ಬೆಂಗಳೂರಿನ ನಿವಾಸಿಯೊಬ್ಬರು ವಾಟ್ಸ್​ಆ್ಯಪ್​ನಲ್ಲಿ ಬಂದ 'ಬಾರ್ಡರ್-2' ಸಿನಿಮಾದ ಉಚಿತ ಲಿಂಕ್ ಡೌನ್‌ಲೋಡ್ ಮಾಡಲು ಹೋಗಿ ಮೋಸ ಹೋಗಿದ್ದಾರೆ. ಎಪಿಕೆ ಫೈಲ್ ರೂಪದಲ್ಲಿದ್ದ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ, ಸೈಬರ್ ವಂಚಕರು ಅವರ ಬ್ಯಾಂಕ್ ಖಾತೆಯಿಂದ 56 ಸಾವಿರ ರೂಪಾಯಿಗಳನ್ನು ಕದ್ದಿದ್ದಾರೆ.

ಈಗಂತೂ ಸಿನಿಮಾದವರಿಗೆ ಪೈರಸಿ ಕಾಟ ತಪ್ಪಿದ್ದಲ್ಲ. ಎಷ್ಟೇ ಗೋಪ್ಯವಾಗಿ ಸಿನಿಮಾ ಇಟ್ಟುಕೊಂಡರೂ, ಅದು ರಿಲೀಸ್​ ಆದ ಕೆಲವೇ ದಿನಗಳಲ್ಲಿ, ಕೆಲವೊಮ್ಮೆ ಮಾರನೆಯ ದಿನವೇ ಅದರ ಪೈರಸಿ ಕಾಪಿ ಬಿಡುಗಡೆಯಾಗುವುದು ಉಂಟು. ಸೋಷಿಯಲ್​​ ಮೀಡಿಯಾಗಳಲ್ಲಿ ಅದು ವೈರಲ್​ ಆಗುವುದು ಉಂಟು. ವಾಟ್ಸ್​ಆ್ಯಪ್​ಗಳಲ್ಲಿ ಯಾವುದೋ ಸಿನಿಮಾ ಪುಕ್ಕಟೆ ಸಿಕ್ಕಿಬಟ್ಟರೆ, ಸ್ವರ್ಗವೇ ಸಿಕ್ಕಷ್ಟು ಖುಷಿ ಹಲವರಿಗೆ. ಅದರಲ್ಲಿಯೂ ಹಿಟ್​ ಚಿತ್ರಗಳು, ಕಾಂಟ್ರವರ್ಸಿಯಾಗಿರುವ ಸಿನಿಮಾಗಳು ಉಚಿತವಾಗಿ ಸಿಕ್ಕರೆ ಬಿಡುವವರು ಯಾರು? ಸುಲಭದಲ್ಲಿ ಮನೆಯಲ್ಲಿಯೇ ಕುಳಿತು ಎಂಜಾಯ್​ ಮಾಡಬಹುದು ಎಂದುಕೊಂಡು, ಉಚಿತವಾಗಿ ಸಿನಿಮಾ ಯಾವಾಗ ಸಿಗುತ್ತೆ ಎಂದು ಕಾದುಕುಳಿತುಕೊಳ್ಳುವವರು ಹಲವರು ಇದ್ದಾರೆ.

ಬ್ಯಾಂಕ್​ ಖಾತೆ ಖಾಲಿ

ಆದರೆ, ಇದೀಗ ಬೆಂಗಳೂರಿನ ನಿವಾಸಿಯೊಬ್ಬ, ಇದೇ ರೀತಿ ಮಾಡಿ ಬ್ಯಾಂಕ್​ ಖಾತೆಯನ್ನು ಖಾಲಿ ಮಾಡಿಕೊಂಡಿದ್ದಾರೆ! ಉಚಿತವಾಗಿ ವಾಟ್ಸ್​ಆ್ಯಪ್​ಗೆ ಬಂದಿರುವ ಸಿನಿಮಾ ಲಿಂಕ್​ ಓಪನ್​ ಮಾಡುತ್ತಿದ್ದಂತೆಯೇ ಬ್ಯಾಂಕ್​ನಲ್ಲಿ ಇಟ್ಟಿದ್ದ 56 ಸಾವಿರ ರೂಪಾಯಿ ಖಾಲಿಯಾಗಿದೆ! ಬಾರ್ಡರ್-2 ಚಿತ್ರದ ಲಿಂಕ್ ಡೌನ್‌ಲೋಡ್ ಮಾಡುವಾಗ ಈ ಘಟನೆ ಸಂಭವಿಸಿದೆ. ಡೌನ್​ಲೋಡ್​ ಮಾಡುವುದನ್ನೇ ಕಾಯುತ್ತಿದ್ದ ಸೈಬರ್​ ಕ್ರಿಮಿನಲ್ಸ್​ ಬ್ಯಾಂಕ್​ನಲ್ಲಿ ಇಟ್ಟಿದ್ದ ದುಡ್ಡನ್ನು ಲಪಟಾಯಿಸಿದ್ದಾರೆ. ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್​ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ಬಾರ್ಡರ್​- 2 ಸಿನಿಮಾ

ಅಷ್ಟಕ್ಕೂ ಆಗಿದ್ದೇನೆಂದರೆ, ಸೂಪರ್​ಹಿಟ್​ ಬಾರ್ಡರ್​- 2 ಸಿನಿಮಾ ಉಚಿತವಾಗಿ ಡೌನ್​ಲೋಡ್​ ಮಾಡಿಕೊಳ್ಳಲು ಬಾಲಕೃಷ್ಣ ಎನ್ನುವ ಗುತ್ತಿಗೆದಾರರು ಟ್ರೈ ಮಾಡುತ್ತಿದ್ದರು. ಆದರೆ, ಸೈಬರ್​ ವಂಚಕರು ಇಂಥವರನ್ನೇ ಹೊಂಚು ಹಾಕುತ್ತಿರುತ್ತಾರೆ ಎನ್ನುವ ಮಾಹಿತಿ ಬಹುತೇಕ ಮಂದಿಯಂತೆ ಇವರಿಗೂ ತಿಳಿದಿರಲಿಲ್ಲ. ಈ ಬಗ್ಗೆ ಪೊಲೀಸರು ಇದಾಗಲೇ ಸಾಕಷ್ಟು ಬಾರಿ ಎಚ್ಚರಿಕೆಯನ್ನು ಕೊಡುತ್ತಲೇ ಇರುತ್ತಾರೆ. ನೀವು ಸರ್ಚ್​ ಮಾಡುವ ಪ್ರತಿಯೊಂದು ನಿಮ್ಮ ಖಾಸಗಿ ಆಗಿರುವುದಿಲ್ಲ. ಬದಲಿಗೆ ಗೂಗಲ್​ಗೆ ಎಲ್ಲವೂ ಲಭ್ಯ ಇರುತ್ತದೆ. ಸೈಬರ್​ ವಂಚಕರು ಕೂಡ ಇದನ್ನು ಸುಲಭದಲ್ಲಿ ಪತ್ತೆ ಹಚ್ಚಬಲ್ಲರು ಎನ್ನುವ ವಿಚಾರ ತಿಳಿದುಕೊಳ್ಳಿ ಎಂದು ಹೇಳುವುದು ಉಂಟು.

ಸೈಬರ್​ ಕ್ರಿಮಿನಲ್ಸ್​

ಹೀಗೆ ಬಾಲಕೃಷ್ಣ ಅವರು ಸಿನಿಮಾಕ್ಕೆ ತಡಕಾಡಿದಾಗ, ಅವರಿಗೆ ಕಾಲ್​ ಬಂದಿದೆ. ಎಟಿಎಂ ಕಾರ್ಡ್​ ಕಳುಹಿಸಲು ನಿಮ್ಮ ಮನೆಯ ವಿಳಾಸ ಕಳುಹಿಸಿ ಎಂಬ ಕರೆ ಮಾಡಲಾಗಿದೆ. ಆದರೆ ಇದು ನಕಲಿ ಇರಬಹುದು ಎನ್ನುವ ಸಂದೇಹ ಬಾಲಕೃಷ್ಣ ಅವರಿಗೆ ಬಂದಿದ್ದರಿಂದ ಮನೆಯ ವಿಳಾಸ ಶೇರ್​ ಮಾಡಿರಲಿಲ್ಲ. ಆ ಮಟ್ಟಿಗಿನ ಬುದ್ಧಿವಂತಿಕೆಯನ್ನು ಅವರು ತೋರಿಸಿದ್ದರು. ಆದರೆ ಸೈಬರ್​ ಕ್ರಿಮಿನಲ್ಸ್​ ಅಂತಿಂಥ ವ್ಯಕ್ತಿಗಳಲ್ಲ. ಅದಾದ ಕೆಲವು ದಿನಗಳ ಬಳಿಕ, ಬಾಲಕೃಷ್ಣ ಅವರ, ವಾಟ್ಸ್​ಆ್ಯಪ್​ಗೆ ಬಾರ್ಡರ್​-2 ಹೆಸರಿನಲ್ಲಿ ಮೂವಿಯ ಎಪಿಕೆ ಫೈಲ್ (APK File) ಬಂದಿದೆ.

ಖುಷಿ ಬಹುಕಾಲ ಉಳಿದಿಲ್ಲ

ತಾವು ಹುಡುಕುತ್ತಿದ್ದ ಸಿನಿಮಾ ತಾನಾಗಿಯೇ ಬಂದಿದೆ ಎಂದು ಖುಷಿಪಟ್ಟುಕೊಂಡ ಬಾಲಕೃಷ್ಣ ಅವರು ಅದನ್ನು ಡೌನ್​ಲೋಡ್​ ಮಾಡುತ್ತಿದ್ದಂತೆಯೇ, ಸೈಬರ್ ವಂಚಕರು ಬಾಲಕೃಷ್ಣ ಅವರ ಖಾಸಗಿ ಡೇಟಾ ಸುಲಭದಲ್ಲಿ ಕದ್ದು, ಅವರ ಬ್ಯಾಂಕ್ ಖಾತೆಯಿಂದ 56 ಸಾವಿರ ರೂಪಾಯಿಗಳನ್ನು ವರ್ಗಾಯಿಸಿಕೊಂಡಿದ್ದಾರೆ. ಇಷ್ಟು ಹಣ ಹೋದ ಮೇಲೆ ತಾವು ಮೋಸ ಹೋಗಿರುವುದು ಬಾಲಕೃಷ್ಣ ಅವರಿಗೆ ತಿಳಿದಿದ್ದು, ಅವರು ದೂರು ದಾಖಲು ಮಾಡಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ APK ಹೆಸರಿನಲ್ಲಿ ಬಂದ ಫೈಲ್​ಗಳನ್ನು, ಅದು ಸಿನಿಮಾದ್ದೇ ಆಗಿರಲಿ ಅಥವಾ ಇನ್ನಾವುದೇ ಆಗಿರಲಿ ಯಾರೂ ಕ್ಲಿಕ್​ ಮಾಡಬೇಡಿ ಎಂದು ಇದಾಗಲೇ ಸೈಬರ್​ ಪೊಲೀಸರು ಬಾರಿ ಬಾರಿ ಹೇಳುತ್ತಿದ್ದಾರೆ. ಎಸ್​ಎಂಎಸ್​ ಇಲ್ಲವೇ ವಾಟ್ಸ್​ಆ್ಯಪ್​ನಲ್ಲಿ ಎಪಿಕೆ ಎನ್ನುವ ಹೆಸರಿನಲ್ಲಿ ಇರುವ ಫೈಲ್​ ಲಿಂಕ್​ ಬಂದರೆ ಡೌನ್​ಲೋಡ್​ ಮಾಡದೇ ಡಿಲೀಟ್​ ಮಾಡಿ ಎನ್ನುತ್ತಾರೆ.