ಐಪಿಎಲ್ ಮೇ ೧೭ರಿಂದ ಪುನರಾರಂಭವಾಗಲಿದ್ದು, ಜೂನ್ ೩ಕ್ಕೆ ಫೈನಲ್ ನಡೆಯಲಿದೆ. ಇಂಗ್ಲೆಂಡ್ ಆಟಗಾರರು ಮೇ ೨೯ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ತೆರಳಬೇಕಾಗಿರುವುದರಿಂದ ಆರ್‌ಸಿಬಿ, ಗುಜರಾತ್ ಮತ್ತು ಮುಂಬೈ ತಂಡಗಳಿಗೆ ಆಟಗಾರರ ಕೊರತೆ ಉಂಟಾಗುವ ಸಾಧ್ಯತೆಯಿದೆ. ಜೋಶ್ ಹೇಜಲ್‌ವುಡ್ ಕೂಡ ಆರ್‌ಸಿಬಿಗೆ ಮರಳುವುದು ಅನುಮಾನ.

ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ದ ಭೀತಿಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್, ಪುನರಾರಂಭಕ್ಕೆ ಮತ್ತೊಮ್ಮೆ ಮುಹೂರ್ತ ಕೂಡಿ ಬಂದಿದೆ. ಬಾಕಿ ಉಳಿದಿದ್ದ ಪಂದ್ಯಗಳಿಗೆ ಬಿಸಿಸಿಐ ಇದೀಗ ಹೊಸದಾಗಿ ವೇಳಾಪಟ್ಟಿ ಪ್ರಕಟಿಸಿದ್ದು, ಮೇ 17ರಿಂದ ಐಪಿಎಲ್ ಸ್ಥಗಿತಗೊಂಡಿದ್ದ ಪಂದ್ಯಗಳು ಪುನರಾರಂಭವಾಗಲಿವೆ. ಇದೀಗ ಬಿಸಿಸಿಐ ಹೊಸದಾಗಿ ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಳಯದಲ್ಲಿ ಹೊಸ ತಲೆನೋವು ಶುರುವಾಗಿದ್ದು, ಮಹತ್ವದ ಘಟ್ಟದಲ್ಲಿ ಕೆಲ ಆಟಗಾರರು ಐಪಿಎಲ್‌ ತೊರೆಯುವ ಭೀತಿ ಎದುರಾಗಿದೆ. ಹೀಗಾದಲ್ಲಿ ಆರ್‌ಸಿಬಿಗೆ ನಿರ್ಣಾಯಕ ಘಟ್ಟದಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ.

ಇಂಗ್ಲೆಂಡ್ ಆಟಗಾರರಿಂದ ಆರ್‌ಸಿಬಿಗೆ ಹೊಸ ಟೆನ್ಶನ್:
ಅಂದಹಾಗೆ 2025ರ ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳು ಮೇ 17ರಿಂದ ಪುನರಾರಂಭವಾಗಲಿದೆ. ಈ ಮೊದಲು ನಿಗದಿಯಾಗಿದ್ದ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯವು ಮೇ 25ರಂದು ಆರಂಭವಾಗಬೇಕಿತ್ತು. ಆದರೆ ಹೊಸ ವೇಳಾಪಟ್ಟಿಯ ಪ್ರಕಾರ ಈ ಬಾರಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯವು ಜೂನ್ 03ರಂದು ನಡೆಯಲಿದೆ. ಇನ್ನು ಮೊದಲ ಕ್ವಾಲಿಫೈಯರ್ ಪಂದ್ಯವು ಮೇ 29ರಂದು ನಡೆದರೆ, ಎಲಿಮಿನೇಟರ್ ಪಂದ್ಯವು ಮೇ 30ರಂದು ನಡೆಯಲಿದೆ. ಇದಾದ ಬಳಿಕ ಎರಡನೇ ಕ್ವಾಲಿಫೈಯರ್ ಪಂದ್ಯವು ಜೂನ್ 01ರಂದು ನಡೆಯಲಿದೆ. 

ಇದೆಲ್ಲಾ ಒಂದು ಕಡೆಯಾದರೆ, ಇಂಗ್ಲೆಂಡ್ ಆಟಗಾರರು ಇದೀಗ ಧರ್ಮಸಂಕಟಕ್ಕೆ ಸಿಲುಕಿದ್ದಾರೆ. ಐಪಿಎಲ್‌ನಲ್ಲಿ ಪಾಲ್ಗೊಂಡಿರುವ ಆಟಗಾರರು ಇದೀಗ, ತಮ್ಮ ರಾಷ್ಟ್ರೀಯ ತಂಡ ಕೂಡಿಕೊಳ್ಳಬೇಕೇ ಅಥವಾ ಐಪಿಎಲ್‌ನಲ್ಲಿ ಮುಂದುವರೆಯಬೇಕೇ ಎನ್ನುವ ಗೊಂದಲದಲ್ಲಿದ್ದಾರೆ. ಯಾಕೆಂದರೆ ಇಂಗ್ಲೆಂಡ್ ತಂಡವು ಮೇ 29ರಿಂದ ವೆಸ್ಟ್ ಇಂಡೀಸ್ ಎದುರು ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ. ಹೀಗಾಗಿ ಇಂಗ್ಲೆಂಡ್ ಆಟಗಾರರು ನ್ಯಾಷನಲ್ ಡ್ಯೂಟಿ ಸೇರಿಕೊಳ್ಳಬೇಕೋ ಅಥವಾ ಐಪಿಎಲ್ ಟೂರ್ನಿಯಲ್ಲಿ ಮುಂದುವರೆಯಬೇಕೋ ಎನ್ನುವ ಗೊಂದಲದಲ್ಲಿದ್ದಾರೆ. ಆರ್‌ಸಿಬಿ ಜತೆಜತೆಗೆ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡದಲ್ಲಿರುವ ಇಂಗ್ಲೆಂಡ್ ಆಟಗಾರರಿಗೂ ಇದೀಗ ಗೊಂದಲ ಶುರುವಾಗಿದೆ.

2025ರ ಐಪಿಎಲ್ ಟೂರ್ನಿಯಲ್ಲಿ ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟೋನ್, ಜೇಕೊಬ್ ಬೆಥೆಲ್ ಹಾಗೂ ಫಿಲ್ ಸಾಲ್ಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಪೈಕಿ ಬೆಥೆಲ್ ಹಾಗೂ ಸಾಲ್ಟ್ ಆರ್‌ಸಿಬಿ ಪರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಒಂದು ವೇಳೆ ಆರ್‌ಸಿಬಿ ತಂಡವು ಪ್ಲೇ ಆಫ್ ಪ್ರವೇಶಿಸಿದರೆ, ಇದೇ ವೇಳೆ ಈ ಆಟಗಾರರು ಐಪಿಎಲ್‌ಗೆ ಅಲಭ್ಯರಾದರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ.

ಈಗಾಗಲೇ ಆರ್‌ಸಿಬಿ ತಂಡದ ವೇಗದ ಬೌಲಿಂಗ್ ಅಸ್ತ್ರ ಜೋಶ್ ಹೇಜಲ್‌ವುಡ್‌, ಇನ್ನುಳಿದ ಪಂದ್ಯಗಳಿಗೆ ಆರ್‌ಸಿಬಿ ತಂಡವನ್ನು ಕೂಡಿಕೊಳ್ಳುವುದು ಅನುಮಾನ ಎನ್ನುವಂತಹ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ ಈ ಕುರಿತಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇನ್ನು ಅರ್‌ಸಿಬಿ ಮಾತ್ರವಲ್ಲದೇ ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಕ್ಕೂ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ. ಗುಜರಾತ್ ಟೈಟಾನ್ಸ್ ಪರ ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ ಕಣಕ್ಕಿಳಿದಿದ್ದು, ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಗುಜರಾತ್ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಬಟ್ಲರ್ ಒಂದು ವೇಳೆ ನ್ಯಾಷನಲ್ ಡ್ಯೂಟಿ ಆಯ್ದುಕೊಂಡರೆ, ಟೈಟಾನ್ಸ್‌ಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ. ಇನ್ನೊಂದೆಡೆ ವಿಲ್ ಜ್ಯಾಕ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ವಿಲ್ ಜ್ಯಾಕ್ಸ್‌ ಕೂಡಾ ಐಪಿಎಲ್ ತೊರೆದರೆ, ಮುಂಬೈಗೆ ಹಿನ್ನಡೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.