ಲಂಡನ್ನಲ್ಲಿ ವಿರಾಟ್ ಕೊಹ್ಲಿ ಅವರ ಬಿಳಿ ಗಡ್ಡ-ಮೀಸೆಯ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿರುವ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಲಂಡನ್: ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರ ಹೊಸ ಲುಕ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ಲಂಡನ್ನಲ್ಲಿ ಸ್ನೇಹಿತ ಶಶ್ ಕಿರಣ್ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಿಳಿ ಗಡ್ಡ ಮತ್ತು ಮೀಸೆಯಿಂದಾಗಿ ಅವರು ತುಂಬಾ ವಯಸ್ಸಾದವರಂತೆ ಕಾಣುತ್ತಿದ್ದಾರೆ. 36ರ ಹರೆಯದ ಕೊಹ್ಲಿ, ತಮ್ಮ ಅದ್ಭುತ ಫಿಟ್ನೆಸ್ ಹೊರತಾಗಿಯೂ ವಯಸ್ಸಾದವರಂತೆ ಕಾಣುತ್ತಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.

ಕಳೆದ ತಿಂಗಳು ಯುವರಾಜ್ ಸಿಂಗ್ ಕ್ಯಾನ್ಸರ್ ಫೌಂಡೇಶನ್ ಕಾರ್ಯಕ್ರಮದಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದರು. ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಸಮಯದಲ್ಲಿ ಲಂಡನ್ನಲ್ಲಿದ್ದರೂ, ಯಾವುದೇ ಪಂದ್ಯ ವೀಕ್ಷಿಸಲು ಅವರು ಹೋಗಿರಲಿಲ್ಲ. ಆದರೆ, ಭಾರತದ ಏಕದಿನ ನಾಯಕ ರೋಹಿತ್ ಶರ್ಮಾ ಅಂತಿಮ ಟೆಸ್ಟ್ ಪಂದ್ಯ ವೀಕ್ಷಿಸಲು ಓವಲ್‌ಗೆ ಹೋಗಿದ್ದರು.

ಯುವಿಕ್ಯಾನ್ ಕಾರ್ಯಕ್ರಮದಲ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಕ್ಕೆ ಕಾರಣ ತಿಳಿಸಿದ ಕೊಹ್ಲಿ, ನಾಲ್ಕು ದಿನಕ್ಕೊಮ್ಮೆ ಗಡ್ಡಕ್ಕೆ ಬಣ್ಣ ಹಚ್ಚಬೇಕಾದರೆ ನಿವೃತ್ತಿ ಸಮಯ ಬಂದಿದೆ ಎಂದು ತಮಾಷೆ ಮಾಡಿದ್ದರು. ವಿರಾಟ್ ಕೊಹ್ಲಿ ಫೋಟೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

Scroll to load tweet…

Scroll to load tweet…

ಕೆಲವು ಅಭಿಮಾನಿಗಳು ಕೊಹ್ಲಿ ಶೀಘ್ರದಲ್ಲೇ ಏಕದಿನ ಕ್ರಿಕೆಟ್‌ನಿಂದಲೂ ನಿವೃತ್ತಿ ಹೊಂದಬಹುದು ಎಂದು ಊಹಿಸಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಮತ್ತು ಕುಟುಂಬದೊಂದಿಗೆ ಲಂಡನ್ನಲ್ಲಿ ವಾಸಿಸುತ್ತಿರುವ ಕೊಹ್ಲಿ, ಈಗ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಗುರಿ ಹೊಂದಿರುವ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇನ್ನೂ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿಲ್ಲ.

37ರ ಹೊಸ್ತಿಲಲ್ಲಿರುವ ಟೀಂ ಇಂಡಿಯಾ ರನ್ ಮಷೀನ್, ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಕೆಲವೇ ದಿನಗಳ ಮುನ್ನ ಅಂದರೆ ಮೇ 12ರಂದು ದಿಢೀರ್ ಎನ್ನುವಂತೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಯಾಕೆಂದರೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಮುಗಿಸಿ ತವರಿಗೆ ವಾಪಾಸ್ಸಾಗಿದ್ದ ಕೊಹ್ಲಿ, ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಡೆಲ್ಲಿ ಪರ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಇನ್ನು ಇದಕ್ಕೂ ಮೊದಲು 2024ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಮಾದರಿಗೂ ವಿದಾಯ ಘೋಷಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಫೈನಲ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದ ಕೊಹ್ಲಿ, ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

ವಿರಾಟ್ ಕೊಹ್ಲಿ ಈ ತಿಂಗಳು ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ನಿರೀಕ್ಷೆಯಲ್ಲಿದ್ದರು. ಆದರೆ ಬಾಂಗ್ಲಾದೇಶ ಎದುರಿನ ಏಕದಿನ ಸರಣಿ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದ್ದರಿಂದ ಕೊಹ್ಲಿ, ಟೀಂ ಇಂಡಿಯಾ ಪರ ಕಣಕ್ಕಿಳಿಯುವುದು ಮತ್ತಷ್ಟು ತಡವಾಗಲಿದೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಭಾರತ ತಂಡದ ಪರ ಕಾಣಿಸಿಕೊಂಡಿದ್ದರು. ಇದೀಗ ವಿರಾಟ್ ಕೊಹ್ಲಿ ಅಕ್ಟೋಬರ್‌ನಲ್ಲಿ ಭಾರತ ಪರ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಸೀಮಿತ ಓವರ್‌ಗಳ ಸರಣಿಯನ್ನಾಡಲು ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇದೇ ಸರಣಿಯಲ್ಲಿ ರೋಹಿತ್ ಶರ್ಮಾ ಕೂಡಾ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.