ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ. ವಿಶ್ವಕಪ್‌ನಲ್ಲಿ ಉಭಯ ತಂಡಗಳು ತಲಾ ಮೂರು ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿದ್ದು, ಎರಡೂ ತಂಡಗಳು ತಮ್ಮ ಚೊಚ್ಚಲ ವಿಶ್ವಕಪ್ ಕಿರೀಟವನ್ನು ಗೆಲ್ಲುವ ಗುರಿಯನ್ನು ಹೊಂದಿವೆ.
ನವಿ ಮುಂಬೈ: ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನವೆಂಬರ್ 02ರ ಭಾನುವಾರ ಮುಖಾಮುಖಿಯಾಗಲಿವೆ. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳ ನಡುವಿನ ಇದುವರೆಗಿನ ಹೋರಾಟದ ಇತಿಹಾಸವನ್ನು ನೋಡೋಣ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಏಕದಿನ ಕ್ರಿಕೆಟ್ ಮುಖಾಮುಖಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮೇಲುಗೈ ಸಾಧಿಸಿದೆ. ಇದುವರೆಗೆ ಪರಸ್ಪರ ಆಡಿದ ಪಂದ್ಯಗಳಲ್ಲಿ ಭಾರತ 20ರಲ್ಲಿ ಗೆದ್ದರೆ, ದಕ್ಷಿಣ ಆಫ್ರಿಕಾ 13ರಲ್ಲಿ ಗೆದ್ದಿದೆ. ಆದರೆ, ವಿಶ್ವಕಪ್ ಹೋರಾಟದ ಇತಿಹಾಸವನ್ನು ನೋಡಿದರೆ ಎರಡೂ ತಂಡಗಳು ಸಮಬಲದಲ್ಲಿವೆ.
ವಿಶ್ವಕಪ್‌ಗಳಲ್ಲಿ ಇದುವರೆಗೆ ಪರಸ್ಪರ ಆಡಿದ ಆರು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ತಲಾ ಮೂರು ಪಂದ್ಯಗಳನ್ನು ಗೆದ್ದಿವೆ. ಈ ವಿಶ್ವಕಪ್‌ನ ಗುಂಪು ಹಂತದಲ್ಲಿ ವಿಶಾಖಪಟ್ಟಣದಲ್ಲಿ ಮುಖಾಮುಖಿಯಾದಾಗ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿತ್ತು. ಅಂದು ಮೊದಲು ಬ್ಯಾಟ್ ಮಾಡಿದ ಭಾರತ, ರಿಚಾ ಘೋಷ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 49.5 ಓವರ್‌ಗಳಲ್ಲಿ 251 ರನ್‌ಗಳಿಗೆ ಆಲೌಟ್ ಆಗಿತ್ತು. ನಂತರ ಗುರಿ ಬೆನ್ನತ್ತಿದ ಹರಿಣಗಳ ಪಡೆ ಕೇವಲ 142 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ದಕ್ಷಿಣ ಆಫ್ರಿಕಾ ಪರ ನಡಿನ್ ಡಿ ಕ್ಲರ್ಕ್ ಅವರ ಅರ್ಧಶತಕದ ಬಲದಿಂದ ವಿರೋಚಿತ ಗೆಲುವು ಸಾಧಿಸಿತ್ತು. ಎಂಟನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಕ್ಲರ್ಕ್ 54 ಎಸೆತಗಳಲ್ಲಿ 84 ರನ್ ಗಳಿಸಿ ಅಜೇಯರಾಗಿ ಉಳಿದು ದಕ್ಷಿಣ ಆಫ್ರಿಕಾಗೆ ಅದ್ಭುತ ಜಯ ತಂದುಕೊಟ್ಟರು.
ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ
1997ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಅಂದು ಭಾರತ ಐದು ವಿಕೆಟ್‌ಗಳ ಅಧಿಕಾರಯುತ ಜಯ ಸಾಧಿಸಿತ್ತು. 2000ರ ಏಕದಿನ ವಿಶ್ವಕಪ್‌ನಲ್ಲಿ ಮತ್ತೆ ಎದುರಾದಾಗಲೂ ಭಾರತ ಎಂಟು ವಿಕೆಟ್‌ಗಳಿಂದ ಗೆದ್ದಿತ್ತು. 2005ರಲ್ಲಿ ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸಿದ್ದ ವಿಶ್ವಕಪ್‌ನ ಗುಂಪು ಹಂತದಲ್ಲಿ ನಡೆದ ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿತ್ತು. ಆದರೆ, ಸೆಮಿಫೈನಲ್‌ನಲ್ಲಿ ಮತ್ತೆ ಮುಖಾಮುಖಿಯಾದಾಗ ಭಾರತ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿತ್ತು. 2009 ಮತ್ತು 2013ರಲ್ಲಿ ಎರಡೂ ತಂಡಗಳ ನಡುವೆ ಯಾವುದೇ ಪಂದ್ಯ ನಡೆಯಲಿಲ್ಲ.
ಇನ್ನು 2017ರಲ್ಲಿ ಭಾರತ ಮತ್ತೆ ವಿಶ್ವಕಪ್ ಫೈನಲ್ ತಲುಪಿದ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸಲ ಟೀಂ ಇಂಡಿಯಾ ಎದುರು ಜಯ ಸಾಧಿಸಿತು. ಅಂದು ದಕ್ಷಿಣ ಆಫ್ರಿಕಾ 115 ರನ್‌ಗಳಿಂದ ಭಾರತವನ್ನು ಸೋಲಿಸಿತ್ತು. 2021-2022ರ ವಿಶ್ವಕಪ್‌ನಲ್ಲಿ ಮುಖಾಮುಖಿಯಾದಾಗಲೂ ದಕ್ಷಿಣ ಆಫ್ರಿಕಾ ಗೆಲುವನ್ನು ಪುನರಾವರ್ತಿಸಿತು. ಆಗ ಹರಿಣಗಳ ಪಡೆ ಮೂರು ವಿಕೆಟ್‌ಗಳಿಂದ ಗೆದ್ದಿತ್ತು. ಈ ಬಾರಿ ಗುಂಪು ಹಂತದಲ್ಲೂ ಭಾರತವನ್ನು ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ವಿಶ್ವಕಪ್ ಮುಖಾಮುಖಿ ಹೋರಾಟದಲ್ಲಿ ಭಾರತದ ಸರಿಸಮನಾಗಿ ನಿಂತಿದೆ.
ಮೊದಲ ಕಿರೀಟದ ನಿರೀಕ್ಷೆಯಲ್ಲಿ ಎರಡೂ ತಂಡಗಳು
ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಕಿರೀಟವನ್ನು ಗೆಲ್ಲುವ ಗುರಿಯೊಂದಿಗೆ ಎರಡೂ ತಂಡಗಳು ನಾಳೆ ಫೈನಲ್ ಪಂದ್ಯಕ್ಕೆ ಇಳಿಯುತ್ತಿವೆ. ಇದು ಭಾರತದ ಮೂರನೇ ಏಕದಿನ ವಿಶ್ವಕಪ್ ಫೈನಲ್ ಆಗಿದೆ. ಇದಕ್ಕೂ ಮೊದಲು ಭಾರತ 2005 ಮತ್ತು 2017ರಲ್ಲಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಆಡಿತ್ತು. ಇನ್ನು ಇದು ದಕ್ಷಿಣ ಆಫ್ರಿಕಾದ ಮೊದಲ ವಿಶ್ವಕಪ್ ಫೈನಲ್ ಆಗಿದೆ.
2005ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದಾಗ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಇನ್ನು ಇದಾದ ಬಳಿಕ 2017ರಲ್ಲಿ ಎರಡನೇ ಬಾರಿಗೆ ಫೈನಲ್‌ಗೆ ತಲುಪಿದಾಗ ಇಂಗ್ಲೆಂಡ್ ತಂಡವು ಭಾರತಕ್ಕೆ ಸೋಲುಣಿಸಿತ್ತು. ಗೆಲುವು ಖಚಿತವಾಗಿದ್ದ ಪಂದ್ಯದಲ್ಲಿ ಭಾರತ ಕೇವಲ ಒಂಬತ್ತು ರನ್‌ಗಳಿಂದ ಸೋತಿತ್ತು. ಈ ಬಾರಿ ತವರಿನಲ್ಲಿ ಮೂರನೇ ಬಾರಿಗೆ ಫೈನಲ್‌ಗೆ ಇಳಿಯುತ್ತಿರುವ ಭಾರತ, ಚೊಚ್ಚಲ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ. ಅದರಲ್ಲೂ ಅಜೇಯರೆನಿಸಿಕೊಂಡಿದ್ದ ಆಸ್ಟ್ರೇಲಿಯಾವನ್ನು ಮಣಿಸಿದ ಆತ್ಮವಿಶ್ವಾಸದಲ್ಲಿ ಭಾರತ ಕಣಕ್ಕಿಳಿದರೆ, ಮಾಜಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಸೋಲಿಸಿದ ಆತ್ಮವಿಶ್ವಾಸ ದಕ್ಷಿಣ ಆಫ್ರಿಕಾಗೆ ಬಲ ನೀಡಲಿದೆ.


