ಚಾಮರಾಜಪೇಟೆಯಲ್ಲಿ ಕೇರ್‌ಟೇಕರ್ ಒಬ್ಬರು ₹1.57 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ಕದ್ದಿದ್ದಾರೆ. ಆರೋಪಿ ಉಮಾಳನ್ನು ಬಂಧಿಸಲಾಗಿದ್ದು, ₹60 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು (ಜೂನ್ 14): ಚಾಮರಾಜಪೇಟೆಯಲ್ಲಿ ಸಂಭವಿಸಿರುವ ದೊಡ್ಡ 1 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ 67 ಲಕ್ಷ ರೂ. ನಗದು ಹಣವನ್ನು ಕಳ್ಳತನ ಮಾಡಿರುವ ಪ್ರಕರಣ ಬೆಂಗಳೂರು ನಗರವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ಮನೆಗೆ ಕೇರ್ ಟೇಕರ್ ಆಗಿ ಕೆಲಸಕ್ಕೆ ಸೇರಿಸಿದ್ದ ಮಹಿಳೆಯೊಬ್ಬಳು ಸುಮಾರು ನಗದು ಮತ್ತು ಚಿನ್ನಾಭರಣ ಸೇರಿ ಒಟ್ಟು 1.57 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಕದ್ದುಕೊಂಡು ಹೋಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

ಆರೋಪಿತ ಮಹಿಳೆ ಉಮಾ ಬಂಧನ: ಚಾಮರಾಜಪೇಟೆ ಪೊಲೀಸರ ತಕ್ಷಣದ ಕಾರ್ಯಾಚರಣೆಯಿಂದ ಕೇರ್ ಟೇಕರ್ ಮಹಿಳೆ ಉಮಾ ಎಂಬಾಕೆಯನ್ನು ಬಂಧಿಸಿದ್ದಾರೆ. ಈಕೆ ಚಾಮರಾಜನಗರ ಜಿಲ್ಲೆಯ ಮೂಲದವಳಾಗಿದ್ದಾಳೆ. ಉಮಾ ಕಳೆದ ಮೂರು ತಿಂಗಳಿಂದ ನಗರ್ತಪೇಟೆಯೊಂದರ ಉದ್ಯಮಿ ಮನೆಗೆ ಕೆಲಸಕ್ಕೆ ಸೇರಿಕೊಂಡಿದ್ದಳು.

ಚಾಮರಾಜಪೇಟೆಯಲ್ಲಿ ಕೂಡು ಕುಟುಂಬದಲ್ಲಿ ವಾಸವಾಗಿದ್ದ ರಾಧ ಅವರು ನಗರ್ತಪೇಟೆಯಲಿ ಸ್ವಂತ ಸೆಕ್ಯೂರಿಟಿ ಎಜೆನ್ಸಿ ಹೊಂದಿದ್ದಾರೆ. ಸುಮಾರು 8 ತಿಂಗಳಿನಿಂದ ರಾಧಾ ಅವರ ಅಕ್ಕ ಸುಜಾತ ಹುಷಾರಿರಲಿಲ್ಲ. ಈಗ ಸುಜಾತ ಸಂಪೂರ್ಣವಾಗಿ ಬೆಡ್ ರಿಡೆನ್ ಆಗಿದ್ದರಿಂದ ಅವರನ್ನು ನೋಡಿಕೊಳ್ಳಲು ಸೆಕ್ಯೂರಿಟಿ ಏಜೆನ್ಸಿಯೊಂದರ ಮೂಲಕ ಉಮಾ ಅವರನ್ನು ಕೇರ್ ಟೇಕರ್ ಆಗಿ ನೇಮಕ ಮಾಡಿಕೊಂಡಿದ್ದಾರೆ. ಆದರೆ, ಉಮಾ ಅವರು ಕಳೆದ 3 ತಿಂಗಳಿಂದ ಚೆನ್ನಾಗಿ ಕೆಲಸ ಮಾಡಿ ನಂಬಿಕೆ ಗಳಿಸಿದ್ದಾಳೆ. ಆಗ ಮನೆಯವರ ಎಲ್ಲ ವ್ಯವಹಾರವನ್ನು ಗಮನಿಸಿದ್ದಾರೆ.

ಬೆಡ್ ರೀಡನ್ ಆಗಿರುವ ಸುಜಾತ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಸೈಟ್ ಒಂದನ್ನು ಮಾಡಿದ್ದ 67 ಲಕ್ಷ ರೂ. ನಗದು ಹಣವನ್ನು ಮನೆಯ ಬೀರುವಿನಲ್ಲಿ ಇಟ್ಟಿದ್ದರು. ಜೊತೆಗೆ 95 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕೂಡ ಮನೆಯಲ್ಲಿ ಇಟ್ಟುಕೊಂಡಿದ್ದರು. ಒಟ್ಟು 1.57 ಕೋಟಿ ರೂ. ಮೌಲ್ಯದ ವಸ್ತುಗಳು ಮನೆಯ ಬೀಡುವಿನಲ್ಲಿ ಇರುವುದನ್ನು ಗಮನಿಸಿದ ಕೇರ್ ಟೇಕರ್ ಉಮಾ ಅದೆಲ್ಲವನ್ನು ಸಂಚಿನಿಂದ ಕಳ್ಳತನ ಮಾಡುವುದಕ್ಕೆ ಹೊಂಚು ಹಾಕಿದ್ದಾಳೆ. ಒಂದು ದಿನ ಸುಜಾತಾ ಅವರು ಮನೆಯಲ್ಲಿ ಘಾಡ ನಿದ್ರೆಯಲ್ಲಿದ್ದಾಗ ಬೀರುವಿನಲ್ಲಿದ್ದ ಎಲ್ಲ 67 ಲಕ್ಷ ಹಣ, ಎಲ್ಲ ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದಾಳೆ.

ಮೂರ್ನಾಲ್ಕು ದಿನಗಳ ನಂತರ ಜೂ.9ರಂದು ಮನೆಯಲ್ಲಿ ಹಣ ಮತ್ತು ಚಿನ್ನಾಭರಣ ಇಲ್ಲದಿರುವುದು ತಿಳಿದು ಉಮಾಳನ್ನು ವಿಚಾರಣೆ ಮಾಡಿದ್ದಾರೆ. ಆಗ ತನಗೇನೂ ಗೊತ್ತಿಲ್ಲ ಎಂದು ಸಾಮಾನ್ಯದವರಂತೆ ಕೆಲಸ ಮಾಡಿಕೊಂಡು ಹೋಗಿದ್ದಾಳೆ. ಆಗ ಮನೆಯವರು ಸಿಸಿಟಿವಿ ಪರಿಶೀಲನೆ ಮಾಡಿದಾಗ ಕೇರ್ ಟೇಕರ್ ಉಮಾ ಜೂ.4ರಂದು ಕೆಲಸಕ್ಕೆ ಬರುವಾಗ ಖಾಲಿ ಕೈಯಲ್ಲಿ ಬಂದು ಹೋಗುವಾಗ ಬ್ಯಾಗ್ ಹಿಡಿದುಕೊಂಡು ಹೋಗುವುದನ್ನು ನೋಡಿದ್ದಾರೆ. ಕೂಡಲೇ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಎಂದಿನಂತೆ ಸಂಜೆ ಕೆಲಸಕ್ಕೆ ಬಂದ ಉಮಾಳನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆ. ಆಗ ತನ್ನ ಕಳ್ಳತನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಉಮಾ ತನ್ನ ಮಗಳ ಮನೆಗೆ ಹಣ ಹಾಗೂ ಚಿನ್ನಾಭರಣ ಬ್ಯಾಗ್ ಅನ್ನು ಬಚ್ಚಿಟ್ಟಿದ್ದಳು. ಪೊಲೀಸರು ಈಗಾಗಲೇ ಸುಮಾರು ರೂ. 60 ಲಕ್ಷ ಮೌಲ್ಯದ ವಸ್ತುಗಳನ್ನು ರಿಕವರಿ ಮಾಡಿದ್ದು, ಉಳಿದ ಹಣ ಮತ್ತು ಆಭರಣ ಎಲ್ಲಿ ಅಂತ ತಿಳಿದುಕೊಳ್ಳಲು ತನಿಖೆ ಮುಂದುವರಿದಿದೆ.

ಈ ಘಟನೆಯು ಮನೆಗೆ ಕೆಲಸದವರನ್ನು ಸೇರಿಸಿಕೊಳ್ಳುವ ಮೊದಲು ಅವರನ್ನು ಸಮರ್ಪಕವಾಗಿ ಪರಿಶೀಲಿಸಬೇಕು ಎಂಬ ಅಗತ್ಯತೆಯನ್ನು ಮನದ್ಟು ಮಾಡುತ್ತದೆ. ಇನ್ನು ಮನೆಗೆ ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ನಿಖರ ದಾಖಲೆಗಳಿಲ್ಲದೇ ಯಾರನ್ನಾದರೂ ಕೆಲಸಕ್ಕೆ ಸೇರಸಿಕೊಳ್ಳಬಾರದು. ಇನ್ನು ಈ ಪ್ರಕರಣದಲ್ಲಿ ಚಾಮರಾಜಪೇಟೆ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದು, ಭಾಗಶಃ ಹಣ-ಆಭರಣ ಮರಳಿ ಪಡೆದು ದೂರುದಾರರ ನಷ್ಟವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ.