ಸೆಪ್ಟೆಂಬರ್ 9 ರಿಂದ ಆರಂಭವಾಗಲಿರುವ ಏಷ್ಯಾಕಪ್ ಟಿ20 ಟೂರ್ನಿಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. ಆದರೆ, ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್‌ರಂತಹ ಅನುಭವಿ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಸಲ್ಮಾನ್ ಅಲಿ ಅಘಾ ತಂಡವನ್ನು ಮುನ್ನಡೆಸಲಿದ್ದಾರೆ.

ಇಸ್ಲಾಮಾಬಾದ್‌: ಬಹುನಿರೀಕ್ಷಿತ ಸೆಪ್ಟೆಂಬರ್ 09ರಿಂದ ಆರಂಭವಾಗಲಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ 17 ಆಟಗಾರರನ್ನೊಳಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಪ್ರಕಟಿಸಿದೆ. ಆದರೆ ಅನುಭವಿ ಬ್ಯಾಟರ್‌ಗಳಾದ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್‌ಗೆ ತಂಡದಿಂದ ಗೇಟ್‌ಪಾಸ್ ನೀಡಲಾಗಿದೆ.

ಏಷ್ಯಾಕಪ್ ಟಿ20 ಸರಣಿಗೂ ಮುನ್ನ ಪಾಕಿಸ್ತಾನ ತಂಡವು ಯುಎಇ ಹಾಗೂ ಆಫ್ಘಾನಿಸ್ತಾನ ಎದುರು ತ್ರಿಪಕ್ಷೀಯ ಸರಣಿಯನ್ನಾಡಲಿದೆ. ಈ ಎರಡು ಸರಣಿಗೆ 17 ಆಟಗಾರರನ್ನೊಳಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಸಲ್ಮಾನ್ ಅಲಿ ಅಘಾ ಪಾಕ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಏಷ್ಯಾಕಪ್ ಟೂರ್ನಿಗೆ ಅನುಭವಿ ಆಟಗಾರರಾದ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್‌ಗೆ ಪಿಸಿಬಿಯಿಂದ ಬುಲಾವ್ ಬರಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದ್ದು, ಈ ಇಬ್ಬರೂ ಆಟಗಾರರನ್ನು ಚುಟುಕು ಕ್ರಿಕೆಟ್ ಮಾದರಿಯಿಂದ ಕೈಬಿಡಲಾಗಿದೆ.

ಏಷ್ಯಾಕಪ್ ಟೂರ್ನಿಗೆ ಸಾಕಷ್ಟು ಅಳೆದು-ತೂಗಿ ಪಾಕ್ ತಂಡವನ್ನು ಪಿಸಿಬಿ ಪ್ರಕಟಿಸಿದೆ. ತಂಡದಲ್ಲಿ ಅನುಭವಿ ಆಟಗಾರರಾದ ಫಖರ್ ಜಮಾನ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ ಹಾಗೂ ಫಾಹೀಂ ಅಶ್ರಫ್‌ಗೆ ಮಣೆ ಹಾಕಲಾಗಿದೆ. ಇದರ ಜತೆ ಯುವ ಪ್ರತಿಭಾನ್ವಿತ ಕ್ರಿಕೆಟಿಗರಾದ ಸೈಮ್ ಆಯುಬ್, ಹಸನ್ ನವಾಜ್, ಮೊಹಮ್ಮದ್ ಹ್ಯಾರಿಸ್ ಅವರಂತಹ ಆಟಗಾರರಿಗೂ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಏಷ್ಯಾಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿದ್ದು, ಪಂದ್ಯಾವಳಿಗಳು ಸೆಪ್ಟೆಂಬರ್ 09ರಿಂದ 28ರ ವರೆಗೆ ದುಬೈ ಹಾಗೂ ಅಬುದಾಬಿಯಲ್ಲಿ ನಡೆಯಲಿವೆ. ಪಾಕಿಸ್ತಾನ ತಂಡವು 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಭಾರತ, ಓಮನ್ ಹಾಗೂ ಯುಎಇ ತಂಡಗಳು ಸ್ಥಾನ ಪಡೆದಿವೆ. ಪಾಕಿಸ್ತಾನ ತಂಡವು ಸೆಪ್ಟೆಂಬರ್ 12ರಂದು ಓಮನ್ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಾದ ಬಳಿಕ ಗ್ರೂಪ್ ಹಂತದಲ್ಲಿ ಪಾಕಿಸ್ತಾನ ತಂಡವು ಸೆಪ್ಟೆಂಬರ್ 14ರಂದು ಭಾರತ ಎದುರು ಆ ಬಳಿಕ ಸೆಪ್ಟೆಂಬರ್ 17ರಂದು ಯುಎಇ ವಿರುದ್ದ ಸೆಣಸಾಡಲಿದೆ.

2023ರಲ್ಲಿ ನಡೆದ ಕೊನೆಯ ಬಾರಿಗಿನ ಏಷ್ಯಾಕಪ್ ಟೂರ್ನಿಯು ಏಕದಿನ ಮಾದರಿಯಲ್ಲಿ ನಡೆದಿತ್ತು. ಆದರೆ ಪಾಕಿಸ್ತಾನ ತಂಡವು ಸೂಪರ್ ಹಂತದಲ್ಲಿ ಆಡಿದ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಪ್ರಶಸ್ತಿ ಸುತ್ತಿಗೇರಲು ವಿಫಲವಾಗಿತ್ತು. ಇದೀಗ ಮುಂದಿನ ವರ್ಷ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ನಡೆಯುವುದರಿಂದ ಈ ಬಾರಿಯ ಏಷ್ಯಾಕಪ್ ಟೂರ್ನಿಯು ಟಿ20 ಮಾದರಿಯಲ್ಲಿ ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತೀರ್ಮಾನಿಸಿದೆ. ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ಎದುರು ಪಾಕಿಸ್ತಾನ ತಂಡವು ಏಕದಿನ ಮಾದರಿಯಲ್ಲಿ 35 ವರ್ಷಗಳ ಬಳಿಕ ಸರಣಿ ಸೋತು ಮುಖಭಂಗ ಅನುಭವಿಸಿತ್ತು. ಇದೀಗ ಏಷ್ಯಾಕಪ್ ಟೂರ್ನಿಯಲ್ಲಿ ಯುವ ಹಾಗೂ ಅನುಭವಿ ಆಟಗಾರರನ್ನೊಳಗೊಂಡ ತಂಡ ಯಾವ ರೀತಿ ಪ್ರದರ್ಶನ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಪಾಕಿಸ್ತಾನ ತಂಡವು 8 ವರ್ಷಗಳ ಬಳಿಕ ಬಾಬರ್ ಅಜಂ ಅವರಿಲ್ಲದೇ ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದೆ. 

ಏಷ್ಯಾಕಪ್ ಹಾಗೂ ತ್ರಿಕೋನ ಸರಣಿಗೆ ಪಾಕಿಸ್ತಾನ ತಂಡ ಹೀಗಿದೆ:

ಸಲ್ಮಾನ್ ಅಲಿ ಅಘಾ(ನಾಯಕ), ಅಬ್ರಾರ್ ಅಹ್ಮದ್, ಫಾಹೀಂ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲಾಟ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್(ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸೀಂ ಜೂನಿಯರ್, ಶಾಹೀಜಾದ್ ಫರ್ಹಾನ್, ಸೈಮ್ ಆಯುಬ್, ಸಲ್ಮಾನ್ ಮಿರ್ಜಾ, ಶಾಹೀನ್ ಶಾ ಅಫ್ರಿದಿ, ಸೌಫುನ್ ಮೊಖಿಮ್