ಐಪಿಎಲ್ ೧೮ನೇ ಆವೃತ್ತಿ ಮೇ ೧೭ರಿಂದ ಪುನರಾರಂಭವಾಗಲಿದ್ದು, ಬೆಂಗಳೂರು ಸೇರಿ ಆರು ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ವಿದೇಶಿ ಆಟಗಾರರ ಲಭ್ಯತೆಗಾಗಿ ಬಿಸಿಸಿಐ, ವಿವಿಧ ಕ್ರಿಕೆಟ್ ಮಂಡಳಿಗಳ ಜೊತೆ ಚರ್ಚೆ ನಡೆಸುತ್ತಿದೆ. ಸ್ಟಾರ್ಕ್, ಹೇಜಲ್‌ವುಡ್‌, ಸ್ಟೋಯ್ನಿಸ್‌ ಅಲಭ್ಯರಾಗಬಹುದು. ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯುವ ಸಾಧ್ಯತೆಯಿದೆ.

ನವದೆಹಲಿ: ಒಂದು ವಾರ ಸ್ಥಗಿತಗೊಂಡಿರುವ 18ನೇ ಆವೃತ್ತಿ ಐಪಿಎಲ್‌ ಪುನಾರಂಭಕ್ಕೆ ಬಿಸಿಸಿಐ ಭರದ ಸಿದ್ಧತೆ ನಡೆಸುತ್ತಿದೆ. ಪ್ರಮುಖವಾಗಿ, ವಿದೇಶಿ ಆಟಗಾರರನ್ನು ಟೂರ್ನಿಗೆ ಮರಳಿ ಕರೆತರಲು ಬಿಸಿಸಿಐ ನಿರಂತರ ಶ್ರಮಿಸುತ್ತಿದ್ದು, ಎಲ್ಲಾ ದೇಶಗಳ ಕ್ರಿಕೆಟ್‌ ಮಂಡಳಿಗಳ ಜೊತೆ ಚರ್ಚೆ ನಡೆಸುತ್ತಿವೆ.

ಕಳೆದ ಶುಕ್ರವಾರ ಸ್ಥಗಿತಗೊಂಡಿದ್ದ ಐಪಿಎಲ್‌, ಮೇ 17ರಂದು ಪುನಾರಂಭಗೊಳ್ಳಲಿದೆ. ಬೆಂಗಳೂರು ಸೇರಿದಂತೆ ಒಟ್ಟು 6 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಪಂದ್ಯ ಆತಿಥ್ಯ ವಿಚಾರದಲ್ಲಿ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದರೂ, ವಿದೇಶಿ ಆಟಗಾರರ ಲಭ್ಯತೆ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ. ದ್ವಿಪಕ್ಷೀಯ ಸರಣಿ, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಸಿದ್ಧತೆ ನಡುವೆ ಪ್ರಮುಖ ವಿದೇಶಿ ಆಟಗಾರರು ಲಭ್ಯವಿರುವಂತೆ ನೋಡಿಕೊಳ್ಳಲು ಬಿಸಿಸಿಐ ಪ್ರಯತ್ನಿಸುತ್ತಿದೆ. ಕಳೆದ ವಾರ ಟೂರ್ನಿ ಸ್ಥಗಿತಗೊಂಡಾಗ ಬಹುತೇಕ ಎಲ್ಲಾ ಆಟಗಾರರು ತಮ್ಮ ತಮ್ಮ ದೇಶಗಳಿಗೆ ತೆರಳಿದ್ದರು.

ನಿರಂತರ ಚರ್ಚೆ: ಐಪಿಎಲ್‌ನಲ್ಲಿ ವಿದೇಶಿ ಆಟಗಾರರ ಲಭ್ಯತೆಗಾಗಿ ಟೂರ್ನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂಗ್‌ ಅಮೀನ್‌ ಈಗಾಗಲೇ ಕ್ರಿಕೆಟ್‌ ಆಸ್ಟ್ರೇಲಿಯಾ(ಸಿಎ), ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ(ಇಸಿಬಿ) ಜೊತೆ ಕೆಲ ಸುತ್ತಿನ ಮಾತುಕತೆ ನಡೆಸಿದ್ದಾರೆ. ಬಹುತೇಕ ಎಲ್ಲಾ ಆಟಗಾರರು ಟೂರ್ನಿಯಲ್ಲಿ ಆಡುವಂತೆ ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ.

ಬಿಸಿಸಿಐ ಅಧಿಕಾರಿಯೊಬ್ಬರ ಪ್ರಕಾರ, ‘ವಿದೇಶಿ ಕ್ರಿಕೆಟ್‌ ಮಂಡಳಿಗಳ ಜೊತೆ ಬಿಸಿಸಿಐ ಚರ್ಚೆ ನಡೆಸುತ್ತಿದೆ. ಮತ್ತೊಂದೆಡೆ ಫ್ರಾಂಚೈಸಿಗಳು ವಿದೇಶಿ ಆಟಗಾರರ ಜೊತೆ ನೇರ ಸಂಪರ್ಕದಲ್ಲಿದೆ. ಬಹುತೇಕ ಎಲ್ಲಾ ಆಟಗಾರರು ಟೂರ್ನಿಗೆ ಮರಳುವ ವಿಶ್ವಾಸವಿದೆ’ ಎಂದಿದ್ದಾರೆ.

ಇನ್ನು, ಕ್ರಿಕೆಟ್‌ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಗಳು, ಐಪಿಎಲ್‌ಗೆ ಮರಳುವ ಆಯ್ಕೆಯನ್ನು ತನ್ನ ಆಟಗಾರರಿಗೆ ಬಿಟ್ಟುಬಿಟ್ಟಿದೆ. ಆಟಗಾರರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಸ್ಟಾರ್ಕ್‌, ಹೇಜಲ್‌ವುಡ್‌ ಸ್ಟೋಯ್ನಿಸ್‌ ಅಲಭ್ಯ?
ವರದಿಗಳ ಪ್ರಕಾರ, ಆಸ್ಟ್ರೇಲಿಯಾದ ವೇಗಿಗಳಾದ ಮಿಚೆಲ್‌ ಸ್ಟಾರ್ಕ್‌(ಡೆಲ್ಲಿ), ಜೋಶ್‌ ಹೇಜಲ್‌ವುಡ್‌(ಆರ್‌ಸಿಬಿ) ಹಾಗೂ ಆಲ್ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌(ಪಂಜಾಬ್‌) ಐಪಿಎಲ್‌ಗೆ ಮರಳುವ ಸಾಧ್ಯತೆಯಿಲ್ಲ ಎಂದು ತಿಳಿದುಬಂದಿದೆ. ಹೇಜಲ್‌ವುಡ್‌ ಗಾಯಗೊಂಡಿರುವ ಕಾರಣ ಚೇತರಿಸಿಕೊಳ್ಳಲು ಕೆಲ ಸಮಯ ಬೇಕು. ಅತ್ತ ಸ್ಟಾರ್ಕ್‌, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಸಿದ್ಧತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಆಸ್ಟ್ರೇಲಿಯಾದ ಟ್ರ್ಯಾವಿಸ್‌ ಹೆಡ್‌, ಪ್ಯಾಟ್‌ ಕಮಿನ್ಸ್‌, ಇಂಗ್ಲೆಂಡ್‌ನ ಜೋಸ್‌ ಬಟ್ಲರ್‌, ದ.ಆಫ್ರಿಕಾದ ಕೋಟ್ಜೀ, ಯಾನ್ಸನ್‌, ಅಫ್ಘಾನಿಸ್ತಾನದ ಓಮರ್‌ಜೈ, ನೂರ್‌ ಅಹ್ಮದ್‌ ಸೇರಿ ಪ್ರಮುಖರು ಐಪಿಎಲ್‌ನ ಇನ್ನುಳಿದ ಪಂದ್ಯಗಳಿಗೆ ಲಭ್ಯವಿರಲಿದ್ದಾರೆ ಎಂದು ಗೊತ್ತಾಗಿದೆ.

ಬೆಂಗ್ಳೂರು ಸೇರಿ 6 ನಗರಗಳು ಆತಿಥ್ಯ
ಪಂದ್ಯಗಳು ಬೆಂಗಳೂರು ಸೇರಿ 6 ನಗರಗಳಲ್ಲಿ ನಡೆಯಲಿವೆ. ಬೆಂಗಳೂರಿನಲ್ಲಿ 2, ಜೈಪುರಲ್ಲಿ 3, ಲಖನೌದಲ್ಲಿ 2, ಮುಂಬೈನಲ್ಲಿ 1, ಅಹಮದಾಬಾದ್‌ನಲ್ಲಿ 2, ನವದೆಹಲಿಯಲ್ಲಿ 3 ಪಂದ್ಯಗಳು ನಿಗದಿಯಾಗಿದೆ. ಪ್ಲೇ-ಆಫ್‌, ಫೈನಲ್‌ ಪಂದ್ಯಕ್ಕೆ ಇನ್ನೂ ಸ್ಥಳ ನಿಗದಿಯಾಗಿಲ್ಲ.

ಅಹಮದಾಬಾದ್‌ನಲ್ಲಿ ಫೈನಲ್‌ ಹಣಾಹಣಿ?
ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿರುವ ಬಿಸಿಸಿಐ, ಫೈನಲ್‌ ಸೇರಿದಂತೆ ಯಾವುದೇ ನಾಕೌಟ್‌ ಪಂದ್ಯಗಳಿಗೆ ಸ್ಥಳ ನಿಗದಿಪಡಿಸಿಲ್ಲ. ವರದಿಗಳ ಪ್ರಕಾರ, ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ನಡೆಯುವ ಸಾಧ್ಯತೆಯಿದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಕ್ರಿಕೆಟ್‌ ಕ್ರೀಡಾಂಗಣವಾಗಿದ್ದು, 1 ಲಕ್ಷ 32000 ಆಸನ ಸಾಮರ್ಥ್ಯ ಹೊಂದಿದೆ. ಇದೇ ವೇಳೆ, ಮುಂಬೈನ ವಾಂಖೆಡೆ ಕ್ರೀಡಾಂಗಣ ಪ್ಲೇ-ಆಫ್‌ ಪಂದ್ಯಕ್ಕೆ ಆತಿಥ್ಯ ವಹಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.