ಶುಭಮನ್ ಗಿಲ್ (ಜರ್ಸಿ 77) ಭಾರತದ ನಾಯಕನಾಗಿ ಆಯ್ಕೆಯಾದಾಗ, 13 ವರ್ಷಗಳ ಹಿಂದಿನ ರೋಹಿತ್ ಶರ್ಮಾ (ಜರ್ಸಿ 45) ಅವರ ಟ್ವೀಟ್ ವೈರಲ್ ಆಯಿತು. ಈ ಲೇಖನವು ಈ ವೈರಲ್ ಪೋಸ್ಟ್ನ ಸತ್ಯಾಸತ್ಯತೆ ತಿಳಿಯೋಣ ಬನ್ನಿ
ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಶುಭಮನ್ ಗಿಲ್ ಆಯ್ಕೆಯಾದ ಬೆನ್ನಲ್ಲೇ 13 ವರ್ಷಗಳ ಹಿಂದೆ ರೋಹಿತ್ ಶರ್ಮಾ ಮಾಡಿದ ಭವಿಷ್ಯವಾಣಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ. 2012ರ ಸೆಪ್ಟೆಂಬರ್ 14 ರಂದು ರೋಹಿತ್ ಶರ್ಮಾ ಟ್ವಿಟರ್ನಲ್ಲಿ(ಈಗ ಎಕ್ಸ್) ಪೋಸ್ಟ್ನಲ್ಲಿ 'ಒಂದು ಯುಗದ ಅಂತ್ಯ (45), ಹೊಸ ಯುಗದ ಆರಂಭ (77)' ಎಂದು ಬರೆದುಕೊಂಡಿದ್ದರು.
ರೋಹಿತ್ ಶರ್ಮಾ ಪೋಸ್ಟ್ ಅಸಲಿಯತ್ತೇನು?
ರೋಹಿತ್ ಶರ್ಮಾ ಅವರ ಜರ್ಸಿ ಸಂಖ್ಯೆ 45. ಹೊಸ ನಾಯಕನಾಗಿ ಆಯ್ಕೆಯಾದ ಶುಭಮನ್ ಗಿಲ್ ಅವರ ಜರ್ಸಿ ಸಂಖ್ಯೆ 77. ಇದನ್ನೇ ಅಭಿಮಾನಿಗಳು ಶುಭ್ಮನ್ ಗಿಲ್ ಬಗ್ಗೆ ರೋಹಿತ್ ಶರ್ಮಾ ಮಾಡಿದ ಭವಿಷ್ಯವಾಣಿ ಎಂದು ಅರ್ಥೈಸಿಕೊಂಡರು. ಆದರೆ ಸತ್ಯಾಂಶ ಬೇರೆಯೇ ಇದೆ. ವೃತ್ತಿಜೀವನದ ಆರಂಭದಲ್ಲಿ ರೋಹಿತ್ 45ನೇ ನಂಬರ್ ಜರ್ಸಿ ಧರಿಸುತ್ತಿದ್ದರು. ನಂತರ 77ನೇ ನಂಬರ್ಗೆ ಬದಲಾಗಿದ್ದರು. ಈ ಸಮಯದಲ್ಲಿಯೇ ರೋಹಿತ್ ಶರ್ಮಾ 'ಹೊಸ ಯುಗದ ಆರಂಭ' ಎಂದು ಎಕ್ಸ್ ಪೋಸ್ಟ್ ಮಾಡಿದ್ದರು. ಇದಾದ ನಂತರ ರೋಹಿತ್ ಶರ್ಮಾ ಮತ್ತೆ 45ನೇ ನಂಬರ್ಗೆ ಮರಳಿದ್ದರು. ಆದರೆ ಗಿಲ್ ಅವರನ್ನು ಭಾರತದ ಏಕದಿನ ನಾಯಕನನ್ನಾಗಿ ಮಾಡಿದಾಗ, ಅಭಿಮಾನಿಗಳು ರೋಹಿತ್ ಅವರ ಹಳೆಯ ಪೋಸ್ಟ್ ಅನ್ನು ಮತ್ತೆ ವೈರಲ್ ಮಾಡಿದರು.

ಆಸ್ಟ್ರೇಲಿಯಾ ಪ್ರವಾಸದ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ತೆಗೆದುಹಾಕಿ, ಆಯ್ಕೆಗಾರರು ಶುಭ್ಮನ್ ಗಿಲ್ ಅವರಿಗೆ ಕ್ಯಾಪ್ಟನ್ ಪಟ್ಟ ಕಟ್ಟಿದ್ದಾರೆ. ಇದಾದ ನಂತರವೇ ಗಿಲ್ ಅವರ ಬೆಳವಣಿಗೆಯ ಬಗ್ಗೆ ರೋಹಿತ್ ಈ ಹಿಂದೆ ಭವಿಷ್ಯ ನುಡಿದಿದ್ದರು ಎಂಬಂತೆ ಎಕ್ಸ್ ಪೋಸ್ಟ್ ಮತ್ತೆ ವೈರಲ್ ಆಗಿತ್ತು. ರೋಹಿತ್ ಭವಿಷ್ಯ ನುಡಿದಾಗ ಗಿಲ್ಗೆ ಕೇವಲ 13 ವರ್ಷ ವಯಸ್ಸಾಗಿತ್ತು, ಹಾಗಾಗಿ ಇಷ್ಟು ಬೇಗ ಗಿಲ್ ಬಗ್ಗೆ ರೋಹಿತ್ ಭವಿಷ್ಯ ನುಡಿಯಲು ಸಾಧ್ಯವಿಲ್ಲ ಎನ್ನುವುದನ್ನು ಯಾರೂ ಬೇಕಾದರೂ ಊಹಿಸಬಹುದು.
ಈ ಹಿಂದೆ ಟೆಸ್ಟ್ನಿಂದ ರೋಹಿತ್ ಶರ್ಮಾ ನಿವೃತ್ತರಾದ ನಂತರ, ಇಂಗ್ಲೆಂಡ್ ಪ್ರವಾಸದಲ್ಲಿ ಗಿಲ್ ಭಾರತದ ಟೆಸ್ಟ್ ನಾಯಕರಾದರು. ಟಿ20 ತಂಡದ ಉಪನಾಯಕರಾಗಿಯೂ ಗಿಲ್ ಅವರನ್ನು ಆಯ್ಕೆ ಮಾಡಲಾಗಿತ್ತು. 2027ರ ಏಕದಿನ ವಿಶ್ವಕಪ್ನಲ್ಲಿ ಆಡಲು ಬಯಸುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಅವಕಾಶ ಸಿಗುತ್ತದೆಯೇ ಎಂಬುದು ಈಗ ಅಭಿಮಾನಿಗಳ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಏಕದಿನ ವಿಶ್ವಕಪ್ಗೆ ಇನ್ನೂ ಎರಡು ವರ್ಷ ಬಾಕಿ ಇರುವುದರಿಂದ, ಆಸ್ಟ್ರೇಲಿಯಾ ಪ್ರವಾಸದಲ್ಲಿನ ಪ್ರದರ್ಶನವೇ ಇಬ್ಬರ ಭವಿಷ್ಯವನ್ನು ನಿರ್ಧರಿಸಲಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಶುಭಮನ್ ಗಿಲ್ ಜೊತೆ ರೋಹಿತ್ ಶರ್ಮಾ ಓಪನರ್ ಆಗಲಿದ್ದಾರೆ ಎಂದು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸ್ಪಷ್ಟಪಡಿಸಿದ್ದರೂ, ಮೂರನೇ ಓಪನರ್ ಆಗಿ ಯಶಸ್ವಿ ಜೈಸ್ವಾಲ್ ಕೂಡ ತಂಡದಲ್ಲಿರುವುದು ರೋಹಿತ್ ಶರ್ಮಾ ಮೇಲಿನ ಒತ್ತಡವನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಭಾರತ ತಂಡವು ಈ ತಿಂಗಳಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಆಸೀಸ್ ಎದುರು ಅಕ್ಟೋಬರ್ 19, 23 ಹಾಗೂ 25ರಂದು ಕ್ರಮವಾಗಿ ಪರ್ತ್, ಅಡಿಲೇಡ್ ಹಾಗೂ ಸಿಡ್ನಿಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.
ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಗೆ ಭಾರತ ತಂಡ ಹೀಗಿದೆ:
ಶುಭ್ಮನ್ ಗಿಲ್(ನಾಯಕ), ಶ್ರೇಯಸ್ ಅಯ್ಯರ್(ಉಪನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್(ವಿಕೆಟ್ ಕೀಪರ್,), ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಪ್ರಸಿದ್ದ್ ಕೃಷ್ಣ.


