Kengeri police arrest brothers: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಪ್ರಯಾಣಿಕರ ಮೊಬೈಲ್ ಕದಿಯುತ್ತಿದ್ದ ಅಣ್ಣತಮ್ಮಂದಿರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಬಸ್ ಹತ್ತುವ ವೇಳೆ ನೂಕುನುಗ್ಗಲು ಸೃಷ್ಟಿಸಿ ಮೊಬೈಲ್ ಕದ್ದು, ನಂತರ ಮಾಲೀಕರ ದಿಕ್ಕು ತಪ್ಪಿಸಿ ಪರಾರಿಯಾಗುತ್ತಿದ್ದರು.
ಬೆಂಗಳೂರು (ಡಿ.2): ರಾಜಧಾನಿ ಬೆಂಗಳೂರಿನಲ್ಲಿ ಕಳ್ಳತನವನ್ನೇ ತಮ್ಮ ಕುಲ ಕಸುಬಾಗಿ ಮಾಡಿಕೊಂಡಿದ್ದ ಐನಾತಿ ಅಣ್ಣತಮ್ಮಂದಿರನ್ನು ಕೆಂಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಗೇಪಲ್ಲಿ ಮೂಲದವರಾದ ಈ ಕಳ್ಳ ಸಹೋದರರು ಒಂದೇ ತಾಯಿಯ ಮಕ್ಕಳಾಗಿದ್ದು, ಜೊತೆಜೊತೆಯಲ್ಲೇ ಕಳ್ಳತನ ಮಾಡುತ್ತಿದ್ದರು. ಇವರು ಹೆಚ್ಚಾಗಿ ಜನ ನಿಲ್ಲುವ ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ಖದೀಮ ಸಹೋದರರು ಕಳ್ಳತನ ಮಾಡುತ್ತಿದ್ದರು.
ಅಣ್ಣ ಮೊಬೈಲ್ ಎಗರಿಸಿದ್ರೆ ಕ್ಷಣಾರ್ಧದಲ್ಲಿ ತಮ್ಮ ಬ್ಯಾಗ್‌ಗೆ:
ಬಸ್ ಹತ್ತುವಾಗ ಅಣ್ಣ ನೂಕುನುಗ್ಗಲಿನಲ್ಲಿ ಜನರ ಜೇಬಿಗೆ ಕೈಹಾಕಿ ಮೊಬೈಲ್ ಕಳವು ಮಾಡಿದರೆ, ತಮ್ಮ ಅದನ್ನು ಕ್ಷಣಾರ್ಧದಲ್ಲಿ ಬ್ಯಾಗ್‌ಗೆ ಹಾಕಿಕೊಳ್ಳುತ್ತಿದ್ದ. ನಂತರ ಈ ಸಹೋದರರು ನಡೆಸುತ್ತಿದ್ದ ನಾಟಕ ಎಲ್ಲರನ್ನು ಅಚ್ಚರಿಗೊಳಿಸಿದೆ. ಮೊಬೈಲ್ ಕಳುವಾದ ವಿಷಯ ಮಾಲೀಕರ ಅರಿವಿಗೆ ಬಾರದಿದ್ದರೂ, ಕಳ್ಳರಲ್ಲಿ ಒಬ್ಬ ಸಭ್ಯಸ್ಥನಂತೆ ನಟಿಸಿ, 'ನಿಮ್ಮ ಮೊಬೈಲ್ ಕಳುವಾಯ್ತು ನೋಡಿ! ಎಂದು ಹೇಳುತ್ತಿದ್ದ. ನಂತರ, ಕಳ್ಳ ಆ ಕಡೆ ಹೋಗುತ್ತಿದ್ದಾನೆ ಎಂದು ಮಾಲೀಕರನ್ನು ಅನುಮಾನ ಬರದಂತೆ ಬೇರೆ ದಿಕ್ಕಿಗೆ ಡೈವರ್ಟ್ ಮಾಡಿ, ಅದೇ ಬಸ್ಸಿನಲ್ಲಿ ಮುಂದಿನ ನಿಲ್ದಾಣದಲ್ಲಿ ಇಳಿದು ಎಸ್ಕೇಪ್ ಆಗುತ್ತಿದ್ದರು.
ಕೈಚಳಕ ತೋರಿದ ಪ್ರದೇಶಗಳು:
ಕೆಂಗೇರಿ, ಎಲೆಕ್ಟ್ರಾನಿಕ್ ಸಿಟಿ, ಬಾಗಲೂರು ಸೇರಿದಂತೆ ನಗರದ ಹಲವೆಡೆ ಬಿಎಂಟಿಸಿ ಬಸ್ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಈ ಸಹೋದರರು ಕೈಚಳಕ ತೋರಿಸುತ್ತಿದ್ದರು. ಸದ್ಯ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಇಬ್ಬರು ಖತರ್ನಾಕ್ ಕಳ್ಳ ಅಣ್ಣತಮ್ಮಂದಿರನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.


