Pakistan to Boycott UAE Match ಸೆಪ್ಟೆಂಬರ್ 14 ರಂದು ನಡೆದ ಏಷ್ಯಾಕಪ್ ಪಂದ್ಯದ ಕೊನೆಯಲ್ಲಿ ಭಾರತ ತಂಡವು ತಮ್ಮ ಆಟಗಾರರೊಂದಿಗೆ ಕೈಕುಲುಕದಿರಲು ನಿರ್ಧರಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡವು ಯುಎಇ ವಿರುದ್ಧದ ಕೊನೆಯ ಗುಂಪು ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ. 

ದುಬೈ (ಸೆ.17): ಇತ್ತೀಚೆಗೆ ಭಾರತ ವಿರುದ್ಧದ ಹ್ಯಾಂಡ್‌ಶೇಕ್ ವಿವಾದದ ನಂತರ ಪಾಕಿಸ್ತಾನವು ಏಷ್ಯಾಕಪ್‌ನಲ್ಲಿ ಯುಎಇ ವಿರುದ್ಧದ ತನ್ನ ಅಂತಿಮ ಗುಂಪು ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಭಾರತದ ವಿರುದ್ಧದ ಪಂದ್ಯದಲ್ಲಿ ಹ್ಯಾಂಡ್‌ಶೇಕ್ ವಿವಾದದಲ್ಲಿ ಭಾರತದ ಪರವಾಗಿ ನಿಂತಿದ್ದಾರೆ ಎಂದು ಆರೋಪಿಸಿ ಐಸಿಸಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸಬೇಕೆಂದು ಪಾಕಿಸ್ತಾನ ಒತ್ತಾಯಿಸಿತ್ತು. ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಬೇಕಿದ್ದು, ಯುಎಇ ತಂಡವು ಈಗಾಗಲೇ ಕ್ರೀಡಾಂಗಣಕ್ಕೆ ತೆರಳಿದೆ.

ಸುದ್ದಿಯ ಅಪ್‌ಡೇಟ್‌: ಕೊನೇ ಕ್ಷಣದಲ್ಲಿ ಪಾಕಿಸ್ತಾನ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಆಟಗಾರರು ದುಬೈ ಸ್ಟೇಡಿಯಂಗೆ ತೆರಳುತ್ತಿದ್ದಾರೆ ಎಂದು ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷ ಹಾಗೂ ಪಾಕಿಸ್ತಾನದ ಮಾಜಿ ಆಟಗಾರ ಮೊಹ್ಸಿನ್‌ ನಕ್ವಿ ಟ್ವೀಟ್‌ ಮಾಡಿ ತಿಳಿಸಿದ್ದಾರೆ.

ಹೋಟೆಲ್‌ನಲ್ಲೇ ಇರುವಂತೆ ಆಟಗಾರರಿಗೆ ಸೂಚಿಸಿದ ಪಾಕಿಸ್ತಾನ

ಆದರೆ, ಜಿಯೋ ನ್ಯೂಸ್‌ನಲ್ಲಿನ ವರದಿಯ ಪ್ರಕಾರ, ಪಾಕಿಸ್ತಾನದ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದೆ, ಆದರೆ ಅಂತಿಮವಾಗಿ ಒಂದು ಸಂಧಾನ ಸೂತ್ರ ಕಂಡುಬಂದಿತ್ತು ಎಂದು ಮೊದಲೇ ವರದಿಯಾಗಿತ್ತು. ಈ ನಡುವೆ, ಪಿಸಿಬಿ ರಾಷ್ಟ್ರೀಯ ತಂಡವು ತಮ್ಮ ಹೋಟೆಲ್‌ನಲ್ಲಿಯೇ ಇರುವಂತೆ ಮತ್ತು ಯುಎಇ ವಿರುದ್ಧದ ಪಂದ್ಯದ ಸ್ಥಳಕ್ಕೆ ಹೋಗದಂತೆ ಸೂಚಿಸಿತು. ಆಟಗಾರರು ತಮ್ಮ ಹೋಟೆಲ್ ಕೋಣೆಗಳ ಒಳಗೆ ಇರಲು ಹೇಳಲಾಗಿದೆ. ಇದರಿಂದಾಗಿ ಪಾಕಿಸ್ತಾನ ಯುಎಇ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧಾರ ಮಾಡಿದೆ ಅನ್ನೋದನ್ನು ಸೂಚಿಸಿದೆ.

ಇದಕ್ಕೂ ಮುನ್ನ ಪಾಕ್‌ ತಂಡದ ಆಟಗಾರರು ಹೋಟೆಲ್‌ನ ಬಳಿ ತಮ್ಮ ಕಿಟ್‌ಬ್ಯಾಗ್‌ಗಳನ್ನು ಬಸ್‌ಗೆ ಲೋಡ್‌ ಮಾಡುತ್ತಿದ್ದ ವಿಡಿಯೋ ಹೊರಬಿದ್ದಿತ್ತು. ಆಗ ತಂಡ ಪಂದ್ಯವಾಡಲು ಸ್ಟೇಡಿಯಂಗೆ ಹೋಗುವ ಹಾದಿಯಲ್ಲಿತ್ತು. ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧದ ಪಂದ್ಯದಲ್ಲಿ ಹ್ಯಾಂಡ್‌ಶೇಕ್ ವಿವಾದ ಉಂಟಾದ ನಂತರ, ಪಿಸಿಬಿ ಇಂದು ಏಷ್ಯಾ ಕಪ್‌ನಲ್ಲಿ ರಾಷ್ಟ್ರೀಯ ತಂಡದ ಭಾಗವಹಿಸುವಿಕೆಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಆ ಬಳಿಕ ಮಾಧ್ಯಮ ವರದಿಗಳು ತಿಳಿಸಿದ್ದವು.

"ಏಷ್ಯಾ ಕಪ್ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ" ಎಂದು ಪಿಸಿಬಿ ವಕ್ತಾರ ಅಮೀರ್ ಮಿರ್ ಮಂಗಳವಾರ ತಡರಾತ್ರಿ ಬಿಡುಗಡೆಯಾದ ಹೇಳಿಕೆಯಲ್ಲಿ ತಿಳಿಸಿದ್ದರು. ಇಸ್ಲಾಮಾಬಾದ್‌ನಲ್ಲಿ ಮಂಡಳಿ ಮತ್ತು ಸರ್ಕಾರದ ಅಧಿಕಾರಿಗಳ ಸಭೆ ನಡೆದಿದೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ."ಈ ನಿಟ್ಟಿನಲ್ಲಿ ಸಮಾಲೋಚನೆಗಳು ನಡೆಯುತ್ತಿದ್ದು, ನಾಳೆಯೊಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ವಕ್ತಾರರು ಹೇಳಿದರು. "ಪಾಕಿಸ್ತಾನದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು." ಎಂದಿದ್ದರು.

ಪಿಸಿಬಿ ಪತ್ರವ್ಯವಹಾರದ ನಂತರ, ಆತಿಥೇಯ ಯುಎಇ ವಿರುದ್ಧದ ತನ್ನ ಅಂತಿಮ ಗ್ರೂಪ್ 'ಎ' ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತನ್ನ ಪಂದ್ಯಪೂರ್ವ ಪತ್ರಿಕಾಗೋಷ್ಠಿಯನ್ನು ನಡೆಸದಿರಲು ಕೂಡ ನಿರ್ಧರಿಸಿತ್ತು. ಹಾಗಿದ್ದರೂ, ಪಾಕಿಸ್ತಾನ ತಂಡವು ಪಂದ್ಯದ ಮುನ್ನಾದಿನ ಅಭ್ಯಾಸ ಅವಧಿಯಲ್ಲಿ ಕಾಣಿಸಿಕೊಂಡಿತ್ತು.

2001ರಲ್ಲೂ ನಡೆದಿತ್ತು ಇಂಥದ್ದೇ ಪ್ರಕರಣ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂಡಗಳು ಪಂದ್ಯದ ಅಧಿಕಾರಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಕ್ರಿಕ್‌ಇನ್ಫೋ ವರದಿಯ ಪ್ರಕಾರ, 2001 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತವು ಪಂದ್ಯದ ರೆಫರಿ ಮೈಕ್ ಡೆನ್ನಿಸ್ ಅವರನ್ನು ತೆಗೆದುಹಾಕಲು ಪ್ರಯತ್ನಿಸಿತು. ಭಾರತ ಮತ್ತು ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮಂಡಳಿಗಳು ಡೆನ್ನಿಸ್ ಅವರನ್ನು ತೆಗೆದುಹಾಕಲು ಒಪ್ಪಿಕೊಂಡಿದ್ದವು. ಆದರೆ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ.