Kalaburagi 9 year old murder case: ಒಂಬತ್ತು ವರ್ಷಗಳ ಹಿಂದೆ ನಡೆದಿದ್ದ ಪತಿಯ ಸಾವಿನ ರಹಸ್ಯ ಬಯಲಾಗಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪತ್ನಿಯೇ ಸುಪಾರಿ ಕೊಟ್ಟು ಕೊಲ್ಲಿಸಿದ್ದು, ಹಣಕ್ಕಾಗಿ ಹಂತಕ ಮಾಡಿದ ಫೋನ್ ಕರೆ ಆಡಿಯೋ ವೈರಲ್ ಬಳಿಕ ಪೊಲೀಸರು ಪತ್ನಿ ಸೇರಿ ಐವರ ಬಂಧಿಸಿದ್ದಾರೆ.
ಕಲಬುರಗಿ (ನ.22): 'ಪಾಪದ ಕೆಲಸ ಮಾಡಿದ್ರೆ ಪಾತಾಳ ಸೇರಿದ್ರೂ ಕರ್ಮ ಬಿಡಲ್ಲ' ಎಂಬ ಮಾತು ಕಲಬುರಗಿಯಲ್ಲಿ ಅಕ್ಷರಶಃ ನಿಜವಾಗಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಸುಪಾರಿ ಕೊಟ್ಟು ಕೊಲ್ಲಿಸಿ, ಅದು ಸಹಜ ಸಾವು ಎಂದು ಬಿಂಬಿಸಿ ಕಳೆದ ಒಂಬತ್ತು ವರ್ಷಗಳಿಂದ ನಾಟಕವಾಡುತ್ತಿದ್ದ ಪತ್ನಿ ಮತ್ತು ಹಂತಕರು ಕೊನೆಗೂ ಸಿಕ್ಕಿಬಿದ್ದಿದ್ದಾರೆ.
9 ವರ್ಷಗಳ ಹಿಂದೆ ನಡೆದಿದ್ದೇನು?
ಕಲಬುರಗಿ ತಾಲೂಕಿನ ಕಣ್ಣಿ ಗ್ರಾಮದ ನಿವಾಸಿ ಭೀರಪ್ಪ ಪೂಜಾರಿ ಒಂಬತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆ ಸಮಯದಲ್ಲಿ ಭೀರಪ್ಪ ಅವರದ್ದು ಸಹಜ ಸಾವು ಎಂದೇ ಎಲ್ಲರೂ ಭಾವಿಸಿದ್ದರು. ಸ್ವತಃ ಪತ್ನಿ ಶಾಂತಾಬಾಯಿ ಮತ್ತು ಕುಟುಂಬಸ್ಥರು ಸೇರಿ ದುಃಖಿತರಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಯಾರಿಗೂ ಸಣ್ಣ ಅನುಮಾನವೂ ಬಂದಿರಲಿಲ್ಲ.
ಸುಪಾರಿ ಹಂತಕರ ಸೀಕ್ರೆಟ್:
ಅಸಲಿಗೆ ಇದು ಸಹಜ ಸಾವಾಗಿರಲಿಲ್ಲ. ಭೀರಪ್ಪ ಪೂಜಾರಿ ಅವರ ಪತ್ನಿ ಶಾಂತಾಬಾಯಿ ಅನ್ಯ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಇದಕ್ಕೆ ಗಂಡ ಅಡ್ಡಿಯಾಗುತ್ತಿದ್ದಾನೆ ಎಂದು ತಿಳಿದು, ಆತನನ್ನು ಮುಗಿಸಲು ನಿರ್ಧರಿಸಿದ್ದಳು. ಇದಕ್ಕಾಗಿ ಹಂತಕರಿಗೆ ಹಣದ ಆಮಿಷವೊಡ್ಡಿ ಗಂಡನ ಕೊಲೆ ಮಾಡಿಸಿದ್ದಳು. ಕೃತ್ಯ ನಡೆದ ನಂತರ ಹಂತಕರು ಕಳೆದ 9 ವರ್ಷಗಳಿಂದ ಯಾರಿಗೂ ಅನುಮಾನ ಬಾರದಂತೆ ಅದೇ ಗ್ರಾಮದಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದರು.
ಮರ್ಡರ್ ಮಿಸ್ಟರಿ ಬಯಲಾಗಿದ್ದು ಹೇಗೆ?
ಎಲ್ಲವೂ ಗುಪ್ತವಾಗಿ ನಡೆದಿತ್ತು. ಆದರೆ ಇತ್ತೀಚೆಗೆ ವೈರಲ್ ಆದ ಒಂದೇ ಒಂದು ಫೋನ್ ಕಾಲ್ ಆಡಿಯೋ ಇಡೀ ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ.
ಆರೋಪಿಗಳಲ್ಲಿ ಒಬ್ಬನಾದ ಮಹೇಶ ಎಂಬಾತ ಮೃತ ಭೀರಪ್ಪನ ಪತ್ನಿ ಶಾಂತಾಬಾಯಿಗೆ ಕರೆ ಮಾಡಿದ್ದ. 'ಕೊಲೆ ಮಾಡುವಾಗ 1.5 ಲಕ್ಷ ರೂಪಾಯಿ ಕೊಡೋದಾಗಿ ಹೇಳಿದ್ದೆ. ಈಗ ಕನಿಷ್ಠ 80 ಸಾವಿರ ರೂಪಾಯಿಯನ್ನಾದ್ರೂ ಕೊಡು' ಎಂದು ಆತ ಬೇಡಿಕೆ ಇಟ್ಟಿದ್ದ. ಈ ಆಡಿಯೋ ಲೀಕ್ ಆಗಿ ವೈರಲ್ ಆಗುತ್ತಿದ್ದಂತೆ, 9 ವರ್ಷಗಳ ಹಳೆಯ ಗೋರಿ ಕಥೆ ಬಟಾಬಯಲಾಗಿದೆ.
ಆಡಿಯೋ ಬೆನ್ನತ್ತಿದ 'ಖಾಕಿ':
ವೈರಲ್ ಆಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಫರಹತಾಬಾದ್ ಠಾಣಾ ಪೊಲೀಸರು ತನಿಖೆ ಆರಂಭಿಸಿದರು. ಆಡಿಯೋದಲ್ಲಿರುವ ದನಿ ಮತ್ತು ವಿವರಗಳನ್ನು ಆಧರಿಸಿ ವಿಚಾರಣೆ ನಡೆಸಿದಾಗ ಶಾಂತಾಬಾಯಿ ಬಾಯ್ಬಿಟ್ಟಿದ್ದಾಳೆ. ತಾನೇ ಸುಪಾರಿ ನೀಡಿ ಗಂಡನನ್ನು ಕೊಲ್ಲಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಐವರು ಆರೋಪಿಗಳು ಅರೆಸ್ಟ್:
ಪ್ರಕರಣ ಭೇದಿಸಿದ ಪೊಲೀಸರು ಮೃತನ ಪತ್ನಿ ಶಾಂತಾಬಾಯಿ ಹಾಗೂ ಸುಪಾರಿ ಹಂತಕರಾದ ಜೆಸಿಬಿ ಸಿದ್ದು, ಮಹೇಶ್, ಸುರೇಶ್ ಮತ್ತು ಶಂಕರ್ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. 9 ವರ್ಷಗಳಿಂದ ಕಾನೂನಿನ ಕಣ್ಣಿಗೆ ಮಣ್ಣೆರಚಿ ಆರಾಮಾಗಿದ್ದ ಹಂತಕರು ಇದೀಗ ಕಲಬುರಗಿ ಸೆಂಟ್ರಲ್ ಜೈಲು ಸೇರಿದ್ದಾರೆ.


