ಐಪಿಎಲ್ ಪಂದ್ಯದ ವೇಳೆ ಅಭಿಮಾನಿಯೊಬ್ಬ ಮಾಟಮಂತ್ರ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಚೆನ್ನೈ ಸೂಪರ್ ಕಿಂಗ್ಸ್ ಬಿಸಿಸಿಐಗೆ ದೂರು ನೀಡಿತ್ತು. ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಐಪಿಎಲ್ ಚೇರ್ಮನ್ ಲಲಿತ್ ಮೋದಿ, 2011ರಲ್ಲಿ ತಂಡದ ಮಾಲೀಕರೊಬ್ಬರು ಇಂತಹ ಕೃತ್ಯ ಎಸಗಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದೆ. ಈ ನಡುವೆ ಐಪಿಎಲ್‌ನಲ್ಲಿ ಮಾಟಮಂತ್ರದ ಸದ್ದು ಕೂಡಾ ಜೋರಾಗಿಯೇ ಕೇಳಿ ಬರುತ್ತಿದೆ. ಇತ್ತೀಚೆಗಷ್ಟೇ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯವೊಂದರಲ್ಲಿ ಸನ್‌ರೈಸರ್ಸ್ ತಂಡದ ಅಭಿಮಾನಿಯೊಬ್ಬ ಬ್ಲಾಕ್ ಮ್ಯಾಜಿಕ್ ಮಾಡಿ ಸಿಎಸ್‌ಕೆ ತಂಡದ ಬ್ಯಾಟರ್ ವಿಕೆಟ್ ಉರುಳಿಸಿದಂತೆ ವಿಡಿಯೋವೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬಿಸಿಸಿಐಗೆ ಪತ್ರವನ್ನು ಬರೆದಿತ್ತು. ಇದೀಗ ಐಪಿಎಲ್ ಮಾಜಿ ಚೇರ್‌ಮನ್ ಲಲಿತ್ ಮೋದಿ ಐಪಿಎಲ್‌ನಲ್ಲಿ ನಡೆಯುವ ಬ್ಲಾಕ್ ಮ್ಯಾಜಿಕ್ ಕುರಿತಂತೆ ತುಟಿಬಿಚ್ಚಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ವೇಳೆ ನಡೆದಿದೆ ಎನ್ನಲಾದ ವಿಡಿಯೋ ಬಗ್ಗೆ, 'ವ್ಯಕ್ತಿಯೋರ್ವ ನಿಂಬೆ ಹಣ್ಣು ಹಿಡಿದುಕೊಂಡು ವಾಮಾಚಾರ ನಡೆಸಿದ ಬೆನ್ನಲ್ಲೇ ನಮ್ಮ ಆಟಗಾರರ ಪ್ರದರ್ಶನ ದಿಢೀರ್ ಕುಸಿತ ಕಂಡಿತು. ಕ್ರಿಕೆಟ್ ಅನಿಶ್ಚಿತತೆಯ ಆಟ ಎನ್ನುವುದು ನಮಗೆಲ್ಲರಿಗೂ ಗೊತ್ತಿದೆ. ಕ್ರಿಕೆಟ್ ಒಂದು ಕೌಶಲ್ಯ, ತಂತ್ರಗಾರಿಕೆ ಹಾಗೂ ಕ್ರೀಡಾಸ್ಪೂರ್ತಿಯ ಪ್ರದರ್ಶನಕ್ಕೆ ವೇದಿಕೆಯಾಗಬೇಕೇ ಹೊರತು, ಈ ರೀತಿಯ ವಾಮಾಚಾರಕ್ಕೆ ಅವಕಾಶ ಮಾಡಿಕೊಡಬಾರದು. ಬಿಸಿಸಿಐ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬಿಸಿಸಿಐ ಬಳಿ ಆಗ್ರಹಿಸಿದೆ.

Scroll to load tweet…

ಐಪಿಎಲ್‌ನಲ್ಲಿ ಬ್ಲಾಕ್ ಮ್ಯಾಜಿಕ್ ಬಗ್ಗೆ ಹೊಸ ಬಾಂಬ್ ಸಿಡಿಸಿದ ಲಲಿತ್ ಮೋದಿ

ಇನ್ನು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಲಲಿತ್ ಮೋದಿ, ಈ ವಿಡಿಯೋ ಒಂದು ರೀತಿ ನಕಲಿಯಂತೆ ಕಾಣಿಸುತ್ತಿದೆ. ಆದರೆ ಐಪಿಎಲ್‌ನ ಒಂದು ತಂಡದ ಮಾಲೀಕರು ಈ ರೀತಿಯ ಕೃತ್ಯಗಳನ್ನು ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

'ತಂಡದ ಮಾಲೀಕರು ಎದುರಾಳಿ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ಹೀಗೆ ಮಾಡಿದ್ದಾರೆಂದು ಎದುರಾಳಿ ತಂಡವನ್ನು ಎಚ್ಚರಿಸಿದ್ದೆ ಎಂದು ನಾನು ಪೋಸ್ಟ್ ಮಾಡಿದ್ದನ್ನು ನೆನಪಿಸಿಕೊಳ್ಳುತ್ತೇನೆ. 2011 ರ ಋತುವಿನಲ್ಲಿ ನಾನು ಎದುರಾಳಿ ತಂಡದ ಮಾಲೀಕರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದೆ, ಆಗ ಅದು ಸಂಭವಿಸಿತು ಮತ್ತು ನನಗೆ ಖಚಿತವಾದ ಪುರಾವೆಗಳೊಂದಿಗೆ ಸಾಕ್ಷಿ ಸಿಕ್ಕಿತು. ನನ್ನ ತಂಡ ನಿರ್ಧರಿಸಿದಂತೆ ಈ ಎಲ್ಲಾ ರೀತಿಯ ಚಟುವಟಿಕೆಗಳನ್ನು ಮತ್ತು ಅವುಗಳನ್ನು ಯಾರು ನಡೆಸಿದರು ಎಂಬುದನ್ನು ನಾನು ಚಲನಚಿತ್ರ ಅಥವಾ ಟಿವಿ ಸರಣಿಯಲ್ಲಿ ಬಹಿರಂಗಪಡಿಸುತ್ತೇನೆ ಎಂದು ಲಲಿತ್ ಮೋದಿ ಹೇಳಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನವನ್ನು ಹುಟ್ಟು ಹಾಕಿದೆ.

Scroll to load tweet…

19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಗ್ಗೆ

ಇನ್ನು ಐಪಿಎಲ್ ವಿಚಾರಕ್ಕೆ ಬರುವುದಾದರೇ, ಸದ್ಯ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಆಡಿದ ಆರು ಪಂದ್ಯಗಳ ಪೈಕಿ ಐದು ಗೆಲುವು ಹಾಗೂ ಒಂದು ರದ್ದಾದ ಪಂದ್ಯ ಸೇರಿದಂತೆ 11 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆಡಿದ ಆರು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ಮೂರು ಸೋಲು ಸಹಿತ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಆಡಿದ 5 ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ 4 ಸೋಲು ಸಹಿತ ಕೇವಲ ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.