ಪಂಜಾಬ್ ಕಿಂಗ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡವನ್ನು 37 ರನ್‌ಗಳಿಂದ ಸೋಲಿಸಿದೆ. ಪ್ರಭ್‌ಸಿಮ್ರನ್ ಸಿಂಗ್ ಅವರ 91 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ನಿಂದ ಪಂಜಾಬ್ 236 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಲಖನೌ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 199 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು.

ಧರ್ಮಶಾಲಾ: ಪಂಜಾಬ್‌ ಕಿಂಗ್ಸ್‌ನ ರನ್‌ ಮಳೆಯಲ್ಲಿ ಕೊಚ್ಚಿ ಹೋದ ಲಖನೌ, 18ನೇ ಆವೃತ್ತಿ ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ಸೋಲಿನ ಆಘಾತಕ್ಕೆ ಒಳಗಾಗಿದೆ. ತಂಡಕ್ಕಿದು 11 ಪಂದ್ಯಗಳಲ್ಲಿ 6ನೇ ಸೋಲು. 11 ಪಂದ್ಯಗಳಲ್ಲಿ 7ನೇ ಗೆಲುವು ಸಾಧಿಸಿದ ಪಂಜಾಬ್‌ ಕಿಂಗ್ಸ್‌, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ತಂಡ ಇನ್ನೊಂದು ಪಂದ್ಯ ಗೆದ್ದರೆ ಪ್ಲೇ-ಆಫ್‌ ಪ್ರವೇಶಿಸಲಿದೆ.

ಪಂಜಾಬ್‌ ಮೊದಲು ಬ್ಯಾಟ್‌ ಮಾಡಿ ಬರೋಬ್ಬರಿ 236 ರನ್‌ ಕಲೆಹಾಕಿತು. ಬೃಹತ್‌ ಮೊತ್ತ ನೋಡಿಯೇ ಕಂಗಾಲಾದ ಲಖನೌ, 7 ವಿಕೆಟ್‌ಗೆ 199 ರನ್‌ ಗಳಿಸಿ 37 ರನ್‌ ಅಂತರದಲ್ಲಿ ಸೋಲೊಪ್ಪಿಕೊಂಡಿತು.

ಟೂರ್ನಿಯುದ್ದಕ್ಕೂ ತಂಡಕ್ಕೆ ಆಸರೆಯಾಗಿದ್ದ ಮಾರ್ಕ್‌ರಮ್‌(13), ಮಿಚೆಲ್ ಮಾರ್ಷ್‌(0), ನಿಕೋಲಸ್‌ ಪೂರನ್‌(6) ಪವರ್‌-ಪ್ಲೇ ಮುಕ್ತಾಯಕ್ಕೂ ಮುನ್ನವೇ ಪೆವಿಲಿಯನ್‌ ಸೇರಿದ್ದರು. ನಾಯಕ ರಿಷಭ್‌ ಪಂತ್‌(18) ಮತ್ತೆ ಕಳಪೆ ಆಟವಾಡಿ ವಿಕೆಟ್‌ ಒಪ್ಪಿಸಿದರು. ಬಳಿಕ ಆಯುಶ್‌ ಬದೋನಿ(40 ಎಸೆತಕ್ಕೆ 74), ಅಬ್ದುಲ್‌ ಸಮದ್(24 ಎಸೆತಕ್ಕೆ 45) ರನ್‌ ಗಳಿಸಿದರೂ, ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

ಪ್ರಭ್‌ಸಿಮ್ರನ್‌ ಮ್ಯಾಜಿಕ್‌: ಇದಕ್ಕೂ ಮುನ್ನ ಧರ್ಮಶಾಲಾ ಕ್ರೀಡಾಂಗಣ ಯುವ ಬ್ಯಾಟರ್‌ ಪ್ರಭ್‌ಸಿಮ್ರನ್‌ ಸಿಂಗ್‌ರ ಸ್ಫೋಟಕ ಆಟಕ್ಕೆ ಸಾಕ್ಷಿಯಾಯಿತು. 48 ಎಸೆತಗಳಲ್ಲಿ 6 ಬೌಂಡರಿ, 7 ಸಿಕ್ಸರ್‌ನೊಂದಿಗೆ 91 ರನ್‌ ಸಿಡಿಸಿದ ಅವರು, ಶತಕದ ಅಂಚಿನಲ್ಲಿ ದಿಗ್ವೇಶ್‌ ರಾಠಿಗೆ ವಿಕೆಟ್‌ ಒಪ್ಪಿಸಿದರು. ಶ್ರೇಯಸ್‌ ಅಯ್ಯರ್‌ 25 ಎಸೆತಕ್ಕೆ 45, ಜೋಶ್‌ ಇಂಗ್ಲಿಸ್‌ 14 ಎಸೆತಕ್ಕೆ 30, ಶಶಾಂಕ್‌ 15 ಎಸೆತಕ್ಕೆ 33, ಸ್ಟೋಯ್ನಿಸ್‌ 5 ಎಸೆತಕ್ಕೆ 15 ರನ್‌ ಸಿಡಿಸಿದರು.

ಸ್ಕೋರ್‌: ಪಂಜಾಬ್‌ 20 ಓವರಲ್ಲಿ 236/5 (ಪ್ರಭ್‌ಸಿಮ್ರನ್‌ 91, ಶ್ರೇಯಸ್‌ 45, ಆಕಾಶ್‌ 2-30), ಲಖನೌ 20 ಓವರಲ್ಲಿ 199/7 (ಆಯುಶ್‌ 74, ಸಮದ್‌ 45, ಅರ್ಶ್‌ದೀಪ್‌ 16/3)

ಈ ಸಲ 8 ಮಂದಿನರ್ವಸ್‌ ನೈಂಟಿ!

ಈ ಬಾರಿ 8 ಆಟಗಾರರು ಶತಕದಿಂದ ವಂಚಿತರಾಗಿದ್ದಾರೆ. ಭಾನುವಾರವೇ ರಾಜಸ್ಥಾನದ ರಿಯಾನ್‌(95), ಪಂಜಾಬ್‌ನ ಪ್ರಭ್‌ಸಿಮ್ರನ್‌(91) ನರ್ವಸ್‌ ನೈಂಟಿಗೆ ಬಲಿಯಾದರು. ಇದಕ್ಕೂ ಮುನ್ನ ಶ್ರೇಯಸ್‌ ಅಯ್ಯರ್, ಕ್ವಿಂಟನ್ ಡಿ ಕಾಕ್‌, ಬಟ್ಲರ್ ತಲಾ 97 ರನ್‌ ಗಳಿಸಿ ಔಟಾಗದೆ ಉಳಿದಿದ್ದರು. ಚೆನ್ನೈನ ಆಯುಶ್‌ ಮಾಥ್ರೆ(94), ಡೆಲ್ಲಿಯ ಕೆ.ಎಲ್‌.ರಾಹುಲ್‌(93), ಗುಜರಾತ್‌ನ ಗಿಲ್‌(90) ಕೂಡಾ ಶತಕದ ಅಂಚಿನಲ್ಲಿ ಎಡವಿದ್ದಾರೆ.

ಪಾಕ್‌ ಲೀಗ್‌ ಆಡುತ್ತಿದ್ದರೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಬದಲು ಪಂಜಾಬ್‌ ಸೇರಿದ ಓವನ್‌!

ಮುಲ್ಲಾನ್‌ಪುರ: ಗಾಯದಿಂದಾಗಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಈ ಬಾರಿ ಐಪಿಎಲ್‌ನಿಂದ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ಆಸ್ಟ್ರೇಲಿಯಾದ 23 ವರ್ಷದ ಮಿಚೆಲ್‌ ಓವನ್‌ರನ್ನು ₹3 ಕೋಟಿಗೆ ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಅವರು ಪಂಜಾಬ್‌ ತಂಡ ಸೇರ್ಪಡೆಗೊಳ್ಳುವುದು ತಡವಾಗಲಿದೆ. ಓವನ್‌ ಸದ್ಯ ಪಾಕಿಸ್ತಾನ ಸೂಪರ್‌ ಲೀಗ್‌ನ ಪೇಶಾವರ ಝಲ್ಮಿ ಪರ ಆಡುತ್ತಿದ್ದಾರೆ. 

6 ತಂಡಗಳಿರುವ ಟೂರ್ನಿಯಲ್ಲಿ 5ನೇ ಸ್ಥಾನದಲ್ಲಿರುವ ಪೇಶಾವರ, ಗುಂಪು ಹಂತದಲ್ಲೇ ಹೊರಬಿದ್ದರೆ ಓವನ್‌, ಮೇ 9ರ ಬಳಿಕ ಪಂಜಾಬ್‌ ಸೇರಲಿದ್ದಾರೆ. ಒಂದು ವೇಳೆ ಪೇಶಾವರ ನಾಕೌಟ್‌ ಪ್ರವೇಶಿಸಿದರೆ, ಟೂರ್ನಿ ಮುಗಿದ ಬಳಿಕ ಅಂದರೆ ಮೇ 18ರ ನಂತರವೇ ಪಂಜಾಬ್‌ ತಂಡ ಕೂಡಿಕೊಳ್ಳಲಿದ್ದಾರೆ. ಆದರೆ ಆ ವೇಳೆಗಾಗಲೇ ಪಂಜಾಬ್‌ ತಂಡದ ಲೀಗ್‌ ಹಂತದ ಪಂದ್ಯಗಳು ಮುಗಿದಿರುತ್ತವೆ. ಆಗ ಪಂಜಾಬ್‌ ಪ್ಲೇ-ಆಫ್‌ಗೇರಿದರೆ ಮಾತ್ರ ಓವನ್‌ಗೆ ಆಡುವ ಅವಕಾಶ ಸಿಗಲಿದೆ. ಐಪಿಎಲ್‌ ಮೇ 25ಕ್ಕೆ ಕೊನೆಗೊಳ್ಳಲಿದೆ.