ಬೆಂಗಳೂರಿನ ಯಶವಂತಪುರದಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ 32 ವರ್ಷದ ನರಸಿಂಹರಾಜು ಎಂಬ ಯುವಕನನ್ನು ನಡುರಸ್ತೆಯಲ್ಲಿ ಥಳಿಸಿ ಕೊಲೆ ಮಾಡಲಾಗಿದೆ. ಮಹಿಳೆಯ ಕುಟುಂಬಸ್ಥರು ಈ ಕೃತ್ಯ ಎಸಗಿದ್ದು, ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು (ನ.25): ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಯುವಕನೊಬ್ಬನಿಗೆ ನಡುರಸ್ತೆಯಲ್ಲಿ ಮನಬಂದಂತೆ ಥಳಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯಶವಂತಪುರದ ಮುತ್ಯಾಲಮ್ಮ ನಗರದಲ್ಲಿ ಘಟನೆ ನಡೆದಿದ್ದು, ಅಕ್ರಮ ಸಂಬಂಧದಲ್ಲಿ ಭಾಗಿಯಾಗಿದ್ದು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಹಿನ್ನಲೆಯಲ್ಲಿ ಥಳಿಸಿ ಕೊಲೆ ಮಾಡಿದ್ದಾರೆ. ಕಳೆದ ಶನಿವಾರ ಈ ಘಟನೆ ನಡೆದಿದೆ.
32 ವರ್ಷದ ನರಸಿಂಹರಾಜು ಕೊಲೆಯಾದ ಯುವಕ ಎನ್ನಲಾಗಿದೆ. ನರಸಿಂಹರಾಜುಗೆ ಮದುವೆಯಾಗಿದ್ದ ಮಹಿಳೆಯ ಜೊತೆ ಅಕ್ರಮ ಸಂಬಂಧ ಇತ್ತ. ಆ ಮಹಿಳೆಯೂ ಆಗಾಗ ನರಸಿಂಹರಾಜು ಮನೆಗೆ ಬರುತ್ತಿದ್ದರು. ಶನಿವಾರ ಆ ಮಹಿಳೆ ನರಸಿಂಹರಾಜು ಮನೆ ಬಳಿ ಬಂದಿದ್ದರು. ಇದನ್ನು ತಿಳಿದ ಮಹಿಳೆ ಮನೆಯವರು ನರಸಿಂಹರಾಜು ಮನೆಗೆ ಬಂದಿದ್ದಾರೆ.
ಮನೆಯಲ್ಲಿದ್ದ ನರಸಿಂಹರಾಜುನನ್ನು ಮನೆಯಿಂದ ಹೊರಗಡೆ ಎಳೆದುಕೊಂಡು ಬಂದಿದ್ದು, ರಸ್ತೆಯಲ್ಲಿ ನಾಲ್ಕೈದು ಜನರಿಂದ ಮನಸೋ ಇಚ್ಚೆ ಹಲ್ಲೆ ಮಾಡಲಾಗಿದೆ. ರಸ್ತೆಯುದ್ದಕ್ಕೂ ಮನಬಂದಂತೆ ಮಹಿಳೆಯ ಮನೆಯವರು ಹಲ್ಲೆ ಮಾಡಿದ್ದಾರೆ. ಈ ವೇಳೆ ಬಿಡಿಸಲು ಬಂದ ನರಸಿಂಹರಾಜು ತಾಯಿಯ ಮೇಲೂ ಹಲ್ಲೆ ಮಾಡಲಾಗಿದೆ.
ದೂರು ಕೊಟ್ಟರೂ ಇನ್ನೂ ಬಂಧನವಿಲ್ಲ
ಹಲ್ಲೆಯಿಂದಾಗಿ ನರಸಿಂಹರಾಜು ತೀವ್ರವಾಗಿ ಅಸ್ವಸ್ಥನಾಗಿದ್ದ. ಕೂಡಲೇ ನರಸಿಂಹರಾಜುನ ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆಗೆ ಸಾವನ್ನಪ್ಪಿರೋದಾಗಿ ವೈದ್ಯರು ತಿಳಿಸಿದ್ದರು. ತನ್ನ ಸಾವಿಗೆ ಮಹಿಳೆ ಹಾಗೂ ಕುಟುಂಬಸ್ಥರು ಕಾರಣ ಅಂತ ದೂರು ನೀಡಲಾಗಿದೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ ಅಂತ ಕುಟುಂಬಸ್ಥರ ಆರೋಪ ಮಾಡಿದ್ದಾರೆ.
ಹಲ್ಲೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನರಸಿಂಹರಾಜುನ ಕಳೆಗೆ ಬೀಳಿಸಿ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಮನೆಯಿಂದ ಕರೆದೊಯ್ಯುವ ಹಾಗೂ ಹಲ್ಲೆ ಮಾಡೋ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ.


