ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಪ್ರೇಮಿಗಳ ವಿಚಾರವಾಗಿ ನಡೆದ ಜಗಳವು ಇಬ್ಬರ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಸ್ಥಳೀಯರಾದ ಮಂಜುನಾಥ್ ಮತ್ತು ಕಿರಣ್ ಎಂಬುವವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. 

ಶಿವಮೊಗ್ಗ(ಡಿ.12): ಪ್ರೇಮಿಗಳ ವಿಚಾರದಲ್ಲಿ ನಡೆದ ಜಗಳ ಇಬ್ಬರ ಭೀಕರ ಕೊಲೆಯಲ್ಲಿ ಅಂತ್ಯವಾದ ದುರಂತ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜೈ ಭೀಮ್ ನಗರದಲ್ಲಿ ನಡೆದಿದೆ. ಮಂಜುನಾಥ್ (64) ಮತ್ತು ಕಿರಣ್ (26) ಮೃತಪಟ್ಟ ದುರ್ದೈವಿಗಳು.

ಪ್ರೇಮಿಗಳ ವಿಚಾರವೇ ಜಗಳಕ್ಕೆ ಕಾರಣ

ಘಟನೆಗೆ ಮೂಲ ಕಾರಣ ಪ್ರೇಮಿಗಳ ನಡುವಿನ ವೈಯಕ್ತಿಕ ವಿಚಾರ. ಎರಡು ದಿನಗಳ ಹಿಂದೆ ನಂದೀಶ್ ಮತ್ತು ಸೃಷ್ಟಿ ಎಂಬ ಯುವಕ-ಯುವತಿ ಓಡಿ ಹೋಗಿದ್ದರು. ಇಂದು ಸಂಜೆ ಅವರು ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಈ ವೇಳೆ ಯುವತಿ ಸೃಷ್ಟಿ, ತಾನು ತನ್ನ ಪ್ರಿಯಕರ ನಂದೀಶ್‌ನೊಂದಿಗೆ ಹೋಗುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಳು.

ಪ್ರೇಮಿಗಳ ಠಾಣೆಗೆ ಬಂದ ವೇಳೆ ಮಾರಾಮಾರಿ

ಈ ಸಂದರ್ಭದಲ್ಲಿ ಯುವತಿ ಸೃಷ್ಟಿಯ ಸಹೋದರ ಹಾಗೂ ಆತನ ಸ್ನೇಹಿತರಾದ ಶಶಿ, ಸಂಡು, ಕೆಂಚ, ಸುರೇಶ್ ಸೇರಿದಂತೆ ಇತರರು ಸೇರಿ ತಕರಾರು ತೆಗೆದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಅದು ಮಾರಾಮಾರಿಯಾಗಿ ಪರಿವರ್ತನೆಯಾಗಿದೆ.

ಜಗಳ ಬಿಡಿಸಲು ಹೋದ ಇಬ್ಬರ ಸಾವು

ಗುಂಪುಗಳ ನಡುವೆ ನಡೆದ ಈ ಜಗಳವನ್ನು ಬಿಡಿಸಲು ಸ್ಥಳೀಯರಾದ ಮಂಜುನಾಥ್ (64) ಮತ್ತು ಕಿರಣ್ (26) ಅವರು ಮಧ್ಯಪ್ರವೇಶಿಸಿದ್ದಾರೆ. ದುಷ್ಕರ್ಮಿಗಳು ಜಗಳ ಬಿಡಿಸಲು ಬಂದ ಈ ಇಬ್ಬರಿಗೂ ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಮಂಜುನಾಥ್ ಮತ್ತು ಕಿರಣ್ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಈ ಘಟನೆಯ ನಂತರ ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಕೊಲೆಗೆ ಕಾರಣರಾದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ಪೊಲೀಸರ ತನಿಖೆ ಮುಂದುವರಿದಿದೆ.