ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಕ್ರಿಸ್ಮಸ್ ದಿನದಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿವೇಗವಾಗಿ ಬಂದ ಬೈಕ್ ಎತ್ತಿನ ಬಂಡಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಸವಾರರಾದ ಶಿವಕುಮಾರ್ ಮತ್ತು ರವಿಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಜಯನಗರ (ಡಿ.25): ಕ್ರಿಸ್ಮಸ್ ಹಬ್ಬದ ದಿನವೇ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಬೈಕ್ ಎತ್ತಿನ ಬಂಡಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ದುರ್ಮರಣಕ್ಕೀಡಾದ ಆಘಾತಕಾರಿ ಘಟನೆ ನಡೆದಿದೆ.
ಬೈಕ್ ಸವಾರರು ಸ್ಥಳದಲ್ಲೇ ಸಾವು
ಹರಪನಹಳ್ಳಿ ತಾಲೂಕಿನ ಸಾಸಿವೆಹಳ್ಳಿ ಮತ್ತು ಹುಣಸಿಹಳ್ಳಿ ಗ್ರಾಮಗಳ ನಡುವೆ ಈ ಅಪಘಾತ ಸಂಭವಿಸಿದೆ. ಶಿವಕುಮಾರ್ (37) ಮತ್ತು ರವಿಕುಮಾರ್ (41) ಎಂಬುವವರೇ ಮೃತ ದುರ್ದೈವಿಗಳು. ರಸ್ತೆಯಲ್ಲಿ ಸಾಗುತ್ತಿದ್ದ ಎತ್ತಿನ ಬಂಡಿಗೆ ಬೈಕ್ ಸವಾರರು ಹಿಂಬದಿಯಿಂದ ಬಂದು ಜೋರಾಗಿ ಗುದ್ದಿದ್ದಾರೆ.
ತಲೆಗೆ ಬಿದ್ದ ಬಲವಾದ ಏಟು
ಡಿಕ್ಕಿಯ ರಭಸಕ್ಕೆ ಬೈಕ್ ಸವಾರರಿಬ್ಬರು ರಸ್ತೆಗೆ ಬಿದ್ದಿದ್ದಾರೆ. ಇಬ್ಬರಿಗೂ ತಲೆ ಮತ್ತು ಮೈಕೈಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದೆ. ತಲೆಗೆ ತೀವ್ರ ರಕ್ತಸ್ರಾವವಾದ ಕಾರಣ ಸವಾರರಿಬ್ಬರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅತಿ ವೇಗವೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ಭೇಟಿ
ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಹರಪನಹಳ್ಳಿ ಡಿವೈಎಸ್ಪಿ ಡಾ ಸಂತೋಷ್ ಚೌವ್ಹಾಣ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆಯು ಚಿಗಟೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


