ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 2025ರ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಪಂಜಾಬ್ ವಿರುದ್ಧ ಸೋತ ಬೆನ್ನಲ್ಲೇ ಧೋನಿ, ಸಿಎಸ್‌ಕೆ ಮಾಲೀಕರ ಜತೆ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಫೋಟೋಗಳು ವೈರಲ್ ಆಗಿದ್ದು, ಧೋನಿ ಭವಿಷ್ಯದ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಚೆಪಾಕ್‌: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಮೊದಲ ತಂಡವಾಗಿ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಪಂಜಾಬ್ ಸೂಪರ್ ಕಿಂಗ್ಸ್ ಎದುರು 4 ವಿಕೆಟ್ ಅಂತರದ ರೋಚಕ ಸೋಲು ಅನುಭವಿಸುತ್ತಿದ್ದಂತೆಯೇ 5 ಬಾರಿಯ ಚಾಂಪಿಯನ್ ಸಿಎಸ್‌ಕೆ ತಂಡವು ಅಧಿಕೃವಾಗಿ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಇನ್ನು ಇದರ ಬೆನ್ನಲ್ಲೇ ಮಹೇಂದ್ರ ಸಿಂಗ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್‌ ಮಾಲೀಕರ ಜತೆ ಮಾತುಕತೆ ನಡೆಸುವ ಫೋಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಧೋನಿ ವೈರಲ್ ಫೋಟೋದ ಗುಟ್ಟೇನು?

ಚೆನ್ನೈ ಮತ್ತು ಪಂಜಾಬ್ ನಡುವಿನ ಪಂದ್ಯದ ನಂತರ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕರ ಜೊತೆ ಮಾತನಾಡುತ್ತಿರುವುದು ಕಂಡುಬಂದಿದೆ. ಸಿಇಒ ಕಾಶಿ ವಿಶ್ವನಾಥನ್ ಜೊತೆ ದೀರ್ಘ ಚರ್ಚೆ ನಡೆಸಿದರು. ಇನ್ನು ಸಿಎಸ್‌ಕೆ ಹಾಗೂ ಪಂಜಾಬ್ ನಡುವಿನ ಟಾಸ್ ವೇಳೆ ಡ್ಯಾನಿ ಮೋರಿಸನ್ ಮುಂದಿನ ಸೀಸನ್‌ನಲ್ಲಿ ಆಡುತ್ತೀರಾ ಎಂದು ಧೋನಿಯನ್ನು ಕೇಳಿದಾಗ, ಗೊತ್ತಿಲ್ಲ, ಮುಂದಿನ ಪಂದ್ಯಕ್ಕೆ ಬರ್ತೀನಿ ಎಂದಿದ್ದಾರೆ. ಐಪಿಎಲ್ ಪಾಯಿಂಟ್ಸ್ ಪಟ್ಟಿಯಲ್ಲಿ ಧೋನಿ ನೇತೃತ್ವದ ಸಿಎಸ್‌ಕೆ 10 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಗೆದ್ದಿದ್ದು, ನಾಲ್ಕು ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

Scroll to load tweet…
Scroll to load tweet…

18 ಆವೃತ್ತಿ ಪೈಕಿ 4 ಬಾರಿ ಪ್ಲೇ-ಆಫ್‌ಗಿಲ್ಲ

ಚೆನ್ನೈ ತಂಡ 18 ಆವೃತ್ತಿಗಳ ಪೈಕಿ ಕೇವಲ 4 ಬಾರಿ ಮಾತ್ರ ಪ್ಲೇ-ಆಫ್‌ ಪ್ರವೇಶಿಸಲು ವಿಫಲವಾಗಿದೆ. ತಂಡ 2020ರಲ್ಲಿ 7ನೇ, 2022ರಲ್ಲಿ 9ನೇ, 2024ರಲ್ಲಿ 5ನೇ ಸ್ಥಾನಿಯಾಗಿತ್ತು. ಉಳಿದಂತೆ ಎಲ್ಲಾ ಬಾರಿ ಪ್ಲೇ-ಆಫ್‌ಗೇರಿರುವ ತಂಡ 5 ಬಾರಿ ಚಾಂಪಿಯನ್‌ ಆಗಿದ್ದರೆ, 5 ಬಾರಿ ರನ್ನರ್‌-ಅಪ್‌ ಆಗಿದೆ.

ಈ ಬಾರಿ ಹೊರಬಿದ್ದ ಮೊದಲ ತಂಡ ಚೆನ್ನೈ

ಚೆನ್ನೈ ಈ ಬಾರಿ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದ ಮೊದಲ ತಂಡ. ಯಾವುದೇ ತಂಡ ಪ್ಲೇ-ಆಫ್‌ಗೇರಲು ಕನಿಷ್ಠ 7 ಗೆಲುವು ಅಗತ್ಯ. ಆದರೆ ಚೆನ್ನೈ ಇನ್ನುಳಿದ 4ರಲ್ಲಿ ಗೆದ್ದರೂ ಒಟ್ಟು 6 ಪಂದ್ಯ ಗೆದ್ದಂತಾಗುತ್ತದೆ. ಹೀಗಾಗಿ ತಂಡ ಹೊರಬಿದ್ದಿದೆ. ಗುರುವಾರ ಸೋತರೆ ರಾಜಸ್ಥಾನ ಕೂಡಾ ಅಧಿಕೃತವಾಗಿ ಹೊರಬೀಳಲಿದೆ.

ಎಂಟರಲ್ಲಿ ಸೋತು ಗಂಟುಮೂಟೆ ಕಟ್ಟಿದ ಚೆನ್ನೈ!

ಈ ಬಾರಿ ಟೂರ್ನಿಯಲ್ಲಿ ಆಡಿರುವ 10 ಪಂದ್ಯಗಳ ಪೈಕಿ 8ರಲ್ಲಿ ಸೋಲನುಭವಿಸಿದ 5 ಬಾರಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಪ್ಲೇ-ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಬುಧವಾರ ನಿರ್ಣಾಯಕ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ 4 ವಿಕೆಟ್‌ ಸೋಲು ಕಂಡ ತಂಡ, ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಬಾಕಿಯಾಯಿತು. ತಂಡ ಇನ್ನುಳಿದ 4 ಪಂದ್ಯದಲ್ಲಿ ಗೆದ್ದರೂ ನಾಕೌಟ್‌ ಪ್ರವೇಶಿಸುವುದಿಲ್ಲ. ಮತ್ತೊಂದೆಡೆ ಪಂಜಾಬ್‌ ಟೂರ್ನಿಯಲ್ಲಿ ಆಡಿದ 10 ಪಂದ್ಯಗಳಲ್ಲಿ 6ನೇ ಗೆಲುವು ಸಾಧಿಸಿದ್ದು, ಪ್ಲೇ-ಆಫ್‌ಗೆ ಮತ್ತಷ್ಟು ಹತ್ತಿರವಾಗಿದೆ.

ಚೆನ್ನೈ ಕೊನೆಗೂ ಬ್ಯಾಟಿಂಗ್‌ನಲ್ಲಿ ಸುಧಾರಿತ ಪ್ರದರ್ಶನ ತೋರಿತು. ಆದರೆ ಕೊನೆ 11 ಎಸೆತಗಳಲ್ಲಿ 6 ವಿಕೆಟ್‌ ಕಳೆದುಕೊಂಡ ತಂಡ 19.2 ಓವರ್‌ಗಳಲ್ಲಿ 190ಕ್ಕೆ ಆಲೌಟಾಯಿತು. ಇದು ಚೆನ್ನೈನಲ್ಲಿ ದೊಡ್ಡ ಮೊತ್ತವೇ ಆಗಿದ್ದರೂ ಪಂಜಾಬ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ 19.4 ಓವರ್‌ಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿತು.

ಪ್ರಭ್‌ಸಿಮ್ರನ್‌ 36 ಎಸೆತಕ್ಕೆ 54 ರನ್‌ ಗಳಿಸಿದರೆ, ನಾಯಕ ಶ್ರೇಯಸ್‌ ಅಯ್ಯರ್‌ 41 ಎಸೆತಗಳಲ್ಲಿ 72 ರನ್‌ ಬಾರಿಸಿ ತಂಡವನ್ನು ಗೆಲ್ಲಿಸಿದರು. ಪ್ರಿಯಾನ್ಶ್‌ ಆರ್ಯ 23, ಶಶಾಂಕ್‌ ಸಿಂಗ್‌ 23 ರನ್‌ ಕೊಡುಗೆ ನೀಡಿದರು.