ರೋಹಿತ್ ಶರ್ಮಾ ಇಂಗ್ಲೆಂಡ್ ಟೆಸ್ಟ್ ಸರಣಿಯ ನಾಯಕತ್ವ ಕಳೆದುಕೊಂಡಿದ್ದಾರೆ. ಕಳಪೆ ಫಾರ್ಮ್ ಕಾರಣ ಆಯ್ಕೆದಾರರು ಈ ನಿರ್ಧಾರ ಕೈಗೊಂಡಿದ್ದಾರೆ. ಏಕದಿನ ತಂಡದಲ್ಲಿ ರೋಹಿತ್ ಮುಂದುವರಿಯಲಿದ್ದಾರೆ. ಹೊಸ ನಾಯಕನ ಆಯ್ಕೆ ಬಾಕಿ ಇದೆ. ಬಿಸಿಸಿಐ ಆಯ್ಕೆದಾರರ ನಿರ್ಧಾರಕ್ಕೆ ಬೆಂಬಲ ಸೂಚಿಸಿದೆ. ಟೆಸ್ಟ್‌ನಲ್ಲಿ ರೋಹಿತ್ ಸ್ಥಾನ ಚರ್ಚಾಸ್ಪದವಾಗಿದೆ.

ಮುಂಬೈ (ಮೇ.7): ಮುಂದಿನ ತಿಂಗಳು ಆರಂಭವಾಗಲಿರುವ ಇಂಗ್ಲೆಂಡ್ ಪ್ರವಾಸಕ್ಕೆ ರೋಹಿತ್ ಶರ್ಮಾ ಅವರನ್ನು ಭಾರತದ ಟೆಸ್ಟ್ ತಂಡದ ನಾಯಕ ಸ್ಥಾನದಿಂದ ವಜಾ ಮಾಡಲು ರಾಷ್ಟ್ರೀಯ ಆಯ್ಕೆದಾರರು ನಿರ್ಧರಿಸಿದ್ದಾರೆ. ರೋಹಿತ್ ಸ್ಪೆಷಲಿಸ್ಟ್ ಓಪನಿಂಗ್ ಬ್ಯಾಟ್ಸ್‌ಮನ್ ಆಗಿ ಇಂಗ್ಲೆಂಡ್‌ಗೆ ಪ್ರಯಾಣಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಭಾರತೀಯ ಕ್ರಿಕೆಟ್ ಮಂಡಳಿಯು ಆಯ್ಕೆದಾರರ ನಿರ್ಧಾರವನ್ನು ಬೆಂಬಲಿಸುತ್ತದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದು ಪರಿವರ್ತನೆಯ ಅಗತ್ಯದಿಂದ ಅಥವಾ ವಯಸ್ಸಾದ ಆಟಗಾರರನ್ನು ಹೊರಗಿಡುವ ಉದ್ದೇಶದಿಂದ ಮಾಡಲಾದ ಕ್ರಮವಲ್ಲ, ಆದರೆ ರೋಹಿತ್ ಅವರ ಪ್ರದರ್ಶನ ಮತ್ತು ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಅವರ ಫಾರ್ಮ್ ಅನ್ನು ಆಧರಿಸಿದೆ ಎಂದು ತಿಳಿಸಲಾಗಿದೆ. 38 ವರ್ಷದ ರೋಹಿತ್ ಟೀಮ್‌ ಇಂಡಿಯಾದ ಏಕದಿನ ತಂಡದ ಭಾಗವಾಗಿ ಇರುತ್ತಾರೆ ಎಂದು ತಿಳಿಸಲಾಗಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಯಶಸ್ಸಿನ ನಂತರ ಇಂಗ್ಲೆಂಡ್ ಪ್ರವಾಸದಲ್ಲಿ ರೋಹಿತ್ ಅವರೇ ತಂಡದ ನಾಯಕರಾಗಿ ಇರಲಿ ಎಂದು ಬಿಸಿಸಿಐ ಯೋಚಿಸಿತ್ತು. ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಅವರ ಪಾಡ್‌ಕ್ಯಾಸ್ಟ್ 'ಬಿಯಾಂಡ್ 23' ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ರೋಹಿತ್ ಕೂಡ, ಇಂಗ್ಲೆಂಡ್‌ನಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರ ನೇತೃತ್ವವನ್ನು ವಹಿಸಲು ಉತ್ಸುಕನಾಗಿರುವುದಾಗಿ ತಿಳಿಸಿದ್ದರು. 

ಈ ನಡುವೆ ಭಾರತೀಯ ಟೆಸ್ಟ್ ತಂಡದಲ್ಲಿ ರೋಹಿತ್ ಅವರ ಭವಿಷ್ಯದ ಬಗ್ಗೆ ಆಯ್ಕೆದಾರರು ಕಳೆದ ತಿಂಗಳು ಸರಣಿ ಚರ್ಚೆಗಳನ್ನು ನಡೆಸಿದ್ದು, ಬಿಸಿಸಿಐ ಜೊತೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳುವ ಮೊದಲು ಮಂಗಳವಾರ ಮುಂಬೈನಲ್ಲಿ ಈ ವಿಷಯದ ಬಗ್ಗೆ ಚರ್ಚಿಸಿದರು.

"ಆಯ್ಕೆದಾರರ ಚಿಂತನೆ ಸ್ಪಷ್ಟವಾಗಿದೆ. ಇಂಗ್ಲೆಂಡ್ ಪ್ರವಾಸಕ್ಕೆ ಅವರು ಹೊಸ ನಾಯಕನನ್ನು ಬಯಸುತ್ತಾರೆ ಮತ್ತು ರೋಹಿತ್ ನಾಯಕನಾಗಿ ಈಗ ತಂಡಕ್ಕೆ ಹೊಂದಿಕೆ ಆಗೋದಿಲ್ಲ. ಅದರಲ್ಲೂ ಅವರ ಟೆಸ್ಟ್‌ ಕ್ರಿಕೆಟ್‌ ಫಾರ್ಮ್‌ ಕಳಪೆಯಾಗಿದೆ ಎಂದು ಆಯ್ಕೆ ಸಮಿತಿ ಹೇಳಿದ. ಮುಂದಿನ ಟೆಸ್ಟ್‌ ಸರಣಿಗೆ ಯುವ ಆಟಗಾರನಿಗೆ ನೇತೃತ್ವ ವಹಿಸಲು ಆಯ್ಕೆ ಮಂಡಳಿ ಬಯಸಿದೆ ಎಂದು ಬಿಸಿಸಿಐನ ಮೂಲವೊಂದು ತಿಳಿಸಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಆದ ಹಿನ್ನಡೆ ಮತ್ತೊಮ್ಮೆ ಆಗಬಾರದು ಎಂದು ಬಯಿಸಿದೆ. ಆ ಸರಣಿಯಲ್ಲಿ ರೋಹಿತ್ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 6.20 ಸರಾಸರಿ ಗಳಿಸಿ ವಿಫಲರಾಗಿದ್ದರು ಮತ್ತು ಅಂತಿಮ ಟೆಸ್ಟ್‌ಗೆ ಸ್ವತಃ ಅವರು ಹೊರಗುಳಿದಿದ್ದರು. ಅದಕ್ಕೂ ಮೊದಲು, ಕಳೆದ ವರ್ಷಾಂತ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ, ಅವರು ಮೂರು ಟೆಸ್ಟ್‌ಗಳಲ್ಲಿ ಕೇವಲ 15.16 ಸರಾಸರಿಯನ್ನು ಹೊಂದಿದ್ದರು.

ಟೆಸ್ಟ್‌ ಕ್ರಿಕಟ್‌ನ ಫಾರ್ಮ್‌ ಅನ್ನು ಪರಿಗಣಿಸಿ ರೋಹಿತ್‌ ಶರ್ಮ ಅವರನ್ನು ನಾಯಕರನ್ನಾಗಿ ಮುಂದುವರಿಸಲು ಆಯ್ಕೆ ಸಮಿತಿ ಹಿಂಜರಿದಿದೆ. ಒಬ್ಬ ತಜ್ಞ ಬ್ಯಾಟ್ಸ್‌ಮನ್ ಆಗಿ, ಪ್ರದರ್ಶನಗಳು ಉತ್ತಮವಾಗಿಲ್ಲದಿದ್ದರೆ ಅವರನ್ನು ಆಡುವ XI ನಿಂದ ಕೈಬಿಡಬಹುದು, ಆದರೆ ಅವರು ನಾಯಕನಾಗಿದ್ದರೆ ಹೀಗೆ ಮಾಡುವುದು ಕಷ್ಟವಾಗುತ್ತದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಅನುಭವಿಸಿದಂತೆ ಇದು ತಂಡದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ.

ಇತ್ತೀಚಿನ ಕಳಪೆ ಫಾರ್ಮ್: ರೋಹಿತ್ ಕಳೆದ ವರ್ಷ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿಲ್ಲ, ಏಕೆಂದರೆ ಅವರ ಎರಡನೇ ಮಗುವಿನ ಜನನದ ಕಾರಣ ಹೊರಗುಳಿದಿದ್ದರು. ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಅನ್ನು ತೆರೆದರು. ಎರಡನೇ ಟೆಸ್ಟ್‌ಗೆ ಅವರು ಮರಳಿದಾಗ, ರೋಹಿತ್ ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಳಗಿಳಿದಿದ್ದರು. ನಂತರ ಮೆಲ್ಬೋರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಆರಂಭಿಕ ಆಟಗಾರರಾಗಿ ಮರಳಿದರು, ನಂತರ ಸಿಡ್ನಿಯಲ್ಲಿ ನಡೆದ ಪಂದ್ಯದಿಂದ ಹೊರಗುಳಿದರು.