗ, ಡೆಲ್ಲಿಯಲ್ಲಿ ಚಿಕಿತ್ಸೆ
ನವದೆಹಲಿ: ಅಫ್ಘಾನಿಸ್ತಾನದ ಮಾಜಿ ವೇಗದ ಬೌಲರ್ ಶಪೂರ್ ಜದ್ರಾನ್ ಅವರು ಜೀವಕ್ಕೆ ಅಪಾಯವಿರುವ ಭೀಕರ ಕಾಯಿಲೆಯಿಂದ ಬಳಲುತ್ತಿದ್ದು, ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 38 ವರ್ಷದ ಶಪೂರ್ ಹಿಮೋಫಾಗೋಸಿಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್(ಎಚ್‌ಎಲ್‌ಎಚ್) ಎಂಬ ಅಪರೂಪದ ಹಾಗೂ ಅಪಾಯಕಾರಿ ರೋಗಕ್ಕೆ ತುತ್ತಾಗಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲೇ ಅವರಲ್ಲಿ ಈ ರೋಗ ಪತ್ತೆಯಾಗಿದ್ದು, ಜನವರಿಯಿಂದ ದೆಹಲಿಯ ಆಸ್ಪತ್ರೆಯಲ್ಲಿದ್ದಾರೆ. ಎಚ್‌ಎಲ್‌ಎಚ್ ಎಂಬುದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ರೋಗವಾಗಿದ್ದು, ದೇಹದಲ್ಲಿ ರೋಗ ನಿರೋಧಕ ವ್ಯವಸ್ಥೆಯನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ. ಇದು ದೇಹದ ಬಹುತೇಕ ಅಂಗಗಳನ್ನು ಹಾನಿಯುಂಟು ಮಾಡುತ್ತದೆ. ಈಗ ಶಫೂರ್ ದೇಹಕ್ಕೆ ಸಂಪೂರ್ಣವಾಗಿ ಸೋಂಕು ಹರಡಿದೆ. ಶಫೂರ್ 2009-2020ರ ನಡುವೆ ಅಫ್ಘಾನಿಸ್ತಾನ ಪರ 44 ಏಕದಿನ, 36 ಟಿ20 ಪಂದ್ಯಗಳನ್ನಾಡಿದ್ದಾರೆ.


