ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿ ಅಕ್ರಮ ಗೋಮಾಂಸ ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 15 ಕೆಜಿ ಗೋಮಾಂಸ ವಶಪಡಿಸಿಕೊಳ್ಳಲಾಗಿದೆ. ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆದಿದೆ.

ಕೊಡಗು (ಜುಲೈ.26): ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಂಬೂರು ಎಸ್ಟೇಟ್‌ನಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉಲಾಲ್ ಬಿಲ್ (28) ಎಂದು ಗುರುತಿಸಲಾಗಿದೆ. ಮಾದಾಪುರ ಪೊಲೀಸ್ ಉಪಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು, ತೋಟದಲ್ಲಿ ಗೋಮಾಂಸ ಮಾರಾಟದ ಕುರಿತು ಖಚಿತ ಮಾಹಿತಿ ಪಡೆದು ಪೊಲೀಸರಿಗೆ ತಿಳಿಸಿದ್ದರು. ಈ ಮಾಹಿತಿಯನ್ನಾಧರಿಸಿ, ಮಾದಾಪುರ ಪೊಲೀಸರು ದಾಳಿ ನಡೆಸಿ 15 ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕೊಡಗಿನ ಭೂಕುಸಿತ, ತಡೆಗೋಡೆಗೆ 50 ಕೋಟಿ ರೂ. ಅನುದಾನ: ಸಚಿವ ಕೃಷ್ಣಬೈರೇಗೌಡ ಘೋಷಣೆ

ಕೊಡಗು ಜಿಲ್ಲೆಯಲ್ಲಿ ಗೋಹತ್ಯೆ ಮತ್ತು ಗೋಮಾಂಸ ಮಾರಾಟವನ್ನು ಕಾನೂನು ನಿಷೇಧಿಸಿದ್ದರೂ, ಇಂತಹ ಪ್ರಕರಣಗಳು ಪದೇಪದೇ ಕಂಡುಬರುತ್ತಿವೆ. ಈ ಘಟನೆಗೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಭೋಜೇಗೌಡ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದಾಗಿಯೇ ಇಂತಹ ಅಕ್ರಮ ಚಟುವಟಿಕೆಗಳು ಮರುಕಳಿಸುತ್ತಿವೆ. ಕಾನೂನಿನ ಕಟ್ಟುನಿಟ್ಟಾದ ಜಾರಿಯಾಗಬೇಕು ಎಂದು ಒತ್ತಾಯಿಸಿದರು.