ಬೆಂಗಳೂರಿನಲ್ಲಿ 20 ವರ್ಷಗಳ ಆಪ್ತ ಗೆಳತಿಯೇ ತನ್ನ ಸ್ನೇಹಿತೆಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಪ್ರಕರಣ ದಾಖಲಾಗಿತ್ತು. ಲತಾ ಮತ್ತು ಆಕೆಯ ಕುಟುಂಬಸ್ಥರು ಪ್ರಿಯಾಂಕ ಅವರಿಂದ ಹಂತ ಹಂತವಾಗಿ 68 ಲಕ್ಷ ರೂ. ಪಡೆದು, 50 ಲಕ್ಷ ರೂ. ಹಿಂತಿರುಗಿಸದೆ ವಂಚಿಸಿದ ಪ್ರಕರಣಕ್ಕೆ ಬಿ ರಿಪೋರ್ಟ್ ದಾಖಲಾಗಿದೆ.
ಬೆಂಗಳೂರು (ನ.23): 20 ವರ್ಷಗಳ ಸ್ನೇಹ ಮತ್ತು ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು, ತನ್ನ ಆಪ್ತ ಗೆಳತಿ ಹಾಗೂ ಆಕೆಯ ಕುಟುಂಬ ಸದಸ್ಯರು ಸೇರಿ ಲಕ್ಷಾಂತರ ರೂಪಾಯಿ ವಂಚಿದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಈ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಲಾಗಿದೆ.. ಜಯನಗರ ನಿವಾಸಿ ಪ್ರಿಯಾಂಕ ಅವರು ತನ್ನ ಸುಮಾರು 20 ವರ್ಷಗಳ ಆಪ್ತ ಸ್ನೇಹಿತೆ ಲತಾ ಮತ್ತು ಆಕೆಯ ತಂದೆ ವೆಂಕಟೇಶ್, ಸಹೋದರ ಹರ್ಷ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
20 ವರ್ಷದ ಗೆಳತಿಯಿಮದಲೇ ಮೋಸ:
ಬಾಲಾಜಿ ಆಟೋ ಮೊಬೈಲ್‌ನಲ್ಲಿ ಪಾಲುದಾರರಾಗಿರುವ ಲತಾ ತನಗೆ ವೈಯಕ್ತಿಕ ಕಷ್ಟವಿದೆ ಎಂದು ಹೇಳಿ 2012ರಿಂದ 2014ರ ಅವಧಿಯಲ್ಲಿ ಸ್ನೇಹಿತೆ ಪ್ರಿಯಾಂಕಾಳಿಂದ ಸಾಲದ ರೂಪದಲ್ಲಿ ಬರೋಬ್ಬರಿ 35 ಲಕ್ಷ ರೂಪಾಯಿ ಹಣ್ನಪಡೆದಿದ್ದರು. ಇದಾದ ನಂತರ 2017ರಲ್ಲಿ ಮತ್ತೆ 32 ಲಕ್ಷ ರೂಪಾಯಿಯನ್ನು ಲತಾ ಮತ್ತು ಅವರ ತಂದೆ ವೆಂಕಟೇಶ್ ಸಾಲದ ರೂಪದಲ್ಲಿ ಪಡೆದಿದ್ದರು. ಅಷ್ಟೇ ಅಲ್ಲದೆ, ರಿಯಲ್ ಎಸ್ಟೇಟ್ ನಡೆಸುತ್ತಿದ್ದ ಲತಾ ಸಹೋದರ ಹರ್ಷ ಎಂಬುವವರೂ ತುರ್ತಾಗಿ ಹಣದ ಅವಶ್ಯಕತೆ ಇದೆ ಎಂದು ಹೇಳಿ ಹಂತ ಹಂತವಾಗಿ ಪ್ರಿಯಾಂಕ ಅವರಿಂದ ಒಂದೂವರೆ ಲಕ್ಷ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದರು.
68 ಲಕ್ಷ ಪಡೆದು 17 ಲಕ್ಷ ರೂ. ವಾಪಸ್!
ಇಷ್ಟಾದರೂ ಲತಾ ಮೇಲೆ ಎಳ್ಳಷ್ಟೂ ಅನುಮಾನ ಅಪನಂಬಿಕೆ ಪ್ರಿಯಾಂಕಾಗೆ ಬಂದಿರಲಿಲ್ಲ, ಸುದೀರ್ಘ ವರ್ಷದ ಸ್ನೇಹ ಇದಕ್ಕೆ ಕಾರಣ. ವಂಚಕಿ ಲತಾ ಕುಟುಂಬಸ್ಥರು ಹಣ ಕೇಳಿದಾಗಲೆಲ್ಲ ಪ್ರಿಯಾಂಕ ತಮ್ಮ ತಾಯಿ ಮತ್ತು ಸಂಬಂಧಿಕರಿಂದ ಹಣ ಪಡೆದು ಈ ಆರೋಪಿಗಳಿಗೆ ನೀಡಿದ್ದರು ಎನ್ನಲಾಗಿದೆ.
ಆರೋಪಿಗಳು ಒಟ್ಟು 68 ಲಕ್ಷ ರೂಪಾಯಿಗೂ ಹೆಚ್ಚು ಪಡೆದಿದ್ದು, ಬಳಿಕ ಅದರಲ್ಲಿ ಕೇವಲ 17 ಲಕ್ಷ ಹಣವನ್ನು ಮಾತ್ರ ವಾಪಸ್ ನೀಡಿದ್ದರು. ಉಳಿದ 50 ಲಕ್ಷ ರೂಪಾಯಿ ಹಣವನ್ನು ಹಿಂದಿರುಗಿಸುವುದಾಗಿ ನಂಬಿಸಿ ವಂಚಿಸಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದರು.
ಹಣ ವಾಪಸ್ ನೀಡಲು ಕೊಟ್ಟಿದ್ದ ಚೆಕ್‌ಗಳು ಸಹ ಬೌನ್ಸ್ ಆಗಿದ್ದವು. ಬಳಿಕ ನೆಲಮಂಗಲ ಸೇರಿ ಹಲವು ಕಡೆ ಸೈಟ್ ಇವೆ. ಅವನ್ನು ನೀಡುವುದಾಗಿಯೂ ನಂಬಿಸಿ ಮೋಸ ಮಾಡಿದ್ದಾರೆ. ಪ್ರಿಯಾಂಕ ಅವರು ಹಣ ಕೇಳಲು ಆರೋಪಿಗಳ ಮನೆ ಬಳಿ ಹೋದಾಗ, ಕೈ ಕಾಲು ಮುರಿಯುವುದಾಗಿ ಬೆದರಿಸಿದ್ದರೆಂದೂ ದೂರಿನಲ್ಲಿ ಆರೋಪಿಸಲಾಗಿತ್ತು. ನಂತರ 2024ರ ಮೇನಲ್ಲಿ ಪ್ರಿಯಾಂಕ ಅವರ ದೂರಿನನ್ವಯ ಲತಾ, ವೆಂಕಟೇಶ್ ಹಾಗೂ ಹರ್ಷ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಮುಂದುವರೆಸಿದ್ದರು. ಆದರೀಗ ಸೂಕ್ತ ಸಾಕ್ಷ್ಯವಿಲ್ಲವೆಂದು ಹೇಳಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ.


