ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನ ವಿರುದ್ಧ ಯುವತಿಯೊಬ್ಬಳು ಸಾಮೂಹಿಕ ಅತ್ಯಾ೧ಚಾರದ ದೂರು ನೀಡಿದ್ದಳು. ಆದರೆ, ಬಾಣಸವಾಡಿ ಪೊಲೀಸರ ತನಿಖೆಯಲ್ಲಿ ಇಬ್ಬರಿಗೂ ಮೊದಲೇ ಪರಿಚಯವಿದ್ದು, ಇದು ಒಪ್ಪಿಗೆಯ ಸಂಬಂಧವಾಗಿತ್ತು ಎಂಬುದು ಬಯಲಾಗಿದೆ. ಸದ್ಯ ಪೊಲೀಸರು ಯುವತಿಯ ಗೊಂದಲದ ಹೇಳಿಕೆ ಬಗ್ಗೆ ತನಿಖೆ..

ಬೆಂಗಳೂರು (ಡಿ.8): ನಗರದಲ್ಲಿ ಕ್ಯಾಬ್ ಚಾಲಕನ ವಿರುದ್ಧ ಯುವತಿಯೊಬ್ಬಳು ಅತ್ಯಾ೧ಚಾರ ಆರೋಪ ಮಾಡಿ ದೂರು ದಾಖಲಿಸಿದ್ದು, ಈ ಪ್ರಕರಣವು ತನಿಖೆಯ ಹಂತದಲ್ಲಿ ಮಹತ್ವದ ತಿರುವುಗಳನ್ನು ಪಡೆದುಕೊಂಡಿದೆ. ಸಂತ್ರಸ್ತ ಯುವತಿ ಆರಂಭದಲ್ಲಿ ಕ್ಯಾಬ್ ಚಾಲಕ ಮತ್ತು ಆತನ ಸ್ನೇಹಿತನ ವಿರುದ್ಧ ಸಾಮೂಹಿಕ ಅತ್ಯಾ೧ಚಾರ (ಗ್ಯಾಂಗ್ ರೇಪ್) ಎಸಗಿದ್ದಾರೆ ಎಂದು ದೂರಿದ್ದಳು. ಘಟನೆ ನಡೆದ ಹಲವು ದಿನಗಳ ಬಳಿಕ ಯುವತಿ ಮೊದಲು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೃತ್ಯ ನಡೆದ ಸ್ಥಳದ ವ್ಯಾಪ್ತಿಯ ಆಧಾರದ ಮೇಲೆ ಪ್ರಕರಣವನ್ನು ಬಾಣಸವಾಡಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ಬಾಣಸವಾಡಿ ಪೊಲೀಸರು ಆರೋಪಿತ ಕ್ಯಾಬ್ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ತನಿಖೆ ವೇಳೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್:

ಆದರೆ, ಪೊಲೀಸರ ತನಿಖೆ ಮುಂದುವರೆದಂತೆ ಪ್ರಕರಣದ ಸ್ವರೂಪ ಬದಲಾಗಿದೆ. ಯುವತಿಯ ಆರಂಭಿಕ 'ಗ್ಯಾಂಗ್ ರೇಪ್' ಹೇಳಿಕೆಯು ತನಿಖೆ ವೇಳೆ ಗೊಂದಲಮಯವಾಗಿರುವುದು ಕಂಡುಬಂದಿದೆ. ವಾಸ್ತವವಾಗಿ ಯಾವುದೇ ಗ್ಯಾಂಗ್ ರೇಪ್ ನಡೆದಿಲ್ಲ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಅಷ್ಟೇ ಅಲ್ಲದೆ, ಪೊಲೀಸರಿಗೆ ಯುವತಿ ಮತ್ತು ಆರೋಪಿಯ ನಡುವಿನ ವಾಟ್ಸಾಪ್ ಚಾಟ್ ಕೂಡ ಪತ್ತೆಯಾಗಿದ್ದು, ಇಬ್ಬರಿಗೂ ಮೊದಲೇ ಪರಸ್ಪರ ಪರಿಚಯವಿತ್ತು ಎಂಬುದು ದೃಢಪಟ್ಟಿದೆ. ಸದ್ಯ ಯುವತಿಯು ಪ್ರಕರಣದ ಬಗ್ಗೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದು, ಆಕೆ ಹಾಗೂ ಆರೋಪಿ ಇಬ್ಬರೂ ಕೇರಳ ಮೂಲದವರು ಎಂದು ತಿಳಿದುಬಂದಿದೆ.

ಒಪ್ಪಿಗೆಯಿಂದಲೇ ನಡೆದಿತ್ತು.!

ಆರೋಪಿ ಕೂಡ ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಲೈಂಗಿಕ ಕ್ರಿಯೆಯು ಇಬ್ಬರ ಒಪ್ಪಿಗೆಯಿಂದಲೇ ನಡೆದಿತ್ತು ಎಂದು ತಿಳಿಸಿದ್ದಾನೆ. ಯಾವುದೇ ಗ್ಯಾಂಗ್ ರೇಪ್ ಆಗಿಲ್ಲ ಎಂಬುದು ತನಿಖೆಯಿಂದ ಸ್ಪಷ್ಟವಾಗಿದ್ದರೂ, ಯುವತಿ ಏಕೆ ಈ ರೀತಿಯ ಗಂಭೀರ ಪ್ರಕರಣ ದಾಖಲಿಸಿದ್ದಾಳೆ ಎಂಬುದರ ಕುರಿತು ಬಾಣಸವಾಡಿ ಪೊಲೀಸರು ತೀವ್ರ ತನಿಖೆ ಮುಂದುವರೆಸಿದ್ದಾರೆ. ಸದ್ಯ ಪ್ರಕರಣದಲ್ಲಿ ಹೆಚ್ಚಿನ ಸ್ಪಷ್ಟತೆಗಾಗಿ ನ್ಯಾಯಾಲಯದ ಮುಂದೆ ಯುವತಿಯ 164 ಹೇಳಿಕೆಯನ್ನು ದಾಖಲಿಸಿಕೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.