ಮದುವೆಗೂ ಮುನ್ನ ಗರ್ಭಿಣಿಯಾಗಿರುವ ವಿಷಯ ಗಂಡನ ಮನೆಯವರಿಗೆ ತಿಳಿಯುತ್ತಲೇ ಮಹಿಳೆಯೇ ಟಾರ್ಚರ್​ ಕೊಟ್ಟು ಪತಿಯ ಸಾವಿಗೆ ಕಾರಣಳಾಗಿದ್ದಾಳೆ! ಮಹಿಳಾ ಪರ ಕಾನೂನುಗಳ ದುರ್ಬಳಕೆಯ ಆರೋಪದ ಬೆನ್ನಲ್ಲೇ, ಈ ಘಟನೆ ನಡೆದಿದೆ... 

ಮಹಿಳಾ ಪರ ಕಾನೂನುಗಳು ಭಾರಿ ದುರುಪಯೋಗ ಆಗುತ್ತಿವೆ, ಪುರುಷರ ಜೀವನವನ್ನೇ ಈ ಕಾನೂನು ಛಿದ್ರಗೊಳಿಸಿದೆ ಎಂಬ ಮಾತು ಬಹಳ ಹಿಂದಿನಿಂದಲೂ ಕೇಳಿಬರುತ್ತಿದೆ. ಮಹಿಳೆಯರ ಜೀವನ ಸುರಕ್ಷವಾಗಿರಬೇಕು, ಪತಿಯ ಮನೆಯಲ್ಲಿಯೂ ಆಕೆ ನ್ಯಾಯಯುತವಾಗಿ ಬದುಕಬೇಕು, ಗಂಡನ ಮನೆಯಲ್ಲಿ ಚಿತ್ರಹಿಂಸೆ ಅನುಭವಿಸಬಾರದು ಎಂಬೆಲ್ಲಾ ಸದುದ್ದೇಶದಿಂದ ಮಾಡಿರುವ ಈ ಕಾನೂನನ್ನು ಕೆಲವು ಮಹಿಳೆಯರು ಸ್ವಹಿತಾಸಕ್ತಿಗೆ ಬಳಸಿಕೊಂಡು ಅತ್ತೆ ಮನೆಯವರಿಗೆ ಚಿತ್ರಹಿಂಸೆ ಕೊಡುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಗಂಡ ಮತ್ತು ಆತನ ಮನೆಯವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ತನ್ನದೇ ತಪ್ಪಿದ್ದರೂ ಅತ್ತೆಮನೆಯವರ ಬದುಕನ್ನೇ ನರಕ ಮಾಡುತ್ತಿರುವ ಘಟನೆಗಳೂ ನಡೆಯುತ್ತಿವೆ. ಇವುಗಳಿಗೆ ಸಾಕ್ಷಿಯಾಗಿ ಇಲ್ಲೊಬ್ಬ ಮಹಿಳೆ, ತನ್ನ ಪತಿಯ ಪ್ರಾಣವನ್ನೇ ಬಲಿ ತೆಗೆದುಕೊಂಡಿರೋ ಘಟನೆ ನಡೆದಿದೆ!

ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ, ಬಬಿನಾ ಪೊಲೀಸ್ ಠಾಣೆ ಪ್ರದೇಶದ ಲಹರ್ ಠಾಕೂರ್ಪುರ ಗ್ರಾಮದ ನಿವಾಸಿ 28 ವರ್ಷದ ಬ್ರಿಜೇಂದ್ರ ರಾಯ್ಕರ್, ಮದುವೆಯಾದ ಕೇವಲ ಮೂರು ತಿಂಗಳ ನಂತರ ವಿಷ ಸೇವಿಸಿ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ರಿಜೇಂದ್ರ ಅವರನ್ನು ಅವರ ಪತ್ನಿ ಮತ್ತು ಅತ್ತೆ ಆತ್ಮಹತ್ಯೆಗೆ ಪ್ರೇರೇಪಿಸಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಆಗಿದ್ದೇನೆಂದರೆ, ಬ್ರಿಜೇಂದ್ರ ಫೆಬ್ರವರಿ 18, 2025 ರಂದು ಲಲಿತಪುರದ ಹುಡುಗಿಯನ್ನು ವಿವಾಹವಾದರು. ಮದುವೆಯ ನಂತರ ಬ್ರಿಜೇಂದ್ರ ತುಂಬಾ ಸಂತೋಷವಾಗಿದ್ದರು, ಆದರೆ ಅವರ ಕುಟುಂಬದ ಪ್ರಕಾರ, ಅವರ ಪತ್ನಿ ಈ ಸಂಬಂಧದಿಂದ ಸಂತೋಷವಾಗಿರಲಿಲ್ಲ. ಕೆಲವು ವಾರಗಳಲ್ಲಿ, ಮನೆಯ ವಾತಾವರಣ ಹದಗೆಡಲು ಪ್ರಾರಂಭಿಸಿತು.

ವಿವಾಹಿತ ನಂತರ ಸೊಸೆ ತನ್ನ ತಾಯಿಯ ಮನೆಯಲ್ಲಿ ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆ ಮತ್ತು ಮದುವೆಯ ಸಮಯದಲ್ಲಿ ಅವಳು ಗರ್ಭಿಣಿಯಾಗಿದ್ದಳು ಎಂದು ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ. ಹುಡುಗಿ ತನ್ನ ಪ್ರಿಯಕರನ ಮಗುವನ್ನು ತನ್ನ ಗರ್ಭದಲ್ಲಿ ಹೊತ್ತಿದ್ದಳು, ಆದ್ದರಿಂದ ಅವಳಿಗೆ ಮದುವೆಯಾಗುವುದು ಇಷ್ಟವಿರಲಿಲ್ಲ ಎನ್ನಲಾಗಿದೆ. ಆದರೂ ಮನೆಯವರ ಬಲವಂತಕ್ಕೆ ಮದುವೆಯಾಗಿದ್ದಾಳೆ. ಆಕೆ ಮದುವೆಗೂ ಮೊದಲೇ ಗರ್ಭಿಣಿಯಾಗಿರುವ ವಿಷಯ ಗಂಡ ಮತ್ತು ಅತ್ತೆ ಮನೆಯವರಿಗೆ ತಿಳಿಯುತ್ತಲೇ ಈ ಬಗ್ಗೆ ಕೇಳಲು ಆರಂಭಿಸಿದ್ದಾರೆ. ತನ್ನ ಸತ್ಯ ಹೊರಬರುತ್ತಲೇ ಅತ್ತೆಯ ಮನೆಯವರಿಗೆ ಕಿರುಕುಳ ಕೊಡಲು ಆರಂಭಿಸಿರುವುದಾಗಿ ಹೇಳಲಾಗುತ್ತಿದೆ. ಆಕೆಗೆ ಬೇರೊಬ್ಬನ ಜೊತೆ ಸಂಬಂಧ ಇರುವುದು ಮಹಿಳೆಯ ತಾಯಿಗೆ ಗೊತ್ತಿದ್ದರಿಂದ, ಈ ವಿಷಯ ಆಕೆಯ ಅತ್ತೆಯ ಮನೆಯವರಿಗೆ ತಿಳಿಯುತ್ತಲೇ ಗಲಾಟೆ ಶುರು ಮಾಡಿದ್ದಾರೆ.

ಈ ವಿಷಯವನ್ನು ಕೆದಕಿದರೆ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ಗಂಡ ಮತ್ತು ಅತ್ತೆಯ ವಿರುದ್ಧ ದೂರು ದಾಖಲು ಮಾಡಿ ಅವರನ್ನು ಜೈಲಿಗೆ ಅಟ್ಟುವುದಾಗಿ ಸೊಸೆ ಮತ್ತು ಆಕೆಯ ತಾಯಿ ಪದೇ ಪದೇ ಬೆದರಿಕೆ ಒಡ್ಡುತ್ತಿದ್ದರು. ಈ ವಿಷಯವಾಗಿ ಸದಾ ಮನೆಯಲ್ಲಿ ಜಗಳವಾಗುತ್ತಿತ್ತು. ಪ್ರತಿಬಾರಿಯೂ ಸೊಸೆ ಕಾನೂನಿನ ಬೆಂಬಲ ಪಡೆದು, ಮನೆಯವರಿಗೆಲ್ಲಾ ಬೆದರಿಕೆ ಹಾಕುತ್ತಿದ್ದಳು. ಈ ಜಗಳದಿಂದ ನೊಂದು ಹಾಗೂ ಆಕೆಯೇನಾದರೂ ಕೇಸ್​ ಹಾಕಿದರೆ ಎನ್ನುವ ಭಯದಲ್ಲಿ ಬ್ರಿಜೇಂದ್ರ ಅವರು, ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾರೆ! ಘಟನೆಯ ನಂತರ ಸ್ಥಳಕ್ಕೆ ತಲುಪಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಸ್ತುತ, ಈ ಪ್ರಕರಣದಲ್ಲಿ ಪೊಲೀಸ್ ತನಿಖೆ ನಡೆಯುತ್ತಿದ್ದು, ಆರೋಪಗಳನ್ನು ದೃಢೀಕರಿಸಲು ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ.