ದಾವಣಗೆರೆಯ ಮಲ್ಲಶೆಟ್ಟಿಹಳ್ಳಿ ಬಳಿ ಎರಡು ರಾಟ್‌ವೀಲರ್ ನಾಯಿಗಳ ಭೀಕರ ದಾಳಿಗೆ ತುತ್ತಾದ ಅನಿತಾ ಎಂಬ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ದುರಂತದಿಂದಾಗಿ ಅವರ ಮೂವರು ಮಕ್ಕಳು ಅನಾಥರಾಗಿದ್ದು, ನಿರ್ಲಕ್ಷ್ಯ ತೋರಿದ ನಾಯಿ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.

ದಾವಣಗೆರೆ (ಡಿ.6): ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ದಾವಣಗೆರೆಯ ಮಲ್ಲಶೆಟ್ಟಿಹಳ್ಳಿ ನಿವಾಸಿ ಅನಿತಾ (38) ಎಂಬ ಮಹಿಳೆ ಆಸ್ಪತ್ರೆಗೆ ತಲುಪುವ ಮೊದಲೇ ಉಸಿರು ಚೆಲ್ಲಿದ ಆಘಾತಕಾರಿ ಘಟನೆ ನಡೆದಿದೆ.

ರಾಟ್‌ವೀಲರ್ ಡೆಡ್ಲಿ ಅಟ್ಯಾಕ್:

ಗುರುವಾರ ರಾತ್ರಿ ಹೊನ್ನೂರು ಗೊಲ್ಲರಹಟ್ಟಿ ಬಳಿ ಅನಿತಾ ಮೇಲೆ ಏಕಾಏಕಿ ಎರಡು ರಾಟ್‌ವೀಲರ್ ನಾಯಿಗಳು ದಾಳಿ ಮಾಡಿ ಎರಡು ತಾಸುಗಳ ಕಾಲ ಮೈಮೇಲೆಲ್ಲ ಕಚ್ಚಿ ಎಳೆದಾಡಿದ್ದವು. ರಕ್ತಸಿಕ್ತವಾಗಿ ಬಿದ್ದ ಮಹಿಳೆಯನ್ನ ತಕ್ಷಣ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ, ಬೆಂಗಳೂರಿಗೆ ಕರೆದೊಯ್ಯುವ ಮಾರ್ಗಮಧ್ಯೆ ತುಮಕೂರು ಜಿಲ್ಲೆಯ ಶಿರಾ ಬಳಿ ಅನಿತಾ ಕೊನೆಯುಸಿರೆಳೆದಿದ್ದಾರೆ.

ದೇಹದ ಯಾವ ಭಾಗವನ್ನು ಬಿಡದೇ ಕಚ್ಚಿರುವ ನಾಯಿಗಳು:

ಮೃತ ಅನಿತಾ ಅವರ ಸಹೋದರ ಹಾಗೂ ಸಂಬಂಧಿಕರು ನಾಯಿ ದಾಳಿಯ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ನಾಯಿಗಳು ಅನಿತಾ ಅವರನ್ನು ಎಳೆದಾಡಿ ಕಚ್ಚಿವೆ. ದೇಹದ ಯಾವ ಭಾಗವನ್ನೂ ಬಿಡದೇ ನಾಯಿಗಳು ಕಚ್ಚಿ ಹಾಕಿವೆ. ಈ ಕ್ರೂರಿ ನಾಯಿಗಳನ್ನು ಜನವಸತಿ ಪ್ರದೇಶದ ಬಳಿ ಬಿಟ್ಟು ಹೋದವರಲ್ಲಿ ಮನುಷ್ಯತ್ವವೇ ಇಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಐದು ವರ್ಷದಲ್ಲೇ ತಂದೆ-ತಾಯಿ ಸಾವು: ಮೂವರು ಮಕ್ಕಳು ಅನಾಥ

ಈ ದುರಂತದಿಂದಾಗಿ ಮಲ್ಲಶೆಟ್ಟಿಹಳ್ಳಿ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಐದು ವರ್ಷಗಳ ಹಿಂದೆಯೇ ಅನಿತಾ ಅವರ ಪತಿ ಹಾಲೇಶ್ ಅವರು ಮೃತಪಟ್ಟಿದ್ದರು. ಇದೀಗ ತಾಯಿ ಅನಿತಾ ಕೂಡ ನಾಯಿ ದಾಳಿಗೆ ಬಲಿಯಾಗಿರುವುದರಿಂದ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಗು ಸೇರಿದಂತೆ ಮೂವರು ಮಕ್ಕಳು ಅನಾಥರಾಗಿದ್ದಾರೆ. ಶಿರಾದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಮಲ್ಲಶೆಟ್ಟಿಹಳ್ಳಿಯ ನಿವಾಸಕ್ಕೆ ತರಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ನಾಯಿ ಮಾಲೀಕರಿಗೆ ಕಠಿಣ ಶಿಕ್ಷೆಗೆ ಆಗ್ರಹ;

ಮೃತ ಅನಿತಾ ಅವರ ಕುಟುಂಬಸ್ಥರು ಮತ್ತು ಸಂಬಂಧಿಕರು ನಾಯಿ ಮಾಲೀಕರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದ ಮೂವರು ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕಾಗಿ ಸರ್ಕಾರ ಮತ್ತು ಸಂಬಂಧಪಟ್ಟವರು ಸಹಾಯ ಮಾಡಬೇಕು ಎಂದು ಕಣ್ಣೀರಿನ ಮನವಿ ಮಾಡಿದ್ದಾರೆ. ಹಳ್ಳಿಗಳ ಬಳಿ ಇಂತಹ ಕ್ರೂರಿ ನಾಯಿಗಳನ್ನು ನಿರ್ಲಕ್ಷ್ಯದಿಂದ ಬಿಟ್ಟು ಹೋದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಕೂಡ ಆಗ್ರಹಿಸಿದ್ದಾರೆ.