ಭಾರತ-ಪಾಕಿಸ್ತಾನ ಸಂಘರ್ಷದಿಂದ ಸ್ಥಗಿತಗೊಂಡಿದ್ದ ಐಪಿಎಲ್ ಮೇ 16ರಿಂದ ಪುನಾರಂಭವಾಗುವ ಸಾಧ್ಯತೆ ಇದೆ. ಬಿಸಿಸಿಐ ಈ ಬಗ್ಗೆ ಸಿದ್ಧತೆ ಆರಂಭಿಸಿದ್ದು, ಲೀಗ್ ಪುನಾರಂಭದ ಬಗ್ಗೆ ಚರ್ಚೆ ನಡೆಸುತ್ತಿದೆ. ಸೋಮವಾರ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ.
ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಘರ್ಷ ಏರ್ಪಟ್ಟಿದ್ದರಿಂದ ಅರ್ಧದಲ್ಲೇ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ಮೇ 16ರಿಂದಲೇ ಪುನಾರಂಭಗೊಳ್ಳುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸಿದ್ಧತೆ ಆರಂಭಿಸಿದ್ದು, ಮಾತುಕತೆಯಲ್ಲಿ ತೊಡಗಿಸಿಕೊಂಡಿದೆ. ಸೋಮವಾರ ವೇಳಾಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ.
ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯ ಅರ್ಧದಲ್ಲೇ ಸ್ಥಗಿತಗೊಂಡ ಬಳಿಕ, ಶುಕ್ರವಾರ ಟೂರ್ನಿಯನ್ನೇ ಸ್ಥಗಿತಗೊಳಿಸಲಾಗಿತ್ತು. ಆದರೆ ಶನಿವಾರ ಕದನ ವಿರಾಮ ಮಾತುಕತೆ ನಡೆದಿದ್ದರಿಂದ ಐಪಿಎಲ್ ಪುನಾರಂಭಿಸಲು ಬಿಸಿಸಿಐ ಸಿದ್ಧತೆ ಆರಂಭಿಸಿದೆ.
‘ಸದ್ಯ ಐಪಿಎಲ್ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬಿಸಿಸಿಐ ಅಧಿಕಾರಿಗಳು ಲೀಗ್ ಪುನಾರಂಭಿಸುವ ಯೋಜನೆಯಲ್ಲಿದ್ದಾರೆ. ಬಿಸಿಸಿಐ, ಐಪಿಎಲ್ ಮುಖ್ಯಸ್ಥರು ಫ್ರಾಂಚೈಸಿ, ಪಾಲುದಾರರ ಜೊತೆ ಚರ್ಚಿಸುತ್ತಿದ್ದಾರೆ. ಶೀಘ್ರದಲ್ಲೇ ಲೀಗ್ ಆರಂಭಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಭಾನುವಾರ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ಆರಂಭ?: ಬಿಸಿಸಿಐ ಮೂಲಗಳ ಪ್ರಕಾರ, ‘ಐಪಿಎಲ್ 16 ಅಥವಾ 17ರಂದು ಲಖನೌನಲ್ಲಿ ಪುನಾರಂಭಗೊಳ್ಳಲಿದೆ. ಎಲ್ಲಾ ಆಟಗಾರರನ್ನು ಮೇ 13ರ ಒಳಗಾಗಿ ಮರಳಿ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಸೂಚಿಸಲಾಗಿದೆ. ಸೋಮವಾರ ಅಂತಿಮ ವೇಳಾಪಟ್ಟಿ ಪ್ರಕಟಗೊಳ್ಳಲಿದೆ’ ಎಂದು ತಿಳಿದುಬಂದಿದೆ. ಟೂರ್ನಿಯಲ್ಲಿ ಇನ್ನು 17 ಪಂದ್ಯಗಳು ನಡೆಯಬೇಕಿದೆ.
ಬೆಂಗಳೂರು, ಚೆನ್ನೈಸೇರಿ ಕೆಲ ಕಡೆ ಪಂದ್ಯ
ದೇಶದ ಉತ್ತರ ಭಾಗದ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸುವುದು ಭದ್ರತೆ ದೃಷ್ಟಿಯಿಂದ ಸೂಕ್ತವಲ್ಲದ ಕಾರಣ, ಪಂದ್ಯಗಳನ್ನು ದಕ್ಷಿಣ ಹಾಗೂ ಪೂರ್ವ ಭಾರತದ ನಗರಗಳಿಗೆ ಸ್ಥಳಾಂತರಿಸುವುದು ಬಿಸಿಸಿಐ ಯೋಜನೆ. ಇದಕ್ಕಾಗಿ ಈಗಾಗಲೇ 4-5 ಕ್ರೀಡಾಂಗಣಗಳನ್ನು ಬಿಸಿಸಿಐ ಪಟ್ಟಿ ಮಾಡಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್ ಜೊತೆಗೆ ಲಖನೌ ಹಾಗೂ ಕೋಲ್ಕತಾದಲ್ಲೂ ಕೆಲ ಪಂದ್ಯಗಳನ್ನು ನಡೆಸುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗೇನಾದರೂ ಆದಲ್ಲಿ ಬೆಂಗಳೂರು ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಂತೆ ಆಗಲಿದೆ.
ಅಭ್ಯಾಸ ಆರಂಭಿಸಿದ ಗುಜರಾತ್ ಟೈಟಾನ್ಸ್
ಕದನ ವಿರಾಮ ಬೆನ್ನಲ್ಲೇ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ತರಬೇತಿ ಪುನರಾರಂಭಿಸಿದೆ. ಭಾನುವಾರ ಸಂಜೆ ಕೆಲ ಆಟಗಾರರು ಮೈದಾನದಲ್ಲಿ ನೆಟ್ ಪ್ರ್ಯಾಕ್ಟೀಸ್‌ನಲ್ಲಿ ತೊಡಗಿಸಿಕೊಂಡರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಗುಜರಾತ್ ಆಡಿರುವ 11ರಲ್ಲಿ 8 ಪಂದ್ಯಗಳಲ್ಲಿ ಗೆದ್ದಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಡೆಲ್ಲಿ-ಪಂಜಾಬ್ ಕಿಂಗ್ಸ್ ನಡುವೆ ಮರು ಪಂದ್ಯ?
ಗುರುವಾರ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂಜಾಬ್ ಹಾಗೂ ಡೆಲ್ಲಿ ನಡುವಿನ ಪಂದ್ಯ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಈ ಪಂದ್ಯ ರದ್ದುಗೊಳಿಸಲಾಗಿದೆಯೇ ಅಥವಾ ಮತ್ತೆ ಆಡಿಸಲಾಗುತ್ತದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಎರಡು ತಂಡಗಳಿಗೆ ಅಂಕ ಹಂಚಿಕೆ ಕೂಡಾ ಆಗದ ಹಿನ್ನೆಲೆಯಲ್ಲಿ, ಪಂದ್ಯವನ್ನು ಮತ್ತೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಆರ್‌ಸಿಬಿಯ 2 ಪಂದ್ಯಗಳ ಟಿಕೆಟ್ ಹಣ ಮರುಪಾವತಿ
ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ಸಂಘರ್ಷದಿಂದಾಗಿ ಐಪಿಎಲ್ ಸ್ಥಗಿತಗೊಂಡಿರುವ ಕಾರಣ, ಬೆಂಗಳೂರಿನಲ್ಲಿ ನಡೆಯಬೇಕಿದ್ದ 2 ಪಂದ್ಯಗಳ ಟಿಕೆಟ್ ಹಣವನ್ನು ಪ್ರೇಕ್ಷಕರಿಗೆ ಮರಳಿಸುವುದಾಗಿ ಆರ್‌ಸಿಬಿ ಫ್ರಾಂಚೈಸಿ ತಿಳಿಸಿದೆ. ಮೇ 13ಕ್ಕೆ ನಡೆಯಬೇಕಿದ್ದ ಸನ್‌ರೈಸರ್ಸ್, ಮೇ 17ಕ್ಕೆ ನಿಗದಿಯಾಗಿದ್ದ ಕೋಲ್ಕತಾ ವಿರುದ್ಧ ಪಂದ್ಯಗಳ ಟಿಕೆಟ್ ಹಣ ಮರಳಿಸುವ ಬಗ್ಗೆ ಫ್ರಾಂಚೈಸಿ ಮಾಹಿತಿ ನೀಡಿದೆ. ಆಫ್ಲೈನ್ ಟಿಕೆಟ್ ಖರೀದಿಸಿರುವವರು ಟಿಕೆಟ್‌ಅನ್ನು ಇಟ್ಟುಕೊಂಡಿರಬೇಕು. ಹಾಗೆಯೇ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿದವರಿಗೆ ಮುಂದಿನ ಪ್ರಕ್ರಿಯೆಯ ಬಗ್ಗೆ ಅಗತ್ಯ ಮಾಹಿತಿಯನ್ನು ಅವರ ನೋಂದಾಯಿತ ಇಮೇಲ್ ಅಥವಾ ಫೋನ್ ಸಂಖ್ಯೆಯ ಮೂಲಕ ನೀಡಲಾಗುವುದು ಎಂದು ಆರ್‌ಸಿಬಿ ತಿಳಿಸಿದೆ.


