ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಾಟರಂಗಿ ಗ್ರಾಮದಲ್ಲಿ, ದೇವರಿಗೆ ಬಿಟ್ಟಿದ್ದ ಗೋವೊಂದರ ಕಾಲನ್ನು ಕೊಡಲಿಯಿಂದ ಕಡಿದು ಅಮಾನವೀಯವಾಗಿ ಹಿಂಸಿಸಲಾಗಿದೆ. ಗ್ರಾಮಸ್ಥರು ದೈವದ ರೂಪವೆಂದು ಪೂಜಿಸುತ್ತಿದ್ದ ಈ ಗೋವಿಗೆ ಹಿಂಸೆ ನೀಡಿದ ಜಮೀನಿನ ಮಾಲೀಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕೊಪ್ಪಳ (ನ. 24): ಕೊಪ್ಪಳ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ದೇವರಿಗೆ ಬಿಟ್ಟಿದ್ದ ಗೋವೊಂದರ ಕಾಲನ್ನು ಪಾಪಿಗಳು ಕೊಡಲಿಯಿಂದ ಕಡಿದು ವಿಕೃತಿ ಮೆರೆದಿದ್ದಾರೆ. ಈ ಘಟನೆ ಯಲಬುರ್ಗಾ ತಾಲೂಕಿನ ಮಾಟರಂಗಿ ಗ್ರಾಮದಲ್ಲಿ ನಡೆದಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೈವದ ರೂಪವೆಂದು ಪೂಜಿಸುತ್ತಿದ್ದ ಗ್ರಾಮಸ್ಥರು:
ಈ ಗೋವನ್ನು ಮಾಟರಂಗಿ ಗ್ರಾಮದ ಮಾರುತೇಶ್ವರ ದೇವರಿಗೆ ಹತ್ತು ವರ್ಷಗಳ ಹಿಂದೆ ಬಿಡಲಾಗಿತ್ತು. ಗ್ರಾಮಸ್ಥರೆಲ್ಲರೂ ಇದನ್ನು ದೈವದ ರೂಪದಲ್ಲಿ ನಿತ್ಯ ಪೂಜಿಸುತ್ತಿದ್ದರು. ಆದರೆ ನಿನ್ನೆ (ನವೆಂಬರ್ 23) ಈ ಗೋವು ಮಾಟರಂಗಿ ಗ್ರಾಮದ ಪಕ್ಕದಲ್ಲಿರುವ ಲಿಂಗನಬಂಡಿ ರಮೇಶ್ ಎನ್ನುವವರ ಜಮೀನಿನಲ್ಲಿ ಮೇಯಲು ಹೋಗಿತ್ತು. ಈ ಸಂದರ್ಭದಲ್ಲಿ ಕೊಡಲಿಯಿಂದ ಗೋವಿನ ಕಾಲನ್ನು ಕಡಿಯಲಾಗಿದೆ.
ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ:
ದೇವರಿಗೆ ಬಿಟ್ಟ ಗೋವಿನ ಕಾಲನ್ನು ಕಡಿದಿರುವ ಆರೋಪವನ್ನು ಜಮೀನಿನ ಮಾಲೀಕರಾದ ಲಿಂಗನಬಂಡಿ ರಮೇಶ್ ಅವರ ಮೇಲೆ ಗ್ರಾಮಸ್ಥರು ಹೊರಿಸಿದ್ದಾರೆ.
ದೇವರಿಗೆ ಬಿಟ್ಟ ಗೋವಿಗೆ ಈ ರೀತಿ ಕ್ರೂರವಾಗಿ ಹಿಂಸೆ ನೀಡಿರುವ ಘಟನೆಯನ್ನು ಗ್ರಾಮಸ್ಥರು ತೀವ್ರವಾಗಿ ಖಂಡಿಸಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


