ಐಪಿಎಲ್ ೨೦೨೫ ಪುನರಾರಂಭವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್‌ನ ಸ್ಟಾರ್ಕ್ ವೈಯಕ್ತಿಕ ಕಾರಣಗಳಿಂದಾಗಿ ಮತ್ತೆ ಆಡುತ್ತಿಲ್ಲ. ೧೧.೭೫ ಕೋಟಿಗೆ ಖರೀದಿಸಿದ್ದ ಸ್ಟಾರ್ಕ್ ಇಲ್ಲದಿರುವುದು ತಂಡಕ್ಕೆ ಹೊಡೆತ. ೩.೫ ಕೋಟಿ ನಷ್ಟವೂ ಅವರಿಗೆ ಆಗಬಹುದು. ಉತ್ತಮ ಫಾರ್ಮ್‌ನಲ್ಲಿದ್ದ ಸ್ಟಾರ್ಕ್ ಅನುಪಸ್ಥಿತಿ ಡೆಲ್ಲಿಯ ಪ್ಲೇಆಫ್ ಅವಕಾಶಗಳ ಮೇಲೆ ಪರಿಣಾಮ ಬೀರಬಹುದು.
ಬೆಂಗಳೂರು: ಇಂದಿನಿಂದ ಐಪಿಎಲ್ 2025 ರ ರೋಮಾಂಚನಕಾರಿ ಪಂದ್ಯಾವಳಿಗಳು ಶುರುವಾಗ್ತಿದೆ. ಭಾರತ-ಪಾಕಿಸ್ತಾನದ ಗಡಿ ಉದ್ವಿಗ್ನತೆಯ ಸಮಸ್ಯೆಯಿಂದ ಬಿಸಿಸಿಐ ಈ ಸೀಸನ್‌ನ ಐಪಿಎಲ್ ಟೂರ್ನಿಯನ್ನು ಮಧ್ಯದಲ್ಲೇ ನಿಲ್ಲಿಸಿತ್ತು. ಒಂದು ವಾರ ನಿಂತಿದ್ದ 18ನೇ ಸೀಸನ್ ಈಗ ಮತ್ತೆ ಶುರುವಾಗ್ತಿದೆ. ಕೊನೆಯ ಪಂದ್ಯ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ - ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿತ್ತು, ಆದ್ರೆ ಇಂಡೋ-ಪಾಕ್ ಯುದ್ಧ ಭೀತಿಯಿಂದಾಗಿ ಈ ಐಪಿಎಲ್ ಪಂದ್ಯವು ಅರ್ಧದಲ್ಲೇ ನಿಂತಿತ್ತು. ಆಮೇಲೆ ಐಪಿಎಲ್ ಟೂರ್ನಿಯನ್ನೇ ತಾತ್ಕಾಲಿಕವಾಗಿ ನಿಲ್ಲಿಸಬೇಕಾಯ್ತು, ವಿದೇಶಿ ಆಟಗಾರರು ತಮ್ಮ ದೇಶಕ್ಕೆ ಹೋದ್ರು. ಈಗ ಲೀಗ್ ಮತ್ತೆ ಶುರುವಾಗ್ತಿದೆ, ಆದ್ರೆ ಒಬ್ಬ ಆಟಗಾರ ಈ ಬಾರಿ ಐಪಿಎಲ್ ಆಡಲು ಭಾರತಕ್ಕೆ ಬರಲ್ಲ ಅಂತ ಹೇಳಿದ್ದಾರೆ. ಇದ್ರಿಂದ ಅವ್ರಿಗೆ ದೊಡ್ಡ ನಷ್ಟ ಆಗಬಹುದು.
ಹೌದು, ಡೆಲ್ಲಿ ಕ್ಯಾಪಿಟಲ್ಸ್‌ಗೆ ಈ ಸೀಸನ್‌ನಲ್ಲಿ ಒಳ್ಳೆ ಫಾರ್ಮ್‌ನಲ್ಲಿದ್ದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಈಗ ತಂಡದ ಜೊತೆ ಇರಲ್ಲ. ತವರಿಗೆ ವಾಪಾಸ್ಸಾಗಿದ್ದ ಮಿಚೆಲ್ ಸ್ಟಾರ್ಕ್ ಮತ್ತೆ ಐಪಿಎಲ್ ಆಡಲು ಭಾರತಕ್ಕೆ ಬರುವುದಿಲ್ಲ ಎಂದು ಖಚಿತವಾಗಿದೆ. ಇದ್ರಿಂದ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಕೆಲವು ವರದಿಗಳ ಪ್ರಕಾರ, ಅವರು ಡೆಲ್ಲಿ ಮ್ಯಾನೇಜ್‌ಮೆಂಟ್‌ಗೆ ಈ ಬಗ್ಗೆ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್‌ರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 11.75 ಕೋಟಿ ನೀಡಿ ಖರೀದಿಸಿತ್ತು.
ವಾಪಸ್ ಬರದಿದ್ರೆ ಸ್ಟಾರ್ಕ್‌ಗೆ ದೊಡ್ಡ ನಷ್ಟ!
ಆಸ್ಟ್ರೇಲಿಯಾ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮತ್ತೆ ಆಡದಿದ್ರೆ, ಅವ್ರಿಗೆ ದೊಡ್ಡ ನಷ್ಟ ಆಗಬಹುದು. ವರದಿಗಳ ಪ್ರಕಾರ, ಸ್ಟಾರ್ಕ್ ಈ ನಿರ್ಧಾರಕ್ಕೆ 3.5 ಕೋಟಿ ನಷ್ಟ ಅನುಭವಿಸಬೇಕಾಗಬಹುದು. ಬಿಸಿಸಿಐ ನಿಯಮದ ಪ್ರಕಾರ, ವಿದೇಶಿ ಆಟಗಾರ ಐಪಿಎಲ್ ಸೀಸನ್ ಪೂರ್ತಿ ಆಡದಿದ್ರೆ, ಅವರ ಸಂಭಾವನೆ ಕಡಿತ ಆಗುತ್ತೆ.
ಡೆಲ್ಲಿಗೆ ಐಪಿಎಲ್ 2025 ರಲ್ಲಿ ಸ್ಟಾರ್ಕ್ ಮ್ಯಾಚ್ ವಿನ್ನರ್
ಮಿಚೆಲ್ ಸ್ಟಾರ್ಕ್ ಈ ಸೀಸನ್‌ನಲ್ಲಿ ಚೆನ್ನಾಗಿ ಆಡಿದ್ರು. ಅವರ ಬೌಲಿಂಗ್‌ನಿಂದ ಡೆಲ್ಲಿಗೆ ಕೆಲವು ಪಂದ್ಯ ಗೆದ್ದಿದೆ. 11 ಪಂದ್ಯಗಳಲ್ಲಿ 10.16 ಇಕಾನಮಿಯಲ್ಲಿ 14 ವಿಕೆಟ್ ಪಡೆದಿದ್ದಾರೆ. ಇದ್ರಲ್ಲಿ 5 ವಿಕೆಟ್ ಒಂದೇ ಪಂದ್ಯದಲ್ಲಿ ಬಂದಿತ್ತು. ಈ ಮ್ಯಾಚ್ ವಿನ್ನರ್ ತಂಡದಿಂದ ಹೊರಗೆ ಹೋಗೋದು ಡೆಲ್ಲಿಗೆ ದೊಡ್ಡ ಹೊಡೆತ ಆಗುವ ಸಾಧ್ಯತೆಯಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಲೆಕ್ಕಾಚಾರವೇನು?
ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅದ್ಭುತ ಆರಂಭವನ್ನು ಪಡೆದುಕೊಂಡಿತ್ತು. ಅದರೆ ಡೆಲ್ಲಿ ಸತತ ಗೆಲುವಿನ ನಾಗಾಲೋಟಕ್ಕೆ ಮುಂಬೈ ಇಂಡಿಯನ್ಸ್ ಬ್ರೇಕ್ ಹಾಕಿತ್ತು. ಇನ್ನು ಇದಾದ ಬಳಿಕ ಡೆಲ್ಲಿ ತಂಡವು ಸ್ಥಿರ ಪ್ರದರ್ಶನ ತೋರಲು ಪದೇ ಪದೇ ಎಡವುತ್ತಾ ಬಂದಿದೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡವು 11 ಪಂದ್ಯಗಳನ್ನಾಡಿ 6 ಗೆಲುವು, 4 ಸೋಲು ಹಾಗೂ ಒಂದು ಪಂದ್ಯ ರದ್ದು ಸೇರಿದಂತೆ 13 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಸದ್ಯ 5ನೇ ಸ್ಥಾನದಲ್ಲಿದೆ. ಇನ್ನುಳಿದ ಮೂರು ಪಂದ್ಯಗಳ ಪೈಕಿ ಕನಿಷ್ಠ ಎರಡು ಪಂದ್ಯಗಳನ್ನು ಜಯಿಸಿದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಒಂದಕ್ಕಿಂತ ಹೆಚ್ಚು ಪಂದ್ಯ ಸೋತರೇ ಪ್ಲೇ ಆಫ್ ಕನಸು ನುಚ್ಚುನೂರಾಗುವ ಸಾಧ್ಯತೆಯಿದೆ.


