ರಾಯಚೂರಿನಲ್ಲಿ ಬೀದಿಬದಿ ಡ್ರೈ ಫ್ರೂಟ್ಸ್ ವ್ಯಾಪಾರಿ ಇಮಾಮ್ ಹುಸೇನ್‌ನನ್ನು ನಾಲ್ವರು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾರೆ. ಈ ದಾಳಿಯಲ್ಲಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆರೋಪಿಗಳು ಪರಾರಿಯಾಗುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. 

ರಾಯಚೂರು(ಡಿ.19): ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಮಧ್ಯರಾತ್ರಿ ಭೀಕರ ಹತ್ಯೆ ನಡೆದಿದ್ದು, ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ನಗರದ ರೇಡಿಯೋ ಸ್ಟೇಷನ್ ಸಮೀಪ ನಾಲ್ವರು ದುಷ್ಕರ್ಮಿಗಳ ಗ್ಯಾಂಗ್ ಬೀದಿಬದಿ ವ್ಯಾಪಾರಿಯ ಮೇಲೆ ಮಾರಣಾಂತಿಕ ದಾಳಿ ನಡೆಸಿ, ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದೆ. ಹತ್ಯೆಯಾದ ಯುವಕನನ್ನು ಆಂಧ್ರಪ್ರದೇಶದ ಕಡಪ ಮೂಲದ ಇಮಾಮ್ ಹುಸೇನ್ (24) ಎಂದು ಗುರುತಿಸಲಾಗಿದೆ.

ಡ್ರೈ ಫುಡ್ಸ್ ಮಾರಾಟಗಾರನ ಮೇಲೆ ಮುಗಿಬಿದ್ದ ಗ್ಯಾಂಗ್

ಮೃತ ಇಮಾಮ್ ಹುಸೇನ್ ಕಳೆದ 15 ದಿನಗಳಿಂದ ರಾಯಚೂರಿನಲ್ಲಿ ಬೀದಿಬದಿಯಲ್ಲಿ ಡ್ರೈ ಫುಡ್ಸ್ (ಒಣ ಹಣ್ಣುಗಳು) ಮಾರಾಟ ಮಾಡಿಕೊಂಡಿದ್ದನು. ತಡರಾತ್ರಿ ಏಕಾಏಕಿ ನುಗ್ಗಿದ ನಾಲ್ವರು ಕಿರಾತಕರು ಇಬ್ಬರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡ ಮತ್ತೊಬ್ಬನನ್ನು ಚಿಕಿತ್ಸೆಗಾಗಿ ಸ್ಥಳೀಯ ರಿಮ್ಸ್ (RIMS) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಆರೋಪಿಗಳು ಓಡುವ ದೃಶ್ಯ ಸೆರೆಹಿಡಿದ ಸವಾರರು

ಇಮಾಮ್ ಹುಸೇನ್‌ನನ್ನು ಬರ್ಬರವಾಗಿ ಕೊಲೆ ಮಾಡಿದ ಬಳಿಕ ಆರೋಪಿಗಳು ರಸ್ತೆಯಲ್ಲಿ ಓಡುತ್ತಾ ಪರಾರಿಯಾಗಿದ್ದಾರೆ. ಕಿರಾತಕರು ಕೃತ್ಯ ಎಸಗಿ ಪರಾರಿಯಾಗುತ್ತಿರುವ ದೃಶ್ಯವನ್ನು ಅದೇ ಮಾರ್ಗದಲ್ಲಿ ಸಾಗುತ್ತಿದ್ದ ವಾಹನ ಸವಾರರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಸದ್ಯ ತನಿಖೆಯಲ್ಲಿ ಮಹತ್ವದ ಸುಳಿವು ನೀಡುವ ಸಾಧ್ಯತೆಯಿದೆ.

ಸ್ಥಳಕ್ಕೆ ಎಸ್ಪಿ ಭೇಟಿ;

ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಸದರ್ ಬಜಾರ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಎಂ. ಪುಟ್ಟಮಾದಯ್ಯ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಕೊಲೆಗೆ ನಿಖರವಾದ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.