ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ದಾಖಲೆ ಬರೆದ ಭಾರತ, ಸೌತ್ ಆಫ್ರಿಕಾಗೆ 299 ರನ್ ಟಾರ್ಗೆಟ್, ಸ್ಫೋಟಕ ಬ್ಯಾಟಿಂಗ್ ಮೂಲಕ ಶೆಫಾಲಿ ವರ್ಮಾ ದಾಖಲೆ ಬರೆದರೆ, ಇತ್ತ ಭಾರತ 298 ರನ್ ಸಿಡಿಸುವಲ್ಲಿ ಯಶಸ್ವಿಯಾಗಿದೆ.
ಮುಂಬೈ (ನ.02) ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಮಹಿಳಾ ವಿಶ್ವಕಪ್ ಫೈನಲ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮಹತ್ವದ ಪಂದ್ಯದಲ್ಲಿ ಭಾರತ ದಿಟ್ಟ ಹೋರಾಟ ನೀಡಿದೆ. ಶೆಫಾಲಿ ವರ್ಮಾ ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದಾರೆ. ಪ್ರತಿಕಾ ರಾವಲ್ ಗಾಯದ ಸಮಸ್ಯೆಯಿಂದ ತಂಡ ಸೇರಿಕೊಂಡ ಶೆಫಾಲಿ ವರ್ಮಾ ತಮ್ಮ ಕಳಪೆ ಪ್ರದರ್ಶನಕ್ಕೆ ಅಂತ್ಯ ಹಾಡಿ ಮಹತ್ವದ ಪಂದ್ಯದಲ್ಲೇ ಗುಡುಗಿದ್ದಾರೆ. ದೀಪ್ತಿ ಶರ್ಮಾ ಹಾಗೂ ರಿಚಾ ಘೋಷ್ ಅಬ್ಬರದಿಂದ ಭಾರತ 7 ವಿಕೆಟ್ ನಷ್ಟಕ್ಕೆ 298 ರನ್ ಸಿಡಿಸಿತು. ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ 2ನೇ ಗರಿಷ್ಠ ಟೋಟಲ್ ಸಿಡಿಸಿದ ದಾಖಲೆ ಬರೆದಿದೆ. 2022ರ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್ ವಿರುದ್ದ 356 ರನ್ ಸಿಡಿಸಿ ಮೊದಲ ಸ್ಥಾನದಲ್ಲಿದೆ.
ಮಳೆಯಿಂದ ಪಂದ್ಯ ವಿಳಂಬ
ಮಳೆಯಿಂದ ಫೈನಲ್ ಪಂದ್ಯ ವಿಳಂಬವಾಗಿ ಆರಂಭಗೊಂಡಿತ್ತು. ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡ ಭಾರತಕ್ಕೆ ಬ್ಯಾಟಿಂಗ್ ನೀಡಿತ್ತು. ಶೆಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ಉತ್ತಮ ಆರಂಭ ನೀಡಿದ್ದರು. ಸ್ಮೃತಿ ಮಂಧನಾ 45 ರನ್ ಸಿಡಿಸಿ ಔಟಾದರು. ಇತ್ತ ಆರಂಭಿಕ ಜೊತೆ ಸೆಂಚುರಿ ಜೊತೆಯಾಟ ಆಡಿತ್ತು. ಈ ಪೈಕಿ ಶೆಫಾಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಸೌತ್ ಆಫ್ರಿಕಾ ತಂಡದ ತಲೆನೋವು ಹೆಚ್ಚಿಸಿದ್ದರು. ಶೆಫಾಲಿ 78 ಎಸೆತದಲ್ಲಿ 87 ರನ್ ಸಿಡಿಸಿದರು. 21ರ ಹರೆಯದ ಶೆಫಾಲಿ ವರ್ಮಾ ಹಾಫ್ ಸೆಂಚುರಿ ಸಿಡಿಸಿದರು. ಈ ಮೂಲಕ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆರಂಭಿಕರ ಬಳಿಕ ಕುಸಿತ ಕಂಡ ಭಾರತ
ಸ್ಮೃತಿ ಮಂಧನಾ ಹಾಗೂ ಶೆಫಾಲಿ ವರ್ಮಾ ವಿಕೆಟ್ ಪತನದ ಬಳಿಕ ಭಾರತ ರನ್ ಗತಿಯಲ್ಲಿ ನಿಧಾನಗೊಂಡಿತು. ಸೆಮಿಫೈನಲ್ ಪಂದ್ಯದಲ್ಲಿ ಅಬ್ಬರಿಸಿದ ಜೇಮಿಯ ರೋಡಿಗ್ರೆಸ್ ಹಾಗೂ ನಾಯಕ ಹರ್ಮನ್‌ಪ್ರೀತ್ ಕೌರ್ ನಿರೀಕ್ಷಿತ ಜೊತೆಯಾಟ ನೀಡಲು ಸಾಧ್ಯವಾಗಲಿಲ್ಲ. ರೋಡಿಗ್ರೆಸ್ 24 ರನ್ ಸಿಡಿಸಿ ಔಟಾದರೆ, ಕೌರ್ 20 ರನ್ ಸಿಡಿಸಿ ನಿರ್ಗಮಿಸಿದರು.
ದೀಪ್ತಿ ಶರ್ಮಾ ಹಾಫ್ ಸೆಂಚುರಿ
ಒಂದೆಡೆ ವಿಕೆಟ್ ಪತನವಾಗುತ್ತಿದ್ದರೆ, ದೀಪ್ತಿ ಶರ್ಮಾ ಏಕಾಂಗಿ ಹೋರಾಟ ನೀಡಿದರು. ಅಮನ್‌ಜೋತ್ ಕೌರ್ 12 ರನ್ ಸಿಡಿಸಿ ಔಟಾದರು. ರಿಚಾ ಘೋಷ್ ಜೊತೆ ಸೇರಿದ ದೀಪ್ತಿ ಅಬ್ಬರಿಸಿದ್ದರು. ರಿಚಾ ಹಾಗೂ ದೀಪ್ತಿ ಅಬ್ಬರದಿಂದ ಭಾರತ ಮಹಿಳಾ ತಂಡ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ರಿಚಾ 24 ಎಸೆತದಲ್ಲಿ 34 ರನ್ ಸಿಡಿಸಿ ಔಟಾದರು. ದೀಪ್ತಿ 58 ರನ್ ಸಿಡಿಸಿದರು. ಈ ಮೂಲಕ ಭಾರತ 7 ವಿಕೆಟ್ ನಷ್ಟಕ್ಕೆ 298 ರನ್ ಸಿಡಿಸಿತು.


