ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ ಚೊಚ್ಚಲ ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.
ನವಿ ಮುಂಬೈ: ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 52 ರನ್ ಅಂತರದ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ದೈತ್ಯ ಸಂಹಾರ ಮಾಡಿ ಫೈನಲ್ ಪ್ರವೇಶಿಸಿದ್ದ ಭಾರತ
ಈ ಬಾರಿಯ ವಿಶ್ವಕಪ್ ಲೀಗ್ ಹಂತದಲ್ಲಿ ಸತತ ಹ್ಯಾಟ್ರಿಕ್ ಸೋಲು ಕಂಡಿದ್ದ ಹರ್ಮನ್‌ಪ್ರೀತ್ ಕೌರ್ ಪಡೆ ಆ ಬಳಿಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತ್ತು. ಇನ್ನು ಸೆಮೀಸ್‌ನಲ್ಲಿ ಏಳು ಬಾರಿಯ ಚಾಂಪಿಯನ್ ಬಲಿಷ್ಠ ಅಸ್ಟ್ರೇಲಿಯಾ ಎದುರು ಅವಿಸ್ಮರಣೀಯ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿತ್ತು. ಸೆಮಿಫೈನಲ್‌ನಲ್ಲಿ ಜೆಮಿಯಾ ರೋಡ್ರಿಗ್ಸ್ ವೃತ್ತಿಜೀವನದ ಶ್ರೇಷ್ಠ ಶತಕ ಸಿಡಿಸುವ ಮೂಲಕ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಇನ್ನು ಫೈನಲ್‌ನಲ್ಲಿ, ಭಾರತ ಸಾಂಘಿಕ ಪ್ರದರ್ಶನ ತೋರುವ ಮೂಲಕ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಟ್ರೋಫಿ ಜತೆ ಐಕಾನಿಕ್ ಪೋಸ್ ಕೊಟ್ಟ ಜೆಮಿಮಾ-ಮಂಧನಾ
ಇನ್ನು ಏಕದಿನ ವಿಶ್ವಕಪ್ ಟ್ರೋಫಿ ಗೆಲುವಿನ ಬಳಿಕ ಜೆಮಿಮಾ ರೋಡ್ರಿಗ್ಸ್ ತಮ್ಮ ಸಹ ಆಟಗಾರ್ತಿ ಸ್ಮೃತಿ ಮಂಧನಾ ಜತೆ ಟ್ರೋಫಿ ಜತೆಗಿಟ್ಟುಕೊಂಡು ಮಲಗಿರುವ ಫೋಟೋ ಇದೀಗ ವೈರಲ್ ಆಗಿದೆ. ಇದಕ್ಕೆ ಜೆಮಿಮಾ, 'ಗುಡ್ ಮಾರ್ನಿಂಗ್ ವರ್ಲ್ಡ್' ಎನ್ನುವ ಕ್ಯಾಪ್ಷನ್ ನೀಡಿದ್ದಾರೆ. ಈ ಪೋಸ್ಟ್ ಅವರನ್ನು 26 ಲಕ್ಷಕ್ಕೂ ಅಧಿಕ ಮಂದಿ ಇನ್‌ಸ್ಟಾಗ್ರಾಂನಲ್ಲಿ ಲೈಕ್ ಮಾಡಿದ್ದಾರೆ.
ಇನ್ನು ಜೆಮಿಮಾ ರೋಡ್ರಿಗ್ಸ್, ಸ್ಮೃತಿ ಮಂಧನಾ, ರಾಧಾ ಯಾದವ್ ಹಾಗೂ ಅರುಂದತಿ ರೆಡ್ಡಿ ಜತೆಗೆ ಫೋಟೋ ಹಿಡಿದುಕೊಂಡು ಮಲಗಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನಾವಿನ್ನೂ ಕನಸು ಕಾಣುತ್ತಿದ್ದೇವೆ? ಎನ್ನುವ ಕ್ಯಾಪ್ಷನ್ ನೀಡಿದ್ದಾರೆ. ಈ ಪೋಸ್ಟ್ ಅನ್ನು 11 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
ಇನ್ನು ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಬಗ್ಗೆ ಹೇಳುವುದಾದರೇ, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿತು. ಭಾರತ ಪರ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ(87) ಹಾಗೂ ದೀಪ್ತಿ ಶರ್ಮಾ(58) ಆಕರ್ಷಕ ಅರ್ಧಶತಕ ಸಿಡಿಸಿದರೆ, ಸ್ಮೃತಿ ಮಂಧನಾ(45), ರಿಚಾ ಘೋಷ್(34) ಅಮೂಲ್ಯ ಕೊಡುಗೆ ನೀಡಿದರು.
ಇನ್ನು ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಗೆ ನಾಯಕಿ ಲಾರಾ ವೋಲ್ವರ್ಟ್ ಆಕರ್ಷಕ ಶತಕ ಸಿಡಿಸಿದರಾದರೂ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗಲಿಲ್ಲ. ದೀಪ್ತಿ ಶರ್ಮಾ 5 ವಿಕೆಟ್ ಕಬಳಿಸಿದರೆ, ಶಫಾಲಿ ವರ್ಮಾ ಎರಡು ಪ್ರಮುಖ ವಿಕೆಟ್ ಕಬಳಿಸಿ ಪಂದ್ಯದ ದಿಕ್ಕನ್ನೇ ಬದಲಿಸಿ ಬಿಟ್ಟರು.


