ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಚೊಚ್ಚಲ ಏಕದಿನ ವಿಶ್ವಕಪ್ ಪ್ರಶಸ್ತಿಗಾಗಿ ಡಿವೈ ಪಾಟೀಲ್ ಮೈದಾನದಲ್ಲಿ ಸೆಣಸಲಿವೆ. ಈ ಐತಿಹಾಸಿಕ ಪಂದ್ಯಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಅಧಿಕೃತ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ ಮತ್ತು ಅನಧಿಕೃತವಾಗಿ ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗುತ್ತಿವೆ.
ನವಿ ಮುಂಬೈ: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಇಲ್ಲಿನ ಡಿವೈ ಪಾಟೀಲ್ ಮೈದಾನದಲ್ಲಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಎರಡೂ ತಂಡಗಳು ಚೊಚ್ಚಲ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದು, ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ಇನ್ನು ಈ ಐತಿಹಾಸಿಕ ಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಫೈನಲ್ ಪಂದ್ಯದ ಟಿಕೆಟ್‌ಗಳನ್ನು ಐಸಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅವು ಸೋಲ್ಡ್ ಔಟ್ ಆಗಿವೆ. ಈಗ ಥರ್ಡ್ ಪಾರ್ಟಿ (ಅನಧಿಕೃತ) ವೆಬ್ ಸೈಟ್‌ಗಳು ಪಂದ್ಯದ ಟಿಕೆಟ್‌ಗಳನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿವೆ. ವರದಿಯೊಂದರ ಪ್ರಕಾರ, ವೆಬ್‌ಸೈಟ್‌ವೊಂದು ಟಿಕೆಟ್‌ಗಳ ದರವನ್ನು ₹16,500ರಿಂದ ₹1,36,000 ವರೆಗೂ ನಿಗದಿ ಮಾಡಿದೆ ಎನ್ನಲಾಗಿದೆ.
ಟಿಕೆಟ್‌ಗಾಗಿ ಭಾರೀ ಬೇಡಿಕೆಯಿದ್ದು, ಶನಿವಾರವೂ ಡಿ.ವೈ.ಪಾಟೀಲ್ ಕ್ರೀಡಾಂಗಣದ ಎದುರು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಟಿಕೆಟ್ ಖರೀದಿಸಲು ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನು, ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ಭಾರತದ ನಾಯಕಿ ಹರ್ಮನ್ ಪ್ರೀತ್ ತಾವು ತಮ್ಮವರಿಗೆ ಟಿಕೆಟ್‌ಗಳನ್ನು ಹೊಂದಿಸಲು ಹರಸಾಹಸ ಮಾಡುತ್ತಿರುವುದಾಗಿ ಹೇಳಿದ್ದು, ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಎಷ್ಟರ ಮಟ್ಟಿಗೆ ಆಸಕ್ತಿ ಮೂಡಿಸಿದೆ ಎನ್ನುವುದಕ್ಕೆ ಉದಾಹರಣೆ.
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಹಾಟ್ ಸ್ಟಾರ್
ಗೆಲ್ಲುವ ತಂಡಕ್ಕೆ 40 ಕೋಟಿ, ರನ್ನರ್-ಅಪ್‌ಗೆ 20 ಕೋಟಿ!
ಅಂ.ರಾ. ಕ್ರಿಕೆಟ್ ಸಮಿತಿ (ಐಸಿಸಿ) ಈ ವರ್ಷ ಮಹಿಳಾ ವಿಶ್ವಕಪ್‌ನ ಬಹುಮಾನ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಭಾನುವಾರ ಗೆಲ್ಲುವ ತಂಡಕ್ಕೆ 4.48 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 39.77 ಕೋಟಿ ರು.), ರನ್ನರ್-ಅಪ್ ತಂಡಕ್ಕೆ 2.24 ಮಿಲಿಯನ್ ಯುಎಸ್‌ಡಿ (ಅಂದಾಜು 19.88 ಕೋಟಿ ರು.) ಬಹುಮಾನ ಮೊತ್ತ ಸಿಗಲಿದೆ. ವಿಶ್ವಕಪ್ ಇತಿಹಾಸದಲ್ಲೇ (ಪುರುಷ, ಮಹಿಳಾ) ಇದು ಗರಿಷ್ಠ ಬಹುಮಾನ ಮೊತ್ತ ಎನಿಸಿದೆ.
ಭಾರತ ಗೆದ್ದರೆ ಬಿಸಿಸಿಐನಿಂದ 125 ಕೋಟಿ ಬಹುಮಾನ?
2024ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಬರೋಬ್ಬರಿ 125 ಕೋಟಿ ರು. ಬಹುಮಾನ ನೀಡಿತ್ತು. ವೇತನ ಸಮಾನತೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿರುವ ಬಿಸಿಸಿಐ, ಮಹಿಳಾ ತಂಡ ಏಕದಿನ ವಿಶ್ವಕಪ್ ಗೆದ್ದರೆ ಪುರುಷರ ತಂಡಕ್ಕೆ ನೀಡಿದಂತೆ 125 ಕೋಟಿ ರು. ಬಹುಮಾನ ನೀಡಲು ನಿರ್ಧರಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಭಾರತಕ್ಕೆ ಮೂರನೇ, ದ.ಆಫ್ರಿಕಾಕ್ಕೆ ಮೊದಲ ವಿಶ್ವಕಪ್ ಫೈನಲ್!
ಭಾರತ ತಂಡ 3ನೇ ಬಾರಿಗೆ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಡಲಿದೆ. ತಂಡ ಈ ಹಿಂದೆ 2005, 2017ರ ವಿಶ್ವಕಪ್ ಫೈನಲ್‌ಗಳಲ್ಲಿ ಸೋತಿತ್ತು. ಇನ್ನು 2020ರ ಟಿ20 ವಿಶ್ವಕಪ್ ಫೈನಲ್‌ನಲ್ಲೂ ಮುಗ್ಗರಿಸಿತ್ತು. ಮತ್ತೊಂದೆಡೆ ದ.ಆಫ್ರಿಕಾ ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಫೈನಲ್‌ಗೇರಿದೆ. ಆದರೆ ತಂಡ ಕಳೆದೆರಡು ಆವೃತ್ತಿಗಳ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಸೋತು ರನ್ನರ್-ಅಪ್ ಆಗಿತ್ತು. ಹೀಗಾಗಿ, ಎರಡೂ ತಂಡಗಳು ಯಾವುದೇ ಮಾದರಿ ಯಲ್ಲಿ ಚೊಚ್ಚಲ ವಿಶ್ವಕಪ್ ಗೆಲ್ಲುವ ತವಕದಲ್ಲಿವೆ.
1 ವರ್ಷದಲ್ಲಿ ದ.ಆಫ್ರಿಕಾ ವಿರುದ್ಧ 3ನೇ ಫೈನಲ್: ಇಲ್ಲೂ ಗೆಲ್ಲುತ್ತಾ ಭಾರತ?
ಕಳೆದೊಂದು ವರ್ಷದಲ್ಲಿ ಭಾರತ ಹಾಗೂ ದ.ಆಫ್ರಿಕಾ ನಡುವೆ ಐಸಿಸಿ ಟೂರ್ನಿಗಳಲ್ಲಿ ಇದು 3ನೇ ಫೈನಲ್. 2024ರ ಪುರುಷರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದ. ಆಫ್ರಿಕಾವನ್ನು 7 ರನ್‌ಗಳಿಂದ ರೋಚಕವಾಗಿ ಸೋಲಿಸಿದ್ದ ಭಾರತ 2ನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿದಿತ್ತು. ಇನ್ನು 2025ರಲ್ಲಿ ನಡೆದ 2ನೇ ಆವೃತ್ತಿಯ ಅಂಡರ್ -19 ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 9 ವಿಕೆಟ್ ಗೆಲುವು ಸಾಧಿಸಿ, ಸತತ 2ನೇ ಟ್ರೋಫಿ ಗೆದ್ದಿತ್ತು. ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲೂ ದ.ಆಫ್ರಿಕಾವನ್ನು ಭಾರತ ಸೋಲಿಸುತ್ತಾ ಎನ್ನುವ ಕುತೂಹಲ ಅಭಿಮಾನಿಗಳದ್ದು.

