19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿನಲ್ಲಿ, 'ಡ್ಯಾಡ್ಸ್‌ ಆರ್ಮಿ' ಎಂದು ಟೀಕೆಗೆ ಗುರಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್, ಇಬ್ಬರು ಯುವ ಆಟಗಾರರಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಮೇಲೆ 28.40 ಕೋಟಿ ರೂ. ಖರ್ಚು ಮಾಡಿ ಅಚ್ಚರಿ ಮೂಡಿಸಿದೆ. 

ಅಬುಧಾಬಿ: 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಮತ್ತೊಮ್ಮೆ ರಿಸ್ಕ್ ತೆಗೆದುಕೊಂಡಿದೆ. ಹರಾಜಿನಲ್ಲಿ 30+ ವಯಸ್ಸಿನ ಆಟಗಾರರನ್ನು ಖರೀದಿಸುವ ಮೂಲಕ ಡ್ಯಾಡ್ಸ್‌ ಆರ್ಮಿ ಎಂದು ಟೀಕೆಗೆ ಗುರಿಯಾಗಿರುವ ಸಿಎಸ್‌ಕೆ, ಇದೀಗ ಮಿನಿ ಹರಾಜಿನಲ್ಲಿ ಇಬ್ಬರು ಯುವ ಆಟಗಾರರಿಗೆ ಹೆಚ್ಚಿನ ಪರ್ಸ್ ಖರ್ಚು ಮಾಡುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ.

ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಇದೀಗ ಉತ್ತರ ಪ್ರದೇಶ ಮೂಲದ ಯುವ ಆಲ್ರೌಂಡರ್ ಪ್ರಶಾಂತ್ ವೀರ್ ಹಾಗೂ ರಾಜಸ್ಥಾನ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಕಾರ್ತಿಕ್ ಶರ್ಮಾ ಅವರನ್ನು ತಲಾ 14.20 ಕೋಟಿ ರುಪಾಯಿಗೆ ಖರೀದಿಸುವಲ್ಲಿ ಯಶಸ್ವಿಯಾಗಿದೆ. 20 ವರ್ಷದ ಪ್ರಶಾಂತ್ ವೀರ್ ಹಾಗೂ 19 ವರ್ಷದ ಕಾರ್ತಿಕ್ ಶರ್ಮಾ ಈ ಇಬ್ಬರಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 28.40 ಕೋಟಿ ರುಪಾಯಿ ಖರ್ಚು ಮಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

30 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಪ್ರಶಾಂತ್ ವೀರ್ ಅವರನ್ನು ಖರೀದಿಸಲು ಮೊದಲು ಲಖನೌ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಳು ಒಲವು ತೋರಿದವು. ಇದಾದ ಬಳಿಕ ಅಮೇಥಿ ಮೂಲದ ಆಟಗಾರನನ್ನು ಖರೀದಿಸಲು ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪೈಪೋಟಿ ಏರ್ಪಟ್ಟಿತು. ಇದರ ಮಧ್ಯೆ ಅಚ್ಚರಿಯ ರೀತಿಯಲ್ಲಿ ಪ್ರಶಾಂತ್‌ ವೀರ್‌ಗೆ ಬಿಡ್ ಮಾಡಿತು. ಆದರೆ ಕೊನೆಯವರೆಗೂ ಹಠ ಹಿಡಿದಂತೆ ಬಿಡ್ ಮಾಡಿದ ಸಿಎಸ್‌ಕೆ 14.20 ಕೋಟಿ ರುಪಾಯಿಗೆ ಈ ಆಲ್ರೌಂಡರ್ ಖರೀದಿಸುವಲ್ಲಿ ಯಶಸ್ವಿಯಾಯಿತು.

Scroll to load tweet…

ಪ್ರಶಾಂತ್ ವೀರ್ ಭವಿಷ್ಯದ ಜಡ್ಡು?

ಉತ್ತರಪ್ರದೇಶದ ಅಮೇಥಿ ಮೂಲದ 20 ವರ್ಷದ ಆಲ್ರೌಂಡರ್ ಪ್ರಶಾಂತ್ ವೀರ್ ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಭಾರತದ ಭವಿಷ್ಯದ ತಾರೆ ಎನಿಸಿಕೊಂಡಿದ್ದರು. ಪ್ರಶಾಂತ್ ವೀರ್ ಓರ್ವ ಎಡಗೈ ಸ್ಪಿನ್ನರ್ ಆಗಿದ್ದು, ಎಡಗೈ ಬ್ಯಾಟಿಂಗ್ ಮಾಡುತ್ತಾರೆ. ಪ್ರಶಾಂತ್ ವೀರ್ ವಯೋಮಿತಿ ಟೂರ್ನಿಗಳಲ್ಲಿ, ಯುಪಿ ಟಿ20 ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಐಪಿಎಲ್ ಫ್ರಾಂಚೈಸಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

Scroll to load tweet…

ದೇಶಿ ಕ್ರಿಕೆಟ್‌ನಲ್ಲಿ ಅಬ್ಬರಿಸಿರುವ ಪ್ರಶಾಂತ್ ವೀರ್

2025ರ ಯುಪಿ ಟಿ20 ಲೀಗ್‌ನಲ್ಲಿ ಪ್ರಶಾಂತ್ ವೀರ್ 155ರ ಸ್ಟ್ರೈಕ್‌ರೇಟ್‌ನಲ್ಲಿ 3 ಅರ್ಧಶತಕ ಸಹಿತ 320 ರನ್ ಬಾರಿಸಿದ್ದರು. ಇನ್ನು 2025-26ನೇ ಸಾಲಿನ ಅಂಡರ್ 23 ಸ್ಟೇಟ್ ಎ ಟೂರ್ನಿಯಲ್ಲಿ ಪ್ರಶಾಂತ್ ಕೇವಲ 7 ಪಂದ್ಯಗಳನ್ನಾಡಿ 94ರ ಬ್ಯಾಟಿಂಗ್ ಸರಾಸರಿಯಲ್ಲಿ 19 ಸಿಕ್ಸರ್ ಹಾಗೂ 32 ಬೌಂಡರಿ ಸಹಿತ 376 ರನ್ ಸಿಡಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ 18 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಆಲ್ರೌಂಡ್ ಪ್ರದರ್ಶನಕ್ಕಾಗಿ ಪ್ರಶಾಂತ್ ವೀರ್ ಸರಣಿಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದರು.

19ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನ ರಾಯಲ್ಸ್‌ಗೆ ಟ್ರೇಡ್‌ ಮಾಡಿತ್ತು. ಇದೀಗ ಜಡೇಜಾಗೆ ಬದಲಿ ಆಟಗಾರ ರೂಪದಲ್ಲಿ ಪ್ರಶಾಂತ್ ವೀರ್ ಅವರನ್ನು ಸಿಎಸ್‌ಕೆ ಫ್ರಾಂಚೈಸಿಯು ಖರೀದಿಸಿದೆ ಎನ್ನಲಾಗುತ್ತಿದೆ.