ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಶುಭ್‌ಮನ್ ಗಿಲ್ ನಾಯಕರಾಗಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಆಡಲಿದ್ದಾರೆ. 2027ರ ವಿಶ್ವಕಪ್ ಆಡಲು ಇವರಿಬ್ಬರೂ ಫಿಟ್ನೆಸ್ ಕಾಪಾಡಿಕೊಳ್ಳಲು ದೇಶಿ ಕ್ರಿಕೆಟ್ ಆಡಬೇಕು ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸಲಹೆ ನೀಡಿದ್ದಾರೆ.
ಬೆಂಗಳೂರು: ಆಸ್ಟ್ರೇಲಿಯಾ ವಿರುದ್ದ ಇದೇ ಅಕ್ಟೋಬರ್ 19ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಆ ಬಳಿಕ ಐದು ಪಂದ್ಯಗಳ ಟಿ20 ಸರಣಿಯನ್ನಾಡಲು ಕಾಂಗರೂ ನಾಡಿಗೆ ಟೀಂ ಇಂಡಿಯಾ ಪ್ರವಾಸ ಮಾಡಲಿದೆ. ಈಗಾಗಲೇ ಆಸೀಸ್ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡ ಪ್ರಕಟಿಸಲಾಗಿದ್ದು, ತಂಡದಲ್ಲಿ ಮಹತ್ವದ ಬದಲಾವಣೆಗಳಾಗಿವೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ತಂಡ ಕೂಡಿಕೊಂಡಿದ್ದಾರೆ. ಆದರೆ ಶುಭ್‌ಮನ್ ಗಿಲ್‌ಗೆ ಭಾರತ ಏಕದಿನ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. ಇದೀಗ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಯುವ ಕ್ರಿಕೆಟಿಗ ಶುಭ್‌ಮನ್ ಗಿಲ್ ನಾಯಕತ್ವದಡಿ ಕಣಕ್ಕಿಳಿಯಲಿದ್ದಾರೆ. ಇನ್ನು ಕೆಲ ಮಾಧ್ಯಮಗಳ ವರದಿಯ ಪ್ರಕಾರ ಆಸ್ಟ್ರೇಲಿಯಾ ಎದುರಿನ ಸರಣಿಯೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಸರಣಿಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಅವರ ಫ್ಯಾನ್ಸ್ ಹಾಗೂ ಕೆಲ ಮಾಜಿ ಕ್ರಿಕೆಟಿಗರು ಕೊಹ್ಲಿ ಹಾಗೂ ರೋಹಿತ್ 2027ರ ಏಕದಿನ ವಿಶ್ವಕಪ್ ಟೂರ್ನಿ ಆಡಲಿ ಎನ್ನುವ ಸಲಹೆ ನೀಡಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಕೊಹ್ಲಿ-ರೋಹಿತ್ ಜೋಡಿಗೆ ಒಂದು ಕಿವಿಮಾತು ಹೇಳಿದ್ದಾರೆ.
ರೋ-ಕೋ ಜೋಡಿಗೆ ಇರ್ಫಾನ್ ಪಠಾಣ್ ಕಿವಿಮಾತು
ಅಂದಹಾಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈಗಾಗಲೇ ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಈ ಇಬ್ಬರು ಕ್ರಿಕೆಟಿಗರು ಏಕದಿನ ಕ್ರಿಕೆಟ್ ಮಾತ್ರ ಆಡುತ್ತಿದ್ದಾರೆ. ಇದೀಗ ಈ ಇಬ್ಬರು ಕ್ರಿಕೆಟಿಗರು 2027ರ ಏಕದಿನ ವಿಶ್ವಕಪ್ ಆಡುವ ಕುರಿತಂತೆ, ಇರ್ಫಾನ್ ಪಠಾಣ್ ರೋ-ಕೋ ಜೋಡಿಗೆ ಕಿವಿ ಮಾತು ಹೇಳಿದ್ದಾರೆ. 'ವಿರಾಟ್ ಹಾಗೂ ರೋಹಿತ್ 2027ರ ಏಕದಿನ ವಿಶ್ವಕಪ್ ಆಡಲು ಬಯಸಿದ್ದಾರೆ. ಆದರೆ ಈ ಮಾದರಿಯ ಕ್ರಿಕೆಟ್‌ಗೆ ಫಿಟ್ನೆಸ್ ತುಂಬಾ ಮುಖ್ಯವಾಗುತ್ತದೆ. ರೋಹಿತ್ ಶರ್ಮಾ ಈಗಾಗಲೇ ಫಿಟ್ನೆಸ್ ಕಡೆ ಸಾಕಷ್ಟು ಗಮನ ನೀಡುತ್ತಿದ್ದಾರೆ. ಆದರೆ ನಿರಂತರವಾದ ಫಿಟ್ನೆಸ್ ಹಾಗೂ ಆಟವಾಡುವಾಗಿನ ಫಿಟ್ನೆಸ್‌ಗೂ ಸಾಕಷ್ಟು ವ್ಯತ್ಯಾಸವಿದೆ. ನಿಯಮಿತವಾದ ಕ್ರಿಕೆಟ್ ಆಡದೇ ಇದ್ದಾಗ ನಿಮ್ಮ ಆಟದಲ್ಲಿ ಕೊಂಚ ಬದಲಾವಣೆಗಳಾಗಬಹುದು. ಹೀಗಾಗಿ ಬಿಡುವಿನ ಸಮಯದಲ್ಲಿ ದೇಶಿ ಕ್ರಿಕೆಟ್‌ನಲ್ಲಿ ಆಡಿದರೆ ಒಳ್ಳೆಯದು' ಎಂದು ಹೇಳಿದ್ದಾರೆ. ಈ ಮೂಲಕ ಇರ್ಫಾನ್ ಪಠಾಣ್ ರೋಹಿತ್-ವಿರಾಟ್ 2027ರ ಏಕದಿನ ವಿಶ್ವಕಪ್ ಆಡಬೇಕಿದ್ದರೇ ದೇಶಿ ಕ್ರಿಕೆಟ್‌ನಲ್ಲಿ ಆಡುವುದು ಅನಿವಾರ್ಯ ಎನ್ನುವ ಕಿವಿಮಾತು ಹೇಳಿದ್ದಾರೆ.
ಮುಂದುವರೆದು, 'ಈ ಇಬ್ಬರೂ ದಿಗ್ಗಜ ಆಟಗಾರರಾಗಿದ್ದು, ಅನುಭವದ ಕೊರತೆಯೇನೂ ಇಲ್ಲ. ಆದರೆ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಕೂಡಾ ಆಡುತ್ತಿಲ್ಲ. ಹೀಗಾಗಿ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ಸಾಕಷ್ಟು ಗ್ಯಾಪ್‌ನಲ್ಲಿ ಏಕದಿನ ಪಂದ್ಯಗಳನ್ನು ಆಡಲಿದೆ. ಹೀಗಾಗಿ ಅವರಿಬ್ಬರೂ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದರೇ ಮಾತ್ರ 2027ರ ಏಕದಿನ ವಿಶ್ವಕಪ್ ಆಡಲು ಸಾಧ್ಯ' ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
ಕೊನೆಯದಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಿದ್ದ ರೋಹಿತ್-ಕೊಹ್ಲಿ ಜೋಡಿ
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಇದಾದ ಬಳಿಕ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮಧ್ಯದಲ್ಲೇ ದಿಢೀರ್ ಎನ್ನುವಂತೆ ಟೆಸ್ಟ್ ಕ್ರಿಕೆಟ್‌ಗೂ ವಿದಾಯ ಘೋಷಿಸಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸಾಕಷ್ಟು ಸಮಯದಿಂದ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಇದೀಗ ಅಕ್ಟೋಬರ್ 19ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಈ ಇಬ್ಬರು ಕ್ರಿಕೆಟಿಗರು ಟೀಂ ಇಂಡಿಯಾ ಜೆರ್ಸಿ ತೊಟ್ಟು ಮೈದಾನಕ್ಕಿಳಿಯಲಿದ್ದಾರೆ.


